ಬೆಂಗಳೂರು,ಡಿ.7- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಯನ್ನೇ ಅಲುಗಾಡಿಸುತ್ತಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ನಗರದ ಮಧ್ಯಭಾಗದಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ 23 ನಿವೇಶನಗಳನ್ನು ಕೇವಲ 3 ಸಾವಿರದಿಂದ 6 ಸಾವಿರಕ್ಕೆ ಮಾರಾಟ ಮಾಡಿ 300 ಕೋಟಿ ವಂಚನೆ ಮಾಡಿರುವುದನ್ನು ಇ.ಡಿ ಪತ್ತೆಹಚ್ಚಿದೆ. ಈ ಹಿಂದೆ ಮೈಸೂರಿನಲ್ಲಿ ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಅವರು ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಎಂಬುವರ ಜೊತೆ ಸೇರಿ ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಕೇವಲ 3 ಸಾವಿರ ರೂ. ಸೇವಾ ಶುಲ್ಕ ವಿಧಿಸಿಕೊಂಡು ಕೋಟಿ ಬೆಲೆ ಬಾಳುವ 23 ನಿವೇಶನಗಳನ್ನು ಮಂಜೂರು ಮಾಡಿದ್ದಾರೆ.
ಪ್ರೋತ್ಸಾಹದಾಯಕ ಯೋಜನೆಯಡಿ ಈ 23 ನಿವೇಶನಗಳನ್ನು ಕೇವಲ 5 ದಿನಗಳಲ್ಲಿ ಮಂಜೂರು ಮಾಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಮೈಸೂರಿನ ಕಾರ್ತಿಕ ಬಡಾವಣೆಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಎಂಬುವರು ಈ ನಿವೇಶನಗಳನ್ನು ಖರೀದಿಸಿದ್ದು ಮುಡಾಗೆ ಒಟ್ಟು 300 ಕೋಟಿ ನಷ್ಟ ಉಂಟು ಮಾಡಿದ್ದಾರೆಂದು ಅಂದಾಜಿಸಲಾಗಿದೆ. ಮತ್ತೊಂದು ವಿಶೇಷವೆಂದರೆ 5 ಲಕ್ಷ ಶುಲ್ಕ ಪಾವತಿಸಬೇಕಾದ ಸ್ಥಳದಲ್ಲಿ ಕೇವಲ 600 ರೂ. ಪಾವತಿ ಮಾಡಿಕೊಂಡು ಮಂಜುನಾಥ್ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ.
ಮೂಲ ಮಾಲೀಕರ ಹೆಸರು ಕೈಬಿಟ್ಟು ಜಿಪಿಎ ಪ್ರತಿನಿಧಿ ಮಂಜುನಾಥ್ ನೇರವಾಗಿ ತಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಮೈಸೂರಿನ ವಿಜಯನಗರ ಬಡಾವಣೆಯ 3 ಮತ್ತು 4ನೇ ಹಂತದಲ್ಲಿ ಈ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. 60-40 ನಿವೇಶನಗಳ ಬೆಲೆ ಈಗ ಇಲ್ಲಿ ಒಂದೂವರೆ ಕೋಟಿಯಿಂದ 2 ಕೋಟಿ ರೂ. ಮಾರುಕಟ್ಟೆ ದರ ಇದ್ದು, ಇಷ್ಟು ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ಹೇಗೆ ಮಾರಾಟ ಮಾಡಲಾಗಿದೆ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಒಂದು ವರ್ಷದ ಹಿಂದೆಯೇ ಮುಡಾ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಮುಡಾ ಆಯುಕ್ತ ದಿನೇಶ್, ಉದ್ಯಮಿ ಮಂಜುನಾಥ್ ಮೇಲೆ ಲೋಕಾಯುಕ್ತ ಮೇಲೆ ಒಂದು ವರ್ಷದ ಹಿಂದೆಯೇ ದೂರು ಕೊಡಲಾಗಿತ್ತು. ಕೃಷ್ಣ ಎಂಬುವರಿಂದ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಲಾಗಿದೆ. ಒಬ್ಬನೇ ವ್ಯಕ್ತಿಯಿಂದ ಸರ್ಕಾರಕ್ಕೆ 300 ಕೋಟಿಗೂ ಅಧಿಕ ನಷ್ಟವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ. ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳು, ನೌಕರರು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲಾಗಿತ್ತು.
150 ಪುಟದ ದಾಖಲೆ ಒಂದು ವರ್ಷದ ಹಿಂದೆಯೇ ಕೊಟ್ಟರೂ ಲೋಕಾಯುಕ್ತ ಮೌನವಹಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಇದರಿಂದ ಲೋಕಾಯುಕ್ತ ಅಂದಿನ ಎಸ್ಪಿ ಮೇಲೆಯೇ ಅನುಮಾನ ಮೂಡಿದೆ. ಎಲ್ಲಾ ದಾಖಲೆ ಇದ್ದರು ಒಂದೇ ಒಂದು ನೋಟಿಸ್ ಕೊಡುವ ಕೆಲಸವನ್ನು ಲೋಕಾಯುಕ್ತ ಏಕೆ ಮಾಡಲಿಲ್ಲ ಎಂಬ ಪ್ರಶ್ನೆ ವ್ಯಕ್ತವಾಗಿದೆ. ನಿವೇಶನ ಮಂಜೂರು: ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್‌ಕುಮಾರ್ ಅವರು 2023 ಏಪ್ರಿಲ್ 5ರಂದು 60-40 ಅಳತೆಯ ಮೂರು ನಿವೇಶನ, 06ರಂದು 60-40 ಅಳತೆಯ 6 ನಿವೇಶನ, 18ರಂದು 60-40 ಅಳತೆಯ 8 ನಿವೇಶನ, 19ರಂದು 60-40 ಅಳತೆಯ 9 ನಿವೇಶನಗಳನ್ನು ಮಂಜೂರು ಮಾಡಿದ್ದಾರೆ.