ಬೆಂಗಳೂರು, ಡಿ.6– ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಒಟ್ಟು 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಸುಂಕದಕಟ್ಟೆಯ ಶ್ರೀನಿವಾಸ ನಗರ ನಿವಾಸಿ ಭವ್ಯಾ ಎಂಬುವರು ಮನೆಗೆ ಬೀಗ ಹಾಕಿಕೊಂಡು ಕುಣಿಗಲ್ಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಬೀಗ ಹೊಡೆದು ಒಳನುಗ್ಗಿ ಬೀರುವಿನಲ್ಲಿದ್ದ 10 ಸಾವಿರ ಹಣ ಸೇರಿದಂತೆ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಭವ್ಯಾ ಅವರು ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೂಲತಃ ಚಿತ್ರದುರ್ಗ ಜಿಲ್ಲೆಯ ಗೊರವಿನಕಲ್ಲು ಗ್ರಾಮದ ನಿವಾಸಿ ರವಿಕುಮಾರ್(38) ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ 12.90 ಲಕ್ಷ ರೂ. ಬೆಲೆಬಾಳುವ 187 ಗ್ರಾಂ ಚಿನ್ನಾಭರಣ, 40 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಬಂಧನದಿಂದ ಕಾಮಾಕ್ಷಿಪಾಳ್ಯ ಠಾಣೆಯ ಮೂರು ಪ್ರಕರಣ ಹಾಗೂ ಬಸವೇಶ್ವರ ನಗರ ಠಾಣೆಯ ಒಂದು ಪ್ರಕರಣ ಪತ್ತೆಯಾದಂತಾಗಿದೆ.
ಆಂಧ್ರದ ವ್ಯಕ್ತಿ ಸೆರೆ:
ಮತ್ತೊಂದು ಪ್ರಕರಣದಲ್ಲಿ ಮನೆಯ ಬೀಗ ಮುರಿದು ಒಳಗೆ ನುಗ್ಗಿ ಚಿನ್ನ, ಬೆಳ್ಳಿ ಹಾಗೂ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆಂಧ್ರ ಪ್ರದೇಶ ಮೂಲದ ಆರೋಪಿ ಅಶೋಕ್(33) ಎಂಬಾತನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 3.10 ಲಕ್ಷ ರೂ. ಬೆಲೆಬಾಳುವ 47 ಗ್ರಾಂ ಆಭರಣ, 100 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ನಾಗೇಶ್ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಈ ಆರೋಪಿ ಅಂದ್ರಳ್ಳಿ ಸರ್ಕಲ್ನ 5ನೇ ಕ್ರಾಸ್ನಲ್ಲಿ ವಾಸವಾಗಿದ್ದುಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿ ಪರಾರಿಯಾಗಿದ್ದನು.
ವಂಚನೆ ಇಬ್ಬರ ಸೆರೆ:
ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 3.16 ಲಕ್ಷ ರೂ. ಬೆಲೆಬಾಳುವ 48 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.ಮೀನಾಕ್ಷಿ ನಗರದ ಪ್ರಕಾಶ್(24) ಮತ್ತು ಮುದ್ದಣ್ಣ ರಸ್ತೆಯ ಮಲ್ಲಿಕಾರ್ಜುನ್(24) ಬಂಧಿತ ವಂಚಕರು.
ನ. 25ರಂದು ಹೆಗ್ಗನಹಳ್ಳಿ ಕ್ರಾಸ್ ನಿವಾಸಿ ಮಂಜುನಾಥ್ ಅವರ ಜೊತೆಯಲ್ಲಿ ಈ ಇಬ್ಬರು ಸೇರಿಕೊಂಡು ಮದ್ಯಪಾನ ಮಾಡಿದ್ದು, ಆ ವೇಳೆ ಮೋಸದಿಂದ ಮಂಜುನಾಥ್ ಅವರು ಧರಿಸಿದ್ದ 9 ಗ್ರಾಂ ಉಂಗುರ, 17 ಗ್ರಾಂ ಚಿನ್ನದ ಬ್ರಾಸ್ಲೆಟ್, 31 ಗ್ರಾಂ ಚಿನ್ನದ ಸರ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಮಂಜುನಾಥ್ ಅವರು ನೀಡಿದ ದೂರಿನನ್ವಯ ಇಬ್ಬರನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.