Thursday, December 12, 2024
Homeಬೆಂಗಳೂರುಮಾತನಾಡುವ ನೆಪದಲ್ಲಿ ಕರೆಸಿಕೊಂಡು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮಾತನಾಡುವ ನೆಪದಲ್ಲಿ ಕರೆಸಿಕೊಂಡು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು,ನ.30- ಯಾವುದೋ ವಿಚಾರವಾಗಿ ನಿನ್ನ ಜೊತೆ ಮಾತನಾಡಬೇಕೆಂದು ಯುವಕನನ್ನು ಕರೆಸಿಕೊಂಡು ಲಾಂಗ್ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿರುವ ಘಟನೆ ಎಚ್ಎಸ್ಆರ್ ಲೇಟೌಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ರವಿ(34) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಬೇಡ್ಕರ್ ಬಡಾವಣೆ, ಎಳ್ಳುಕುಂಟೆ, 3ನೇ ಸೆಕ್ಟರ್ ನಿವಾಸಿಯಾಗಿರುವ ರವಿ ಅವರು ಸುದ್ದಿ ಮಾಧ್ಯಮವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಮೊಬೈಲ್ಗೆ ನಿನ್ನೆ ಸಂಜೆ 6.25ರ ಸುಮಾರಿನಲ್ಲಿ ಮಂಜುನಾಥ್ ಎಂಬ ವ್ಯಕ್ತಿ ಕರೆ ಮಾಡಿ ನಿಮ ಹತ್ತಿರ ಮಾತನಾಡಬೇಕು ದೇವಸ್ಥಾನದ ಬಳಿ ಬರುವಂತೆ ಹೇಳಿದ್ದಾರೆ.

ಆ ವೇಳೆ ರವಿ ಅವರು ದೇವಸ್ಥಾನದ ಬಳಿ ಬೇಡ ಎಳ್ಳುಕುಂಟೆಯಲ್ಲಿನ ಅಂಬೇಡ್ಕರ್ ಪ್ರತಿಮೆ ಸಮೀಪ ಬರುತ್ತೇನೆ ಎಂದು ಹೇಳಿ ದ್ವಿಚಕ್ರ ವಾಹನದಲ್ಲಿ ಹೋದಾಗ ಮಂಜುನಾಥ್ ಬಂದಿದ್ದನು.

ಯಾಕೆ ಬರುವಂತೆ ಹೇಳಿದೆ ಎಂದು ರವಿ ಕೇಳುತ್ತಿದ್ದಂತೆ, ನಮ ಬಾಸ್ ಮೋಹನ್ ಮತ್ತು ಅವರ ಕುಟುಂಬದವರ ವಿರುದ್ಧ ಬೇರೆಯವರಿಂದ ಕೇಸು ಹಾಕಿಸುತ್ತಿದ್ದೀಯ ಎಂದು ಕೇಳಿದ್ದಾನೆ.
ಈ ವಿಚಾರವನ್ನು ಕೊಡತಿ ಮಂಜು, ಹರೀಶ, ಗೋಪಿ ಇನ್ನಿತರರು ತಿಳಿಸಿದ್ದಾರೆಂದು ಮಂಜುನಾಥ್ ಹೇಳಿದಾಗ, ಈ ವಿಚಾರ ನಿನಗೆ ಬೇಡ, ಸುಮನೆ ಹೋಗು ಎಂದು ತಿಳಿಸಿ ರವಿ ದ್ವಿಚಕ್ರ ವಾಹನ ತೆಗೆದುಕೊಂಡು ಮನೆಗೆ ಹೋಗಲು ಮುಂದಾಗುತ್ತಿದ್ದಂತೆ ಮಂಜುನಾಥ್ ಅಡ್ಡಗಟ್ಟಿ ತಡೆದು, ಬೆನ್ನಿನಲ್ಲಿ ಬಚ್ಚಿಟ್ಟುಕೊಂಡಿದ್ದ ಲಾಂಗ್ ತೆಗೆದು ತಲೆಗೆ ಹೊಡೆದಿದ್ದಾನೆ.

ತಕ್ಷಣ ರವಿ ಅವರು ದ್ವಿಚಕ್ರ ವಾಹನ ಸ್ಥಳದಲ್ಲಿಯೇ ಬಿಟ್ಟು ಪ್ರಾಣ ಭೀತಿಯಿಂದ ತಪ್ಪಿಸಿಕೊಳ್ಳಲು ಓಡಿದಾಗ ಹಿಂಬಾಲಿಸಿಕೊಂಡು ಹೋಗಿ ಲಾಂಗ್ನಿಂದ ಭುಜ, ಮುಖ, ಬೆನ್ನಿಗೆ ಹಲ್ಲೆ ನಡೆಸಿದ್ದಾನೆ. ತಪ್ಪಿಸಿಕೊಂಡು ಸಮೀಪದ ಗ್ಯಾಸ್ ಇಳಿಸುವ ಜಾಗಕ್ಕೆ ಹೋಗಿ ಕೆಲಸ ಮಾಡುತ್ತಿದ್ದ ದೊಡ್ಡಪ್ಪನ ಮಗ ಆನಂದ್ನನ್ನು ಕೂಗಿದ್ದಾರೆ. ಆನಂದ ಹೊರಗೆ ಬರುತ್ತಿದ್ದಂತೆ ಈ ಸ್ಥಳಕ್ಕೆ ಕಾರೊಂದು ಬಂದಿದ್ದು, ಅದರಲ್ಲಿ ಆರೋಪಿ ಮಂಜುನಾಥ್ ಹತ್ತಿಕೊಂಡು ಪರಾರಿಯಾಗಿದ್ದಾನೆ.

ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ರವಿ ಅವರನ್ನು ರಾತ್ರಿ 9.30ರ ಸುಮಾರಿಗೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ರವಿ ಅವರು ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಮಂಜುನಾಥ್ ಸೇರಿದಂತೆ ಐದು ಮಂದಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

RELATED ARTICLES

Latest News