Thursday, April 16, 2026
Homeರಾಜ್ಯಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್‌ ನಬಿನ್‌ ಅಧಿಕಾರ ಸ್ವೀಕಾರ

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್‌ ನಬಿನ್‌ ಅಧಿಕಾರ ಸ್ವೀಕಾರ

Nitin Nabin takes charge as BJP National President

ನವದೆಹಲಿ,ಜ.20- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ನಿತಿನ್‌ ನಬಿನ್‌ ಅವರು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಹರ್ಷೋದ್ಘಾರ ನಡುವೆ ಇಂದು ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು. ಬಿಜೆಪಿ ಇತಿಹಾಸದಲ್ಲೇ ಅತಿ ಚಿಕ್ಕ ವಯಸ್ಸಿನಲ್ಲೇ ಪಕ್ಷದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಕೇಂದ್ರದ ಹಾಲಿ ಸಚಿವ ನಿತಿನ್‌ ಗಡ್ಕರಿ ಅವರ ಹೆಸರಿನಲ್ಲಿ ಇದ್ದ ದಾಖಲೆಯನ್ನು ಮುರಿದಿದ್ದಾರೆ.

ನವದೆಹಲಿಯಲ್ಲಿರುವ ದೀನ್‌ ದಯಾಳ್‌ ಉಪಾಧ್ಯಾಯ್‌ ಮಾರ್ಗದಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ನಿರ್ಗಮಿತ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಷಾ ಸೇರಿದಂತೆ ಹಲವರ ಸಮುಖದಲ್ಲಿ ನಬಿನ್‌ ಕುರ್ಚಿ ಅಲಂಕರಿಸುವ ಮೂಲಕ ಅಧಿಕಾರ ವಹಿಸಿಕೊಂಡರು.

ನಿರ್ಗಮಿತ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿದ್ದ ಪ್ರಮುಖರು ಹಾಗೂ ಕಚೇರಿ ಹೊರಭಾಗದಲ್ಲಿದ್ದ ಕಾರ್ಯಕರ್ತರು ಜೈಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಪಕ್ಷದೊಳಗೆ ಅವರ ಉನ್ನತ ಸ್ಥಾನಮಾನವನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ, ನಿತಿನ್‌ ನಬಿನ್‌ ಅವರನ್ನು ಸನಾನಿಸಿದರು. ಬಿಜೆಪಿ ನೂತನ ಅಧ್ಯಕ್ಷರ ಔಪಚಾರಿಕ ಘೋಷಣೆಯಿಂದ ವಾರಗಳ ಕಾಲ ನಡೆದ ಆಂತರಿಕ ಚರ್ಚೆಗಳಿಗೆ ತೆರೆಬಿದ್ದಿದೆ.

ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಂತಹ ನಿರ್ಣಾಯಕ ರಾಜ್ಯಗಳು ಈ ವರ್ಷದ ಕೊನೆಯಲ್ಲಿ ಹೊಸ ಸರ್ಕಾರಕ್ಕೆ ಮತ ಚಲಾಯಿಸಲು ಸಜ್ಜಾಗಿರುವುದರಿಂದ ಪಕ್ಷವು ನೂತನ ಅಧ್ಯಕ್ಷರನ್ನು ಮುನ್ನೆಲೆಗೆ ತಂದು ಚುನಾವಣಾ ಅಖಾಡಕ್ಕಿಳಿಯಲು ಮುಂದಾಗಿದೆ.
ಪ್ರಸ್ತುತ ಬಿಜೆಪಿ ಆಡಳಿತದಲ್ಲಿರುವ ಅಸ್ಸಾಂ ರಾಜ್ಯವು ಈ ವರ್ಷ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ಇದಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗಿನ ಸಂಘಟನಾ ಕಾರ್ಯತಂತ್ರ ಮತ್ತು ಸಮನ್ವಯದ ಬಗ್ಗೆ ಪಕ್ಷದೊಳಗೆ ವ್ಯಾಪಕ ಚರ್ಚೆಗಳ ಮಧ್ಯೆ ನಬಿನ್‌ ಅವರಿಗೆ ಹೊಸ ಸವಾಲು ಎದುರಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಬಿಹಾರದ ಮಾಜಿ ಶಾಸಕರು ರಾಜ್ಯಗಳಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿ, ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ, ನಿರಂತರ ತಳಮಟ್ಟದ ಕೆಲಸದ ಅಗತ್ಯವನ್ನು ಒತ್ತಿ ಹೇಳಿದ್ದರು.

