Thursday, April 16, 2026
Homeರಾಜ್ಯಡಿಜಿಪಿ ವಜಾಗೊಳಿಸಲು ಅವಕಾಶಗಳಿವೆ : ಗೃಹ ಸಚಿವ ಪರಮೇಶ್ವರ್‌

ಡಿಜಿಪಿ ವಜಾಗೊಳಿಸಲು ಅವಕಾಶಗಳಿವೆ : ಗೃಹ ಸಚಿವ ಪರಮೇಶ್ವರ್‌

There are chances of sacking DGP: Home Minister Parameshwara

ಬೆಂಗಳೂರು, ಜ.21- ಕಚೇರಿಯಲ್ಲಿಯೇ ಮಹಿಳೆಯೊಂದಿಗೆ ಸರಸ ಸಲ್ಲಾಪ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಡಿಸಿಆರ್‌ಇ ಡಿಜಿಪಿ ಡಾ.ಕೆ.ರಾಮಚಂದ್ರ ರಾವ್‌ ಅವರನ್ನು ತಕ್ಷಣಕ್ಕೆ ಅಮಾನತುಗೊಳಿಸಲಾಗಿದ್ದು, ವಿಚಾರಣೆಯಲ್ಲಿ ಆರೋಪಗಳು ಸಾಬೀತಾದರೆ ಸೇವೆಯಿಂದ ವಜಾಗೊಳಿಸಲು ಅವಕಾಶಗಳಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಸರ್ಕಾರ ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ತಮ ಸರ್ಕಾರ ರವಾನಿಸಿದೆ ಎಂದರು.

ನಿನ್ನೆ ನನಗೆ ಆರೋಗ್ಯ ಸರಿ ಇರಲಿಲ್ಲ, ಮನೆಯಲ್ಲಿ ಮಲಗಿದ್ದೆ. ಸದರಿ ಅಧಿಕಾರಿ ನನ್ನನ್ನು ಭೇಟಿ ಮಾಡಲು ಬಂದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಅನಾರೋಗ್ಯದ ಕಾರಣಕ್ಕೆ ಅವರನ್ನು ಭೇಟಿ ಮಾಡಲಾಗಲಿಲ್ಲ. ಒಂದು ವೇಳೆ ಆರೋಗ್ಯ ಸರಿಯಿದ್ದರೂ ಅವರನ್ನು ಭೇಟಿ ಮಾಡುತ್ತಿರಲಿಲ್ಲ. ಇಂತಹ ವರ್ತನೆ ಪ್ರದರ್ಶಿಸಿರುವವರನ್ನು ಭೇಟಿ ಮಾಡುವುದು ಸರಿಯಲ್ಲ ಎಂದರು.

ವಿಡಿಯೋಗಳು ಪ್ರಸಾರವಾಗುತ್ತಿದ್ದಂತೆ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ವಿವರಣೆ ಪಡೆದು ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಎಷ್ಟೇ ದೊಡ್ಡವರಾದರೂ ಇಂತಹ ವರ್ತನೆಯನ್ನು ಸಹಿಸಬಾರದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಮಚಂದ್ರರಾವ್‌ ಅವರನ್ನು ಬಂಧಿಸಬೇಕು ಎಂದು ಬಿಜೆಪಿಯ ನಾಯಕರು ಒತ್ತಾಯಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಅಮಾನತುಗೊಳಿಸಲಾಗಿದೆ. ವಿಚಾರಣೆ ನಡೆಯಲಿದೆ. ವಿಡಿಯೋಗಳು ನಕಲಿ ಎಂದು ಸದರಿ ಅಧಿಕಾರಿ ಹೇಳಿದ್ದಾರೆ. ಅದನ್ನು ನಂತರದಲ್ಲಿ ಪರಿಶೀಲನೆ ನಡೆಸಲಾಗುವುದು. ಮೇಲ್ನೋಟಕ್ಕೆ ಕಂಡು ಬಂದ ಅಂಶಗಳನ್ನು ಆಧರಿಸಿ ಕ್ರಮ ಕೈಗೊಂಡಿದ್ದೇವೆ ಎಂದರು.

ಈ ರೀತಿಯ ಘಟನೆಗಳು ಪೊಲೀಸ್‌‍ ಇಲಾಖೆಯಲ್ಲಷ್ಟೇ ಅಲ್ಲ ಯಾವ ಇಲಾಖೆಯಲ್ಲೂ ನಡೆಯಬಾರದು. ಯಾರಿಗೂ ಇವು ಗೌರವ ತರುವುದಿಲ್ಲ. ವಿಡಿಯೋದಲ್ಲಿರುವ ಸಂತ್ರಸ್ತ ಮಹಿಳೆ, ಸೇರಿದಂತೆ ಹೆಚ್ಚಿನ ಯಾವ ವಿವರಗಳೂ ಸದ್ಯಕ್ಕಿಲ್ಲ. ತನಿಖೆಯ ನಂತರವಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿ ಹೇಳಲು ಸಾಧ್ಯ ಎಂದರು.ಘಟನೆಯಿಂದ ಮುಖ್ಯಮಂತ್ರಿ ಅವರಷ್ಟೇ ಅಲ್ಲ ನಾನು ಕೂಡ ಆಘಾತಕ್ಕೆ ಒಳಗಾಗಿದ್ದೇನೆ ಎಂದರು.

RELATED ARTICLES

Latest News