ಬೆಂಗಳೂರು,ಜ.20- ಸೈಬರ್ ಖದೀಮರು ಆನ್‌ಲೈನ್ ಮುಖಾಂತರ ಮೇಲ್ ಐಡಿಗಳನ್ನು ಹ್ಯಾಕ್ ಮಾಡಿ ಔಷಧಿ ಕಂಪನಿಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದ ಜಾಲವನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಭೇದಿಸಿ 2.16 ಕೋಟಿ ಹಣ ವಾಪಸ್ ದೂರುದಾರರ ಖಾತೆಗೆ ಮರುಪಾವತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೈಬರ್ ವಂಚಕರು ವಿದೇಶದಲ್ಲಿ ಕುಳಿತು ಈ ಕಂಪನಿಯ ಇ-ಮೇಲ್ ಐಡಿಯನ್ನು ಸ್ಪೂಫ್ ಮಾಡಿದ್ದು, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಔಷಧಿ ಕಂಪನಿ ಜೊತೆ ವ್ಯವಹಾರಗಳಿಗೆ ಬಳಸುತ್ತಿದ್ದರು.ಸ್ಪೂಫ್ ಮಾಡಲಾದ ಇ-ಮೇಲ್ ಐಡಿಯನ್ನು ಬಳಸಿ 2.16 ಕೋಟಿ ಹಣವನ್ನು ಗುಜರಾತ್ ರಾಜ್ಯದ ಅಹಮದಬಾದ್ ಮ್ಯೂಲ್ ಬ್ಯಾಂಕ್ ಖಾತೆಗೆ ವರ್ಗಾಹಿಸಿರುವುದು ಕಂಪನಿಯ ಗಮನಕ್ಕೆ ಬಂದಿದೆ.
ತಕ್ಷಣ ಕಳೆದ ಫೆ.2 ರಂದು ಗ್ರೂಪ್ ಫಾರ್ಮ ಕಂಪನಿಯ ಪ್ರತಿನಿಧಿಗಳು ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸೈಬರ್ ಕ್ರೈಂ ಪೊಲೀಸರು ತಕ್ಷಣ ಬ್ಯಾಂಕ್ ಆಫ್ ಬರೋಡಾಗೆ ನೋಟೀಸ್ ಜಾರಿ ಮಾಡಿ ಮ್ಯೂಲ್ ಖಾತೆಯನ್ನು ಫ್ರೀಜ್ ಮಾಡುವಂತೆ ತಿಳಿಸಿ ತನಿಖೆ ಕೈಗೊಂಡಾಗ ಈ ಸ್ಪೂಫ್ ಮಾಡಲಾದ ಇ-ಮೇಲ್ ಐಡಿಯೂ ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ನಂತರ ತನಿಖೆ ಮುಂದುವರೆಸಿ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಕಂಪನಿಗೆ ಸೇರಿದ ಸಂಪೂರ್ಣ ಮೊತ್ತವನ್ನು ಮರುಪಾವತಿಸುವಲ್ಲಿ ಯಶಸ್ವಿಯಾಗುವ ಮೂಲಕ ಹೈದರಾಬಾದ್ ಮೂಲದ ಖ್ಯಾತ ಔಷಧಿ ಕಂಪನಿಯಾದ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್‌ಗೆ ಸಂಬಂಧಿಸಿದ ಇ-ಮೇಲ್ ಸ್ಪೂಫಿಂಗ್ ಮೂಲಕ ನಡೆದ ಭಾರಿ ಹಣಕಾಸು ವಂಚನೆ ಪ್ರಕರಣವನ್ನು ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ತಂಡದ ಕಾರ್ಯಕ್ಷಮತೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಶ್ಲಾಘಿಸಿದ್ದಾರೆ.
ಮನೆಗಳ್ಳನ ಬಂಧನ: 42 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶ
ಬೆಂಗಳೂರು,ಜ.20- ಮನೆಗಳ್ಳತನ ಮಾಡಿ ಚಿನ್ನಾಭರಣ ಗಳನ್ನು ಮಾರಾಟ ಮಾಡಿದ್ದ ಆರೋಪಿಯೊಬ್ಬನನ್ನು ಮಾದನಾಯನಹಳ್ಳಿ ಠಾಣೆ ಪೊಲೀಸರು ಬಂಧಿಸಿ 42 ಲಕ್ಷ ರೂ. ಮೌಲ್ಯದ 348 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಅಂಚೆಪಾಳ್ಯ ಗ್ರಾಮದ ನಿವಾಸಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ತಮಿಳುನಾಡಿಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಗೇಟ್ ಮತ್ತು ಮನೆಯ ಮುಂಬಾಗಿಲ ಬೀಗವನ್ನು ಮುರಿದು, ಒಳ ನುಗ್ಗಿ ಮನೆಯ ಮೊದಲ ಮಹಡಿಯ ಕೊಠಡಿಯ ವಾರ್ಡ್ ರೋಬಿನಲ್ಲಿದ್ದ 248 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಅಂದು ಮಧ್ಯಾಹ್ನ ಪಕ್ಕದ ಮನೆಯವರು ಇವರ ಮನೆಯ ಬಾಗಿಲ ಬೀಗ ಮುರಿದಿರುವುದು ಗಮನಿಸಿ ತಕ್ಷಣ ಮನೆ ಮಾಲೀಕರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಮನೆ ಮಾಲೀಕರು ತಮಿಳುನಾಡಿನಿಂದ ವಾಪಸ್ಸು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ, ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸಂಬಂಧಿಕನೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡಿದ್ದಾಗಿ ಹೇಳಿದ್ದಾನೆ.
ಇದೇ ವ್ಯಾಪ್ತಿಯಲ್ಲಿ ಮತ್ತೊಂದು ಮನೆಗಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿ ಕಳವು ಮಾಡಿ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಪಾಂಡವಪುರದ 2 ಜ್ಯೂವೆಲರಿ ಅಂಗಡಿಗಳು ಮತ್ತು ಮೈಸೂರಿನ 1 ಜ್ಯೂವೆಲರಿ ಅಂಗಡಿಗಳಿಂದ ಒಟ್ಟು 348 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನವನ್ನು ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ವಶಕ್ಕೆ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ. ಇನ್ಸ್ ಪೆಕ್ಟರ್ ಮುರಳಿಧರ, ಸಬ್‌ಇನ್ಸ್ ಪೆಕ್ಟರ್ ಸೋಮಶೇಖರ್‌ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