ನಿತಿನ್‌ ಅವರ ತಂದೆ ಜನಸಂಘದ ಮಾಜಿ ಸದಸ್ಯ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 2 ದಶಕಗಳ ರಾಜಕೀಯ ಅನುಭವ ಹೊಂದಿರುವ ಇವರು ಐದು ಬಾರಿ ಬಂಕಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಬಿಹಾರ ಮತ್ತು ಪೂರ್ವ ಭಾರತದಿಂದ ಆಯ್ಕೆಯಾದ ಮೊದಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಇವರಾಗಿದ್ದಾರೆ.

ಛತ್ತೀಸ್‌‍ಗಢದ ಉಸ್ತುವಾರಿಯಾಗಿದ್ದ ಇವರು ಅಲ್ಲಿ ಪಕ್ಷವನ್ನು ಆಡಳಿತಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರ ಕೆಲಸವನ್ನು ಗುರುತಿಸಿದ ಬಳಿಕ ಇವರಿಗೆ ದೆಹಲಿ ಚುನಾವಣೆಯ ಪ್ರಚಾರದಲ್ಲಿ ಪ್ರಮುಖ ಪಾತ್ರ ನೀಡಲಾಗಿತ್ತು.ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಿತಿನ್‌ ಎಂದಿಗೂ ಪಕ್ಷ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂಬ ಅಭಿಪ್ರಾಯ ಪಕ್ಷದಲ್ಲಿದೆ.

ಉತ್ತಮ ಸಂವಹನ ಕಲೆಯ ಜೊತೆ ಸಂಘಟನಾ ಚಾತುರ್ಯ ಇವರಿಗಿದೆ. ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿ ಉತ್ತಮ ಫಲಿತಾಂಶ ತಂದುಕೊಟ್ಟ ಹೆಗ್ಗಳಿಕೆಯಿದೆ. ಎಲ್ಲರನ್ನೂ ಅದರಲ್ಲೂ ಮುಖ್ಯವಾಗಿ ಪಕ್ಷದ ಹಿರಿಯರನ್ನು ಜೊತೆಯಾಗಿ ನಿತಿನ್‌ ಕರೆದುಕೊಂಡು ಹೋಗುತ್ತಾರೆ ಎಂಬ ಆಶಾಭಾವನೆಯಿದೆ.

ನಿತಿನ್‌ ನಬಿನ್‌ ಬಿಹಾರದ ಕಾಯಸ್ಥ ಸಮುದಾಯದಿಂದ ಬಂದವರು. ಬಿಹಾರದಲ್ಲಿ ಕಾಯಸ್ಥ ಮೇಲ್ವರ್ಗದ ಜಾತಿ ಎಂದು ಪರಿಗಣಿಸಿದರೂ ಇತರ ಜಾತಿಗಳ ಜೊತೆ ಸಂಘರ್ಷದಲ್ಲಿಲ್ಲ. ಬಿಹಾರ ಚುನಾವಣಾ ಸಮಯದಲ್ಲಿ ಗೃಹ ಸಚಿವ ಅಮಿತ್‌ ಶಾ ನಿತಿನ್‌ ಮನೆಗೆ ಭೇಟಿ ನೀಡಿ ಅವರ ಸಂಘಟನಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬಿಹಾರ ಚುನಾವಣೆಗೆ ಮೊದಲು ಜೀವಿಕಾ ದೀದಿ ಜಾಲವನ್ನು ಸಜ್ಜುಗೊಳಿಸುವ ಜವಾಬ್ದಾರಿಯನ್ನು ನಬಿನ್‌ ಅವರಿಗೆ ವಹಿಸಲಾಗಿತ್ತು. ಬಿಹಾರ ಮೈತ್ರಿಕೂಟ ಒಗ್ಗಟ್ಟನ್ನು ಪ್ರದರ್ಶಿಸುವ ಪ್ರಮುಖ ಎನ್‌ಎಡಿಎಎ ಸಮನ್ವಯ ಸಭೆಗಳಲ್ಲಿಯೂ ಇವರು ಭಾಗಿಯಾಗುತ್ತಿದ್ದರು.

