ಬೆಂಗಳೂರು,ಡಿ.5- ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಪ್ರೇಯಸಿಯ ತಾಯಿ ಹಾಗೂ ಅಣ್ಣನನ್ನು ಪ್ರಿಯಕರ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಅಕ್ಕೋಳು ಗ್ರಾಮ ಹೊರವಲಯದ ನಿವಾಸಿಗಳಾದ ಮಂಗಲ ಸುಖಾಂತ್ ನಾಯಕ್ (45) ಮತ್ತು ಇವರ ಮಗ ಪ್ರಜ್ವಲ್ ನಾಯಕ್ (18) ಕೊಲೆಯಾದವರು.
ಮಂಗಲ ಅವರ ಅಪ್ರಾಪ್ತ ಪುತ್ರಿಯನ್ನು ರವಿ ಎಂಬಾತ ಪ್ರೀತಿಸುತ್ತಿದ್ದ. ಆದರೆ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿ ಮದುವೆಗೆ ನಿರಾಕರಿಸಿ ಮಗಳಿಗೆ ಬುದ್ಧಿವಾದ ಹೇಳಿದ್ದಾರೆ.
ನಿನ್ನೆಯೂ ಸಹ ಇದೇ ವಿಚಾರವಾಗಿ ಯುವತಿ ಮನೆಯಲ್ಲಿ ವಾದ-ವಿವಾದವಾಗಿದೆ.
ಆ ವೇಳೆ ಈ ವಿಷಯವನ್ನು ಪ್ರಿಯಕರ ರವಿಗೆ ಕರೆ ಮಾಡಿ ನನಗೆ ಮನೆಯಲ್ಲಿ ಹಿಂಸೆ ಕೊಡುತ್ತಿದ್ದಾರೆಂದು ಯುವತಿ ತಿಳಿಸಿದ್ದಾಳೆ.
ರವಿ ತನ್ನ ಸ್ನೇಹಿತನನ್ನು ಕರೆದುಕೊಂಡು ಬೈಕ್ನಲ್ಲಿ ರಾತ್ರಿ 9.30ರ ಸುಮಾರಿಗೆ ಪ್ರೇಯಸಿ ಮನೆ ಬಳಿ ಬಂದು ಆಕೆಯ ತಾಯಿ ಜೊತೆ ಜಗಳವಾಡಿ ಪೈಪ್ನಿಂದ ತಲೆಗೆ ಮನಬಂದಂತೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ಇದೇ ವೇಳೆ ಜಗಳ ಬಿಡಿಸಲು ಮಧ್ಯೆ ಬಂದ ಪ್ರಜ್ವಲ್ ನಾಯಕ್ ಮೇಲೂ ಪೈಪ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಸ್ನೇಹಿತನ ಜೊತೆ ಬೈಕ್ನಲ್ಲಿ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನಿಪ್ಪಾಣಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ವಶಕ್ಕೆ :
ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ರವಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಜೋಡಿ ಕೊಲೆಯಲ್ಲಿ ರವಿ ಸ್ನೇಹಿತನ ಪಾತ್ರ ಇದೆಯೇ ಎಂಬುವುದರ ಬಗ್ಗೆಯೂ ಸಹ ಪೊಲೀಸರು ತನಿಖೆ ಕೈಗೊಂಡಿದ್ದಾರೆ.