Thursday, December 5, 2024
Homeರಾಜಕೀಯ | Politicsಬಿಜೆಪಿ ಬಂಡಾಯ ನಾಯಕರ ವಿರುದ್ಧ ವರಿಷ್ಠರಿಗೆ ದೂರು

ಬಿಜೆಪಿ ಬಂಡಾಯ ನಾಯಕರ ವಿರುದ್ಧ ವರಿಷ್ಠರಿಗೆ ದೂರು

BJP complains to high command against Rebel Leaders

ಬೆಂಗಳೂರು,ನ.26– ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕವು ರಾಜ್ಯ ಪದಾಧಿಕಾರಿಗಳ ಬದಲಾವಣೆ ಹಾಗೂ ಬಂಡಾಯ ನಾಯಕರನ್ನು ನಿಯಂತ್ರಿಸುವ ಕುರಿತು ಹೈಕಮಾಂಡ್ಗೆ ಮನವಿ ಸಲ್ಲಿಸಲು ಮುಂದಾಗಿದೆ.

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಈ ಸೋಲಿಗೆ ಒಳಜಗಳ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಡಿಸೆಂಬರ್ನಲ್ಲಿ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ತೀವ್ರ ಟೀಕೆ ನಡೆಸುತ್ತಿದ್ದು, ಈ ಕುರಿತು ವಿಜಯೇಂದ್ರ ಅವರು ಕೇಂದ್ರ ನಾಯಕರಿಗೆ ದೂರು ನೀಡಲು ಮುಂದಾಗಿದ್ದಾರೆ.

ಉಪಸಮರದ ಬೆನ್ನಲ್ಲೇ ವಿಜಯೇಂದ್ರ ರಾಜೀನಾಮೆಗೆ ಯತ್ನಾಳ್ ಮಾಡಿರುವ ಆಗ್ರಹ, ವಕ್‌್ಫ ಬಗ್ಗೆ ಯತ್ನಾಳ್ ಬಣ ನಡೆಸುತ್ತಿರುವ ಅಭಿಯಾನ ವಿಜಯೇಂದ್ರ ಬಣವನ್ನು ತೀವ್ರವಾಗಿ ಕೆರಳಿಸಿದೆ. ಜೊತೆಗೆ ಪಕ್ಷ ವಿರೋಧಿ ಚಟುವಟಿಕೆಯನ್ನು ಹೆಚ್ಚಿಸುತ್ತಿರುವುದರಿಂದ ಅವರನ್ನು ಹಣಿಯುವುದಕ್ಕಾಗಿ ವಿಜಯೇಂದ್ರ ವರಿಷ್ಠರ ಭೇಟಿಗೆ ನಿರ್ಧರಿಸಿದ್ದಾರೆ.

ಡಿಸೆಂಬರ್ನಲ್ಲಿ ಬಿಜೆಪಿಯ ಸಂಘಟನ ಪರ್ವ ಮುಕ್ತಾಯಗೊಳ್ಳುತ್ತದೆ. ಸಂಸತ್ ಹಾಗೂ ವಿಧಾನ ಮಂಡಲದ ಅಧಿವೇಶನವೂ ಸಮಾಪನಗೊಳ್ಳುತ್ತದೆ. ಹೀಗಾಗಿ ಡಿಸೆಂಬರ್ ಕೊನೆಯ ವಾರ ದೆಹಲಿ ತೆರಳಲು ನಿರ್ಧರಿಸಿದ್ದು, ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಆಗ್ರಹಿಸಲಿದ್ದಾರೆ.

ಇದರಂತೆ ಮುಂದಿನ ತಿಂಗಳು ಪಕ್ಷದ ಪದಾಧಿಕಾರಿಗಳ ಬದಲಾವಣೆ ಸೇರಿದಂತೆ ಕೆಲವರ ವಿರುದ್ದ ಶಿಸ್ತು ಕ್ರಮವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ವಿವರಿಸಿವೆ.
ಇತ್ತೀಚೆಗಷ್ಟೇ ನಡೆದ ಉಪಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಪಾಲುದಾರ ಜೆಡಿಎಸ್ ಸೋಲನುಭವಿಸಿದ್ದರೆ, ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ.

2023ರಲ್ಲಿ ಶಿಗ್ಗಾಂವಿಯಿಂದ ಬಿಜೆಪಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮಾಯಿ ಚುನಾಯಿತರಾಗಿದ್ದರು. ಸೀಟು ಉಳಿಸಿಕೊಳ್ಳುವ ಸಂಪೂರ್ಣ ವಿಶ್ವಾಸದಲ್ಲಿದ್ದ ಬಿಜೆಪಿಗೆ ಉಪಚುನಾವಮೆ ಸೋಲು ದೊಡ್ಡ ಆಘಾತ ನೀಡಿದೆ.

