ಬೆಂಗಳೂರು,ನ.30- ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರುತ್ತಿರುವ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನವದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿರುವ ವಿಜಯೇಂದ್ರ, ರಾಜ್ಯ ಬಿಜೆಪಿಯೊಳಗಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಮನವಿ ಮಾಡಲಿದ್ದಾರೆ.
ಶುಕ್ರವಾರ ಸಂಜೆಯೇ ನವದೆಹಲಿಗೆ ತೆರಳಿರುವ ವಿಜಯೇಂದ್ರ ಯಾವುದೇ ಕ್ಷಣದಲ್ಲಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವರೆಂದು ಪಕ್ಷದ ಮೂಲಗಳು ತಿಳಿಸಿವೆ.
ವಕ್‌್ಫ ನೋಟೀಸ್ ವಿರುದ್ಧ ಪಕ್ಷದ ಅನುಮತಿ ಪಡೆಯದೆ ಜನಜಾಗೃತಿ ಅಭಿಯಾನ ನಡೆಸುತ್ತಿರುವ ಯತ್ನಾಳ್ ಪಕ್ಷಕ್ಕೆ ವಂಚಿಸುತ್ತಿದ್ದಾರೆ. ಕೂಡಲೇ ಅವರಿಗೆ ಕಡಿವಾಣ ಹಾಕುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಜನಜಾಗೃತಿ ಅಭಿಯಾನದ ವೇಳೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ದ ಮಾತನಾಡುವ ಬದಲು ನಮ ಕುಟುಂಬದ ವಿರುದ್ಧ ಟೀಕೆ ಮಾಡುತ್ತಾ ಪಕ್ಷಕ್ಕೆ ಮುಜುಗರ ಸೃಷ್ಟಿಸುತ್ತಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್‌ಗೆ ಆಹಾರವಾಗಿ ಪರಿಣಮಿಸಿದೆ. ಹೀಗಾಗಿ ಯತ್ನಾಳ್ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ದೂರುಗಳ ಪಟ್ಟಿಯನ್ನು ನೀಡಲಿದ್ದಾರೆ.
ನನ್ನನ್ನು ಯಾರೂ ಕೂಡ ಏನೂ ಮಾಡಲಾರರು ಎಂಬ ದಾರ್ಷ್ಯದಿಂದಲೇ ಎಲ್ಲರ ವಿರುದ್ಧವೂ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ತಕ್ಷಣವೇ ಅವರ ಬಾಯಿಗೆ ಬೀಗ ಹಾಕದಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಭಾರೀ ಹಾನಿಯಾಗಲಿದೆ. ವರಿಷ್ಠರು ವಿಳಂಬ ಮಾಡಿದಷ್ಟೂ ಪಕ್ಷಕ್ಕೆ ಮುಳುವಾಗಲಿದೆ ಎಂದು ವಿವರಣೆ ನೀಡಲಿದ್ದಾರೆ.
ಈ ಬೆಳವಣಿಗೆಗಳ ನಡುವೆ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದು, ಎರಡು ಬಣಗಳ ನಡುವೆ ಮಾತುಕತೆ ನಡೆಸುವ ಸಾಧ್ಯತೆ ಇದೆ.ಡಿಸೆಂಬರ್ 3 ರಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಪಕ್ಷದ ಸಂಘಟನಾ ಕಾರ್ಯಕ್ರಮದ ನಿಮಿತ್ತ ಅವರು ರಾಜ್ಯಕ್ಕೆ ಆಗಮಿಸಿಸುತ್ತಿದ್ದರೂ, ಈ ಭೇಟಿಯ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳ ಬಗ್ಗೆಯೂ ಮಾತುಕತೆ ನಡೆಸುವ ಸಾಧ್ಯತೆ ಇದೆ. ತರುಣ್ ಚುಗ್ ಬಳಿಕ ಬಿಜೆಪಿಯ ಭಿನ್ನಮತದ ಬಗ್ಗೆ ಒಂದು ಬಣ ಗಮನ ಸೆಳೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡುವುದಿಲ್ಲ. ಬದಲಾಗಿ, ನಮ ಗುಂಪನ್ನು ಮಾತುಕತೆಗೆ ಕರೆದರೆ ಹೋಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದಾದರೆ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಕೋರ್ ಕಮಿಟಿ ಸಭೆ:
ಇನ್ನು ರಾಜ್ಯ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ ಶಮನ ಮಾಡುವ ನಿಟ್ಟಿನಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಡಿಸೆಂಬರ್ 3 ಅಥವಾ 7ರಂದು ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಎರಡು ಬಣಗಳು ನಡುವಿನ ಭಿನ್ನಮತದಿಂದ ಪಕ್ಷದ ಸಂಘಟನೆಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತಿದೆ, ಈ ನಿಟ್ಟಿನಲ್ಲಿ ಇದಕ್ಕೆ ಏನು ಪರಿಹಾರ ಕೈಗೊಳ್ಳಬೇಕು ಎಂಬ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಕೋರ್ ಕಮಿಟಿಯ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯೇಂದ್ರ ಬಣ ಮುಗಿಬಿದ್ದಿದೆ. ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ವಿಜಯೇಂದ್ರ ಬಣ ದೇವಸ್ಥಾನಗಳಿಗೆ ಭೇಟಿ ಕೊಡವ ಮೂಲಕ ಪ್ರವಾಸ ನಡೆಸುತ್ತಿದೆ. ಅಲ್ಲದೆ. ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನು ಹಮಿಕೊಳ್ಳಲು ನಿರ್ಧಾರ ಮಾಡಿದೆ. ಈ ಮೂಲಕ ವಿಜಯೇಂದ್ರ ಪರವಾಗಿ ಶಕ್ತಿ ಪ್ರದರ್ಶನ ನಡೆಯಲಿದೆ.