ಬೆಂಗಳೂರು,ನ.30- ದಾವಣಗೆರೆ ಹಾಗೂ ನಗರದ ಹೊರವಲಯದಲ್ಲಿ 18 ಪಾಕ್ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊ ಳಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 1,350 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಹಣ ವರ್ಗಾವಣೆ, ಅಕ್ರಮವಾಗಿ ಭಾರತ ಪ್ರವೇಶ , ಉದ್ಯೋಗ, ಧರ್ಮ ಬೋಧನೆ ಸೇರಿದಂತೆ ಹಲವು ವಿಚಾರಗಳು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಚಾರ್ಜ್ಶೀಟ್ನಲ್ಲಿ ದಾಖಲಾಗಿರುವ ಎಲ್ಲಾ ಬಂಧಿತ 18 ಮಂದಿಯೂ ಪಾಕ್ ಪ್ರಜೆಗಳಾಗಿದ್ದು,ಸಮಾಜದಿಂದ ಬಹಿಷ್ಕರಿಸಲ್ಪಟ್ಟಿದ್ದರು. ಹಾಗಾಗಿಯೇ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಭಾರತಕ್ಕೆ ಬಂದು ಬೇರೆ ಬೇರೆ ರಾಜ್ಯಗಳಲ್ಲಿ ವಾಸ ಮಾಡುತ್ತಿದ್ದರು.
ಹೆಚ್ಚಾಗಿ ದೆಹಲಿ, ಕರ್ನಾಟಕದ ಬೆಂಗಳೂರು (ಆನೇಕಲ್ ಸಮೀಪದ ಜಿಗಣಿ ಹಾಗೂ ಪೀಣ್ಯದಲ್ಲಿ) ಮತ್ತು ದಾವಣಗೆರೆಯಲ್ಲಿ ನೆಲೆಸಿದ್ದರು. ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಇವರು, ತಮದೇ ಯೂಟ್ಯೂಬ್ ಚಾನೆಲ್ ತೆರೆದು ಧರ್ಮ ಬೋಧನೆ ಮಾಡುತ್ತಿದ್ದರು. ಈ ಎಲ್ಲಾ ಅಂಶಗಳನ್ನು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದರು.
ಈ ವೇಳೆ ಪಾಕ್ ಪ್ರಜೆಗಳು ಸೇರಿದಂತೆ ಹಲವು ಮಂದಿಯ ಹೇಳಿಕೆ ದಾಖಲು ಮಾಡಲಾಗಿದೆ. ತಾಂತ್ರಿಕ ಸಾಕ್ಷ್ಯಗಳು, ಸಿಡಿಆರ್ ವರದಿ , ಟವರ್ ಡಂಪ್, ಯೂ ಟ್ಯೂಬ್ ಚಾನೆಲ್ ವಿವರಗಳನ್ನ ಕಲೆಹಾಕಿದ್ದು, ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಲಾಗಿದ್ದು ರಾಜತಂತ್ರಿಕವಾಗಿಯೂ ಕ್ರಮ ಕೈಗೊಳ್ಳಲಾಗಿದೆ.