Thursday, April 16, 2026
Homeರಾಜ್ಯಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಲ್ಲಿ ಮತ್ತೆ ಸಾರ್ವಕಾಲಿಕ ದಾಖಲೆ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಲ್ಲಿ ಮತ್ತೆ ಸಾರ್ವಕಾಲಿಕ ದಾಖಲೆ

Gold and silver prices rise again to all-time record

ಬೆಂಗಳೂರು,ಜ.20- ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಬೆಳ್ಳಿ ಸತತ ಎರಡನೇ ದಿನವಾದ ಇಂದೂ ಕೂಡ ಪ್ರತಿ ಕೆಜಿಗೆ 10 ಸಾವಿರ ರೂ. ಹೆಚ್ಚಳವಾಗಿದೆ. ಚಿನ್ನ ಮತ್ತು ಬೆಳ್ಳಿ ದರಗಳು ದುಬಾರಿಯಾಗಿದ್ದು, ಇದುವರೆಗಿನ ದಾಖಲೆಗಳ್ನು ದಾಟಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿವೆ.

ಒಂದು ಕೆಜಿ ಬೆಳ್ಳಿಗೆ 3,15,000 ರೂ. ಮಾರುಕಟ್ಟೆ ದರವಿದೆ. ಅದೇ ರೀತಿ ಹಳದಿ ಲೋಹ ಚಿನ್ನದ ದರವೂ ನಿರಂತರ ಏರಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನ ಇಂದು ಪ್ರತಿ ಗ್ರಾಂಗೆ 104 ರೂ. ಹೆಚ್ಚಳವಾಗಿದೆ.ಒಂದು ಗ್ರಾಂ ಚಿನ್ನದ ದರವು 14,728 ರೂ. ತಲುಪಿದ್ದು, ಇದೇ ರೀತಿ ಮುಂದುವರೆದರೆ 15 ಸಾವಿರ ರೂ.ಗಳ ಗಡಿ ದಾಟಿದರೂ ಆಶ್ಚರ್ಯಪಡಬೇಕಿಲ್ಲ.

ನಿರಂತರವಾಗಿ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆಯಾಗುತ್ತಿರುವುದು ಆಭರಣ ಪ್ರಿಯರಿಗೆ ನಿರಾಶೆಯಾಗಿರುವುದು ಮಾತ್ರವಲ್ಲ, ಕಣ್ಣನ್ನು ಕೆಂಪಗಾಗಿಸಿವೆ. ಆದರೆ ಹೂಡಿಕೆದಾರರಿಗೆ ಮಾತ್ರ ಲಾಭದಾಯಕವಾಗಿದೆ.

ಭಾನುವಾರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆಯಾಗದೇ ಸ್ಥಿರವಾಗಿತ್ತು. ಆದರೆ ನಿನ್ನೆಯಿಂದ ಏರುಗತಿಯಲ್ಲಿ ಸಾಗುತ್ತಿದ್ದು, ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. 22 ಕ್ಯಾರೆಟ್‌ ಚಿನ್ನ ಪ್ರತಿ ಗ್ರಾಂ ಗೆ 95 ರೂ. ಹೆಚ್ಚಳವಾಗಿದ್ದು, ಪ್ರಸ್ತುತ 13,500 ರೂ.ಗೆ ತಲುಪಿದೆ. ಬೆಳ್ಳಿ ಒಂದು ಗ್ರಾಂಗೆ 10 ರೂ. ಹೆಚ್ಚಳವಾಗಿದ್ದು, 315 ರೂ. ತಲುಪಿದೆ.

ಚಿನ್ನ ಮತ್ತು ಬೆಳ್ಳಿ ದರಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಗಗನಮುಖಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ದರವು ಪ್ರತಿ ಗ್ರಾಂಗೆ 6 ಸಾವಿರಕ್ಕೂ ಹೆಚ್ಚಾಗಿದ್ದರೆ ಪ್ರತಿ ಕೆಜಿಗೆ ಬೆಳ್ಳಿ ದರವು 2 ಲಕ್ಷ ರೂ.ಗೂ ಹೆಚ್ಚು ಏರಿಕೆಯಾಗಿದೆ. ಬೆಳ್ಳಿ ದರ ಮೂರು ಪಟ್ಟು ಹೆಚ್ಚಳವಾದಂತಾಗಿದೆ.

ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತವಾದರೂ ಸದ್ಯಕ್ಕೆ ದರಗಳು ಗಮನಾರ್ಹ ಪ್ರಮಾಣದಲ್ಲಿ ಇಳಿಯುವುದಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸುರಕ್ಷಿತ ಎಂಬ ಕಾರಣಕ್ಕಾಗಿ ಹೂಡಿಕೆದಾರರು ಹೆಚ್ಚು ಚಿನ್ನ ಮತ್ತು ಬೆಳ್ಳಿ ಮೇಲೆ ಬಂಡವಾಳ ತೊಡಗಿಸುತ್ತಿದ್ದಾರೆ. ಅಲ್ಲದೆ ಜಾಗತಿಕವಾಗಿ ಉಂಟಾಗುತ್ತಿರುವ ವಿದ್ಯಮಾನಗಳ ಪರಿಣಾಮದಿಂದಲೂ ಬೆಲೆ ಹೆಚ್ಚಳವಾಗುತ್ತಿದೆ.

ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿಯನ್ನು ಹೆಚ್ಚಳ ಮಾಡಿವೆ. ಅಲ್ಲದೆ ಇವಿ ವಾಹನಗಳಲ್ಲಿ ಬೆಳ್ಳಿಯ ಬಳಕೆ ಮಾಡುವುದರಿಂದ ಆ ವಾಹನಗಳ ಉತ್ಪಾದನೆ ಹೆಚ್ಚಾದಂತೆ ಬೆಳ್ಳಿಯ ಬೇಡಿಯೂ ಹೆಚ್ಚಾಗುತ್ತದೆ. ಜೊತೆಗೆ ಚಿನ್ನಾಭರಣಗಳು ದುಬಾರಿಯಾಗಿದ್ದು, ಗ್ರಾಹಕರ ಕೈಗೆಟುಕುತ್ತಿಲ್ಲ. ಹೀಗಾಗಿ ಆಭರಣ ಪ್ರಿಯರು ಚಿನ್ನಲೇಪಿತ ಬೆಳ್ಳಿ ಆಭರಣಗಳತ್ತ ಮುಖ ಮಾಡಿದ್ದಾರೆ. ಇದರಿಂದ ಬೆಳ್ಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.

RELATED ARTICLES

Latest News