ತಲೆನೋವಾದ ಯತ್ನಾಳ್: ರಾಜ್ಯ ಬಿಜೆಪಿ ನಾಯಕತ್ವಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಲೆನೋವಾಗಿ ಪರಿಣಮಿಸಿದ್ದಾರೆ. ಪಕ್ಷದ ಚೌಕಟ್ಟಿನೊಳಗಿರದ ಯತ್ನಾಳ್ ತನ್ನದೇ ರೀತಿಯಲ್ಲಿ ಹೆಜ್ಜೆ ಇಡುವ ಮೂಲಕ ಕ್ಷಣ ಕ್ಷಣಕ್ಕೂ ಬಿಜೆಪಿ ನಾಯಕತ್ವಕ್ಕೆ ಸವಾಲು ಒಡ್ಡುತ್ತಿದ್ದಾರೆ.
ಈ ಬಗ್ಗೆ ವರಿಷ್ಠರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಆದ ಸಂದರ್ಭದಿಂದ ಯತ್ನಾಳ್ ಆ ಕುಟುಂಬದ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದಾರೆ.

ಇದೀಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ವಿರುದ್ಧವೂ ಅವರು ತಮ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಯತ್ನಾಳ್ ಟೀಂ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸವಾಲಾಗಿ ಪರಿಣಮಿಸುತ್ತಿದೆ.

ವಕ್‌್ಫ ವಿರುದ್ಧ ರಾಜ್ಯ ಬಿಜೆಪಿ ನಾಯಕತ್ವ 3 ತಂಡಗಳ ಮೂಲಕ ಹೋರಾಟಕ್ಕೆ ಕರೆ ನೀಡಿದೆ. ಆದರೆ ಭಿನ್ನಮತೀಯರ ತಂಡದ ಮೂಲಕ ಯತ್ನಾಳ್ ಪ್ರತ್ಯೇಕ ಹೋರಾಟ ಹಮಿಕೊಂಡಿದ್ದಾರೆ. ಬೀದರ್ನಿಂದ ಈ ಹೋರಾಟಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಆದರೆ ಬಿಜೆಪಿ ಬೀದರ್ ಜಿಲ್ಲೆಯ ಶಾಸಕರು ಈ ಹೋರಾಟದಲ್ಲಿ ಭಾಗಿಯಾಗಿಲ್ಲ. ಬದಲಾಗಿ ಯತ್ನಾಳ್ ತಂಡ ಅಳವಡಿಸಿದ್ದ ಫ್ಲೆಕ್‌್ಸ ವಿರುದ್ಧ ಸ್ಥಳೀಯ ಬಿಜೆಪಿಗರೇ ದೂರು ನೀಡಿದ್ದಾರೆ.

ವಕ್‌್ಫ ವಿರುದ್ಧ ಯತ್ನಾಳ್ ತಂಡ ಜನಜಾಗೃತಿ ಸಭೆ ಹಮಿಕೊಂಡಿದ್ದರೂ ಇದರ ಅಸಲಿ ಟಾರ್ಗೆಟ್ ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜನ ಜಾಗೃತಿ ಸಭೆಯಲ್ಲಿ ವಕ್‌್ಫ ವಿವಾದ ಚರ್ಚೆ ಆಗುವುದಕ್ಕಿಂತ ಹೆಚ್ಚಾಗಿ ಬಿಜೆಪಿಯಲ್ಲಿರುವ ಬಣ ಗುದ್ದಾಟವೇ ಮುನ್ನಲೆಗೆ ಬರುತ್ತಿದೆ.
ವಕ್‌್ಫ ಹೋರಾಟಕ್ಕೂ ಬಿಜೆಪಿಗೂ ಸಂಬಂಧ ಇಲ್ಲ. ಬಿಜೆಪಿಯ ಹೆಸರಿನಲ್ಲಿ ಅನಾಮಿಕರು ಹೋರಾಟ ನಡೆಸುತ್ತಿದ್ದಾರೆ ಎಂದು ವಿಜಯೇಂದ್ರ ಬಣ ಆಕ್ಷೇಪ ಎತ್ತುತ್ತಿದೆ. ಯತ್ನಾಳ್ ತಂಡದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವರಿಷ್ಠರಿಗೆ ದೂರು ನೀಡಿದ್ದಾರೆ.

ದೆಹಲಿಗೆ ತೆರಳಿ ರಾಜ್ಯದಲ್ಲಿ ನಡೆಯುತ್ತಿರುವ ಭಿನ್ನಮತೀಯ ಬೆಳವಣಿಗೆಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಹಾಗಿದ್ದರೂ ಈ ಬಾರಿ ವರಿಷ್ಠರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ.
ಕಾರ್ಯಕರ್ತರಲ್ಲಿ ಗೊಂದಲ: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಬಿಜೆಪಿಯಲ್ಲಿರುವ ಬಣ ತಿಕ್ಕಾಟದಿಂದ ಕಾರ್ಯಕರ್ತರೂ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಇದು ಪಕ್ಷದ ಸಂಘಟನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

RELATED ARTICLES

Latest News