ಚಿಕ್ಕಮಗಳೂರು : ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಡಿ.4 ರಂದು ಚುನಾವಣೆ ನಡೆಯಲಿದ್ದು, ಮತದಾನ ಮಾಡಲಿರುವ ಚುನಾಯಿತ ನಿರ್ದೇಶಕರಿಗೆ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ದೇವೇಂದ್ರ, ಜಿಲ್ಲಾ ಖಜಾಂಚಿ ಅಭ್ಯರ್ಥಿ ಎನ್ .ಟಿ.ಪೂರ್ಣೇಶ್ ಹಾಗೂ ರಾಜ್ಯ ಪರಿಷತ್ ಅಭ್ಯರ್ಥಿ ಚೇತನ್ ಬಿ.ಅವರು ಜಿಲ್ಲಾಧಿಕಾರಿಗಳಿಗೆ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾ ಚುನಾವಣಾಧಿಕಾರಿ ಬಸವರಾಜು ಅವರಿಗೆ ದೂರು ನೀಡಿದ್ದಾರೆ.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಡಿ.4 ರಂದು ಮತದಾನ ನಡೆಯಲಿದೆ. ಆದರೆ ಬೋಜೇಗೌಡರು ಈ ಚುನಾವಣೆಯಲ್ಲಿ ಮತದಾನ ಮಾಡಲಿರುವ ಚುನಾಯಿತ ನಿರ್ದೇಶಕರಿಗೆ ಸರ್ಕಾರಿ ಕೆಲಸ ನಿರ್ವಹಿಸಲು ಬಿಡದೆ ಕರ್ತವ್ಯದ ಅವಧಿಯಲ್ಲಿ ಪದೇಪದೇ ಮನೆಗೆ ಕರೆದು ಬೆದರಿಕೆ ಒಡ್ಡುವುದು, ರೆಸಾರ್ಟ್‌ಗಳಿಗೆ ಕರೆಯುವುದು,ತಾವು ಹೇಳಿದವರಿಗೆ ಮತ ಹಾಕಬೇಕೆಂದು ಆಣೆ, ಪ್ರಮಾಣ ಮಾಡಿ ಬಲವಂತಪಡಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಇದಲ್ಲದೆ 2 ದಿನಗಳ ಕಾಲ ನಾವು ಹೇಳುವ ರೆಸಾರ್ಟ್‌ಲ್ಲಿ ವಾಸ್ತವ್ಯ ಮಾಡಬೇಕು ಎಂದು ಬೆದರಿಕೆ ಹಾಕುತ್ತಿದ್ದು ಸರ್ಕಾರಿ ನೌಕರರು ನಿರ್ಭಯವಾಗಿ ಮತದಾನ ಮಾಡಲು ಮುಜುಗರ ಪಡುವಂತಹ ವಾತಾವರಣ ಸೃಷ್ಟಿಯಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಂಡು ನಿರ್ಭಯವಾಗಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಅವರು ಕೋರಿದ್ದಾರೆ.