ಮೈಸೂರು, ನ. 26– ಯಾರಿಂದಲೂ ಜೆಡಿಎಸ್ ಖರೀದಿ ಮಾಡಲು ಆಗಲ್ಲ. ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿ ಇರಬೇಡಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷ ಮುಳುಗಿತು ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಹಿಂದೆಯೂ ಪಕ್ಷ ನಿರ್ನಾಮ ಮಾಡುತ್ತೇವೆ ಎಂದು ಕೆಲವರು ಹೇಳಿದ್ದರು. ಗ್ಯಾರಂಟಿ ಯೋಜನೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರದ ಅವ್ಯವಹಾರ ಮುಚ್ಚಿ ಹೋಗಿವೆ ಎಂದು ಆರೋಪಿಸಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡರು ರಾಜಕೀಯ ಬಿಟ್ಟು ಬಿಡಬೇಕೆಂದು ಹೇಳಿದರೆ, ನಾನು ನಾಳೆಯೇ ಸಾರ್ವಜನಿಕ ಜೀವನದಿಂದ ದೂರ ಇರುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ನಾವು ಏನಾದರೂ ತಪ್ಪು ಮಾಡಿದ್ದರೆ, ಪಕ್ಷದ ವೇದಿಕೆಯಲ್ಲಿ ಕರೆದು ಕಪಾಳಕ್ಕೆ ಹೊಡೆಯಿರಿ. ಆದರೆ, ಸಾರ್ವಜನಿಕವಾಗಿ ಅವಮಾನ ಮಾಡಬೇಡಿ ಎಂದರು.ನನಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ನನಗೆ ಇನ್ನು ಯಾವ ಆಸೆಯೂ ಇಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣಾ ಪ್ರಚಾರಕ್ಕೆ ಕರೆಯಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಜಿ.ಟಿ.ದೇವೇಗೌಡರ ಆಪ್ತ ಸಹಾಯಕರಿಗೆೆ ಕರೆ ಮಾಡಿದ್ದರು. ಇದನ್ನು ಎಚ್.ಡಿ. ದೇವೇಗೌಡರೇ ಹೇಳುತ್ತಾರೆ ಎಂದು ಅವರು ಹೇಳಿದರು.
ಕರೆಯ ವಿವರ ಬೇಕಾದರೆ ಕೊಡುತ್ತೇವೆ. ಮಾಜಿ ಪ್ರಧಾನಿಗಳ ಮೊಬೈಲ್ ನಿಂದ ಹೋಗಿರುವ ಕರೆ ಅದು. ನನಗೆ ಸುಳ್ಳು ಹೇಳುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.ನನ್ನ ಮೇಲೆ ಜಿಟಿಡಿ ಗೂಬೆ ಕೂರಿಸುವುದನ್ನು ನಿಲ್ಲಿಸಲಿ. ಮುಂದೆ ಇದೇ ರೀತಿ ಅವರು ಮಾತು ಮುಂದುವರಿಸಿದರೆ ನನ್ನ ಮಾತಿನ ವರಸೆ ಬದಲಾಗುತ್ತದೆ ಎಂದು ಸಾರಾ ಮಹೇಶ್ ಮಾರ್ಮಿಕವಾಗಿ ನುಡಿದರು.
ನಾನು ಯಾವತ್ತೂ ನಾನೇ ಮೈಸೂರಿನ ಸ್ಥಳೀಯ ಸಂಸ್ಥೆಗಳಿಗೆ ಬಿ ಫಾರಂ ಕೊಡುತ್ತೇನೆ ಎಂದು ಹೇಳಿಲ್ಲ. ನನ್ನ ಸೋಲಿನ ಬಗ್ಗೆ ಜಿಟಿಡಿ ಮಾತಾಡುತ್ತಾರೆ. ಜಿ.ಟಿ.ದೇವೇಗೌಡರು ಚುನಾವಣೆಯಲ್ಲಿ ಸೋತಿಲ್ವಾ? ಎಂದು ಪ್ರಶ್ನಿಸಿದ ಅವರು, 2008ರಲ್ಲಿ ಜಿಟಿಡಿ ಏಕೆ ಬಿಜೆಪಿ ಹೋಗಿದ್ದರು? ನಾನು ಶಾಸಕ ಅಲ್ಲ. ನನ್ನನ್ನು ಕೇಳಿ ಕೇಂದ್ರ ಸಚಿವ ಕುಮಾರಸ್ವಾಮಿ ಯಾರನ್ನಾದರೂ ಶಾಸಕಾಂಗ ಪಕ್ಷದ ನಾಯಕರನ್ನು ನೇಮಕ ಮಾಡುತ್ತಾರಾ? ನಾನು ಹೇಗೆ ನಿಮಗೆ ಆ ಸ್ಥಾನ ತಪ್ಪಿಸಲಿ? ಎಂದು ಅವರು ಪ್ರಶ್ನಿಸಿದರು.
ನಾನು ಜೆಡಿಎಸ್ನಲ್ಲಿ ಇರುವುದು ಜಿ.ಟಿ.ದೇವೇಗೌಡರಿಗೆ ಇಷ್ಟ ಇಲ್ಲವೆಂದರೆ ನಾನೇ ಪಕ್ಷದಿಂದ ದೂರ ಇರುತ್ತೇನೆ. ಸಾಯುವ ತನಕ ಪಕ್ಷಕ್ಕೆ ಮತ ಹಾಕುತ್ತೇನೆ. ಬಹಳಷ್ಟು ನಾಯಕರು ಜೆಡಿಎಸ್ ಬಗ್ಗೆ ಮಾತಾಡುತ್ತಿದ್ದಾರೆ. ಚುನಾವಣೆ ತಯಾರಿ ಸರಿ ಇಲ್ಲದ ಕಾರಣ ಚನ್ನಪಟ್ಟಣದಲ್ಲಿ ಸೋಲಾಗಿದೆ. ಅಲ್ಲದೆ ಅನಿವಾರ್ಯ ಪರಿಸ್ಥಿತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಈ ಉಪ ಚುನಾವಣೆ ಅಭ್ಯರ್ಥಿಯಾದರು ಎಂದು ಅವರು ತಿಳಿಸಿದರು.