Saturday, November 30, 2024
Homeರಾಜ್ಯಜೆಡಿಎಸ್ ಕೋಟೆಯಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ, ಸ್ಥಳೀಯ ಸಂಸ್ಥೆ ಚುನಾವಣೆಗೆ ಬುನಾದಿ

ಜೆಡಿಎಸ್ ಕೋಟೆಯಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ, ಸ್ಥಳೀಯ ಸಂಸ್ಥೆ ಚುನಾವಣೆಗೆ ಬುನಾದಿ

Siddaramaiah Swabhimani Samavesha in hassan ahead of local body elections

ಬೆಂಗಳೂರು,ನ.30- ಉಪಚುನಾ ವಣೆಯ ಗೆಲುವಿನ ಹುಮಸ್ಸಿನಲ್ಲೇ ಜೆಡಿಎಸ್ ಪ್ರಾಬಲ್ಯವಿರುವ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಎದುರಾಳಿಗಳಿಗೆ ಠಕ್ಕರ್ ನೀಡಲು ಸಜ್ಜುಗೊಳ್ಳುಎತ್ತಿರುವ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷದ ಬುನಾದಿಯನ್ನು ಗಟ್ಟಿಗೊಳಿಸಲು ಯೋಜನೆ ರೂಪಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲ್ಲುವ ಮೂಲಕ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ತಗ್ಗಿಸುವಲ್ಲಿ ಡಿ.ಕೆ.ಸಹೋದರರು ಯಶಸ್ವಿಯಾಗಿದ್ದಾರೆ.

ಮುಂದುವರೆದ ಭಾಗವಾಗಿ ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಕಡಿಮೆ ಮಾಡಿದರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂಬ ಲೆಕ್ಕಾಚಾರಗಳಿವೆ.

ಈ ಮೂಲಕ ದೇಶದ ಹಲವು ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷದ ಹಿಡಿತವನ್ನು ತಗ್ಗಿಸಲು ಒಳಗೊಳಗೆ ತಯಾರಿಗಳಾಗಿವೆ. ಹಾಸನದ ಸ್ವಾಭಿಮಾನಿ ಸಮಾವೇಶ ಮೇಲ್ನೋಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ವೇದಿಕೆಯಂತೆ ಕಂಡುಬಂದರೂ ಅದರ ಹಿಂದೆ ರಾಜಕೀಯ ಲಾಭ-ನಷ್ಟ ಲೆಕ್ಕಾಚಾರಗಳು ಜೋರಾಗಿ ನಡೆದಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 2006ರ ನಂತರ ಜೆಡಿಎಸ್ನ ನಾಯಕರೊಂದಿಗೆ ರಾಜಕೀಯ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ತಮದೇ ಆದ ಪ್ರಾಬಲ್ಯವನ್ನು ರೂಢಿಸಿಕೊಂಡು ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯನವರ ವರ್ಚಸ್ಸು ಕಳೆಗುಂದುವಂತಹ ಸನ್ನಿವೇಶಗಳು ಎದುರಾದಾಗಲೆಲ್ಲ ಸ್ವಾಭಿಮಾನಿ ಸಮಾವೇಶಗಳು ಅವರ ಸಾಮರ್ಥ್ಯವನ್ನು ವೃದ್ಧಿಸಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ದಾವಣಗೆರೆಯಲ್ಲಿ ನಡೆದ ಐತಿಹಾಸಿಕವಾದ ಸಿದ್ದರಾಮೋತ್ಸವ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ಆಗಿತ್ತು.ಇತ್ತೀಚೆಗೆ ಮುಡಾ, ವಕ್‌್ಫ ವಿಚಾರಗಳಲ್ಲಿ ವಿರೋಧ ಪಕ್ಷಗಳು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿವೆ. ಇದಕ್ಕೆ ಉಪಚುನಾವಣೆಯಲ್ಲಿ ಉತ್ತರ ಸಿಕ್ಕಿದೆಯಾದರೂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ಮೂಲಕ ವಿರೋಧ ಪಕ್ಷಗಳ ಹಾಗೂ ಪಕ್ಷದಲ್ಲೇ ಇರುವ ಆಂತರಿಕ ಪ್ರತಿಸ್ಪರ್ಧಿಗಳ ಬಾಯಿ ಮುಚ್ಚಿಸಲು ಸ್ವಾಭಿಮಾನಿ ಸಮಾವೇಶ ರೂಪುಗೊಂಡಿದೆ.

ಸಿದ್ದರಾಮಯ್ಯ ಸಂಕಷ್ಟದ ಸಮಯದಲ್ಲಿದ್ದಾರೆ ಎಂಬ ಕಾರಣಕ್ಕೆ ಪಕ್ಷದಲ್ಲಿ ಒಂದು ಬಣ ಸವಾರಿ ಮಾಡಲೆತ್ನಿಸಿದ್ದು, ಹೈಕಮಾಂಡ್ಗೆ ಪತ್ರ ಬರೆದು ಸ್ವಾಭಿಮಾನಿ ಸಮಾವೇಶವನ್ನು ಪಕ್ಷದ ವೇದಿಕೆಯಲ್ಲೇ ಮಾಡಬೇಕೆಂದು ಪ್ರತಿಪಾದಿಸಿತ್ತು.

ಪ್ರಗತಿಪರ ಚಿಂತನೆಯಿಂದ ಗುರುತಿಸಿಕೊಂಡಿರುವ ಬಹಳಷ್ಟು ಮಂದಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವುಗಳನ್ನು ಒಪ್ಪುವುದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಚಿಹ್ನೆ ಹಾಗೂ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಲು ಅವರು ಸಿದ್ಧರಿರುವುದಿಲ್ಲ.

ಹೀಗಾಗಿ ಶೋಷಿತ ವರ್ಗಗಳ ವೇದಿಕೆಯಡಿ ಸ್ವಾಭಿಮಾನಿ ಸಮಾವೇಶ ಆಯೋಜನೆಗೊಳ್ಳುವುದಿತ್ತು. ಕಾಂಗ್ರೆಸ್ನಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಪಕ್ಷ ಮತ್ತು ಶೋಷಿತ ವರ್ಗಗಳ ಸಂಘಟನೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ.

ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಕಾರ್ಯಕ್ರಮಕ್ಕೆ ಹಸಿರುನಿಶಾನೆ ತೋರಿಸಿದ್ದು, ಸಮಾವೇಶದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯನವರ ಆಪ್ತ ಕೆ.ಎನ್.ರಾಜಣ್ಣ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದು, ಇವರು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಮೀರಿ ಕಾಂಗ್ರೆಸ್ ಗೆಲುವು ಕಂಡಿದೆ. ಈ ಸಮಾವೇಶದ ಮೂಲಕ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ನ ಆಧಿಪತ್ಯವನ್ನು ಮತ್ತಷ್ಟು ಹೆಚ್ಚಿಸಲು ವೇದಿಕೆ ನಿರ್ಮಿಸಲಾಗುತ್ತಿದೆ.

RELATED ARTICLES

Latest News