ಛತ್ತೀಸ್‌‍ಗಢ ಪ್ರಚಾರದ ಸಮಯದಲ್ಲಿ ನಬಿನ್‌ ಅವರ ಸಂಘಟನಾ ಕೌಶಲ್ಯ ಹೈಕಮಾಂಡ್‌ ಗಮನಕ್ಕೆ ಬಂದಿತ್ತು. ಕೇಂದ್ರ ಸಚಿವ ಮನ್ಸುಖ್‌ ಮಾಂಡವಿಯಾ ಅವರೊಂದಿಗೆ ಚುನಾವಣಾ ಸಹ-ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಚುನಾವಣೆಗೆ ಕನಿಷ್ಠ ಒಂದೂವರೆ ವರ್ಷಕ್ಕೆ ಮೊದಲು ನಬಿನ್‌ ವಾರದಲ್ಲಿ ಕನಿಷ್ಠ ನಾಲ್ಕು ದಿನ ಛತ್ತೀಸ್‌‍ಗಢಗೆ ಬರುತ್ತಿದ್ದರು. ಇದು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌‍ ನಾಯಕ ಭೂಪೇಶ್‌ ಬಘೇಲ್‌ ವಿರುದ್ಧ ಬಿಜೆಪಿಯ ಪ್ರಚಾರಕ್ಕೆ ಭದ್ರವಾದ ಅಡಿಪಾಯ ಹಾಕಿತ್ತು.

ಎರಡು ಸಂದೇಶ: ನಬಿನ್‌ ಆಯ್ಕೆಯ ಮೂಲಕ ಬಿಜೆಪಿಯು ಎರಡು ಸಂದೇಶಗಳನ್ನು ನೀಡಿದೆ. ನಿತಿನ್‌ ನಬಿನ್‌ (45) ಅವರ ಆಯ್ಕೆಯು ಬಿಜೆಪಿಯು ನಿಧಾನವಾಗಿ ಯುವ ನಾಯಕತ್ವಕ್ಕೆ ಒತ್ತು ನೀಡುತ್ತಿರುವುದನ್ನು ತೋರಿಸುತ್ತಿದೆ.

ಕೆಲವು ವಿಶ್ಲೇಷಣೆಗಳ ಪ್ರಕಾರ, ಯುವ ನಾಯಕರನ್ನು ಉತ್ತೇಜಿಸುವ ಮತ್ತು ಮುಂದಿನ ಚುನಾವಣೆಗಳಿಗಾಗಿ ಸಂಘಟನಾ ನಾಯಕತ್ವವನ್ನು ಬಲಪಡಿಸುವ ಬಿಜೆಪಿಯ ತಂತ್ರದ ಭಾಗವಾಗಿ ಈ ಆಯ್ಕೆ ನಡೆದಿದೆ. ಇದಲ್ಲದೆ ಅವಿರೋಧ ಆಯ್ಕೆ ಮತ್ತು ಸುಗಮ ಅಧಿಕಾರ ಹಸ್ತಾಂತರವು ಪಕ್ಷದ ಆಂತರಿಕ ಒಮತ ಮತ್ತು ಶಿಸ್ತನ್ನು ಎತ್ತಿ ತೋರಿಸುತ್ತದೆ.

RELATED ARTICLES

Latest News