ಅಮರಾವತಿ, ಡಿ.10– ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸಹೋದರ ಕೆ.ನಾಗಬಾಬು ಅವರು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಪ್ರಕಟಿಸಿದ್ದಾರೆ.
ಪವನ್ ಕಲ್ಯಾಣ್ ಅವರ ಹಿರಿಯ ಸಹೋದರ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಸಹೋದರ ನಾಗಬಾಬು ಅವರು ನಟ ಮತ್ತು ಚಲನಚಿತ್ರ ನಿರ್ಮಾಪಕರೂ ಆಗಿದ್ದಾರೆ. ಜನಸೇನೆಯ ಪ್ರಧಾನ ಕಾರ್ಯದರ್ಶಿಯಾಗಿ ಅವರು ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದರು.
ರಾಜ್ಯಸಭೆಗೆ ಉಪಚುನಾವಣೆಗಾಗಿ ಟಿಡಿಪಿ ಇಬ್ಬರು ಅಭ್ಯರ್ಥಿಗಳನ್ನು ಹೆಸರಿಸಿದ್ದರಿಂದ ಮತ್ತು ತನ್ನ ಮೈತ್ರಿ ಪಾಲುದಾರ ಬಿಜೆಪಿಗೆ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದ್ದರಿಂದ, ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಂದು ಪಾಲುದಾರ ಜನಸೇನೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.
175 ಸದಸ್ಯರ ವಿಧಾನಸಭೆಯಲ್ಲಿ ಟಿಡಿಪಿ ನೇತತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತಕ ಒಕ್ಕೂಟ (ಎನ್ಡಿಎ) 164 ಶಾಸಕರನ್ನು ಹೊಂದಿದೆ. ಟಿಡಿಪಿ 135 ಸದಸ್ಯರನ್ನು ಹೊಂದಿದ್ದರೆ, ಜನಸೇನೆ ಮತ್ತು ಬಿಜೆಪಿ ಕ್ರಮವಾಗಿ 21 ಮತ್ತು 8 ಸ್ಥಾನಗಳನ್ನು ಹೊಂದಿವೆ.
ನಾಗೇಂದ್ರ ಬಾಬು ಎಂದೂ ಕರೆಯಲ್ಪಡುವ ನಾಗಬಾಬು ಅವರು ಜನಸೇನೆಯಿಂದ ನಾಲ್ಕನೇ ಸಚಿವರಾಗಲಿದ್ದಾರೆ. ನಾಗಬಾಬು ಅವರು ವಿಧಾನಸಭೆಯ ಸದಸ್ಯರಲ್ಲದ ಕಾರಣ, ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಸಮಿಶ್ರವು ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ. ಪ್ರಸ್ತುತ, ಚಂದ್ರಬಾಬು ನಾಯ್ಡು ನೇತತ್ವದ ಸಂಪುಟದಲ್ಲಿ ಜನಸೇನೆಯಿಂದ ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್, ನಾದೆಂಡ್ಲ ಮನೋಹರ್ ಮತ್ತು ಕಂದುಲ ದುರ್ಗೇಶ್ ಸಚಿವರಾಗಿದ್ದಾರೆ.
ರಾಜ್ಯ ಸಚಿವ ಸಂಪುಟವು ಗರಿಷ್ಠ 25 ಸದಸ್ಯರನ್ನು ಹೊಂದಬಹುದು. ಚಂದ್ರಬಾಬು ನಾಯ್ಡು ಮತ್ತು 23 ಸಚಿವರು ಜೂನ್ 12 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಟಿಡಿಪಿ ಜನಸೇನೆಯಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬರನ್ನು ಸಚಿವರನ್ನಾಗಿ ಸೇರಿಸಿಕೊಂಡಿತ್ತು. ಜನಸೇನೆಗೆ ಒಂದು ಸ್ಥಾನ ಖಾಲಿ ಉಳಿದಿತ್ತು.