ಬೆಳಗಾವಿ, ಡಿ.13- ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವುದನ್ನುತಪ್ಪಿಸಲು ರಾಜಕಾಲುಗಳ ಸಮಗ್ರ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದಲ್ಲಿ ಮಳೆ ಹಾನಿಯ ಕುರಿತು ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ ಅವರು, ಬೆಂಗಳೂರಿನಲ್ಲಿ ರಾಜಕಾಲುವೆಗಳ ದುರಸ್ತಿ, ರಾಜ್ಯದ ಹಲವೆಡೆ ಭೂ ಕುಸಿತ ಸೇರಿದಂತೆ ಇತರೆ ಅವಗಡಗಳಿಗೆ ಶಾಶ್ವತ ಪರಿಹಾರಕ ಕಂಡುಕೊಳ್ಳಲು ಒಟ್ಟು ಐದು ಸಾವಿರ ಕೋಟಿ ರೂಪಾಯಿಗಳ ಸಮಗ್ರಯೋಜನೆ ತಯಾರಾಗಿದೆ ಎಂದು ಹೇಳಿದ್ದಾರೆ.
ಮಳೆಯಿಂದ ಬೆಂಗಳೂರಿನಲ್ಲೂ ಸಾಕಷ್ಟು ಹಾನಿಯಾಗುತ್ತಿದೆ. ನೀರು ಸರಾಗವಾಗಿ ಹರಿಯದೆ ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಹೀಗಾಗಿ ನೀರು ಹರಿಯುವ ರಾಜಕಾಲುವೆಗಳನ್ನು ಪರಿಪಕ್ವವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲಿ ಕಂದಾಯ ಇಲಾಖೆಗೂ ಕೆಲ ಸೂಚನೆಗಳನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ 856 ಕಿ ಲೋ ಮೀಟರ್ ಪ್ರಾಥಮಿಕ ಹಾಗೂ ಎರಡನೇ ಹಂತದ ರಾಜಕಾಲುವೆಗಳಾಗಿವೆ. ಅಲ್ಲದೆ ರಾಜಕಾಲವೆ ಇಲ್ಲದ ಕಡೆ ಮುರನೆ ಹಂತದ ಟೆಸ್ರರಿ ಕಾಲುವೆಗಳು 200 ಕಿಲೋ ಮಿಟರ್ ಇವೆ. ಒಟ್ಟ 1100 ಕಿ.ಮೀ ಕಾಲುವೆಗಳನ್ನು ನೀರು ಸರಾಗವಾಗಿ ಹರಿಯುವಂತೆ ಶಾಶ್ವತವಾಗಿ ಮರು ರೂಪಣೆ ಮಾಡಲಾಗುತ್ತದೆ ಎಂದರು.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 570 ಕಿಮೀ ಅಭಿವೃದ್ಧಿಯಾಗಿತ್ತು.
ತದನಂತರ ಐದು ವರ್ಷದಲ್ಲಿ 100 ಕಿ.ಮೀ ಮಾತ್ರ ಅಭಿವೃದ್ಧಿಯಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸಭೆ ನಡೆಸಿ ರಾಜಕಾಲುವೆಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದಾರೆ. ಡಿಸಾಸ್ಟರ್ ಮಿಟಿಗೇಷನ್ ಫಂಡ್ ನಿಂದ ಮೊದಲ ಹಂತದಲ್ಲಿ 240 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ. ಕೆಲವೇ ತಿಂಗಳಲ್ಲಿ ಈ ಕಾಮಗಾರಿ ಆರಂಭವಾಗಲಿದೆ.
ಕಾಲುವೆಗಳ ಕಾಮಗಾರಿಯನ್ನು ಸಂಪೂರ್ಣ ಒಂದೇ ಅವಧಿಗೆ ಮುಗಿಸಲು ಮುಖ್ಯಮಂತ್ರಿ ಸೂಚಿಸಿದ್ದು, ಸಂಪನೂಲ ಕ್ರೋಢಿಕರಣಕ್ಕೆ ವಿಶ್ವ ಬ್ಯಾಂಕ್ ಜೊತೆ ಹತ್ತು ಬಾರಿ ಸಭೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಜಲಮಂಡಳಿ ಇಲ್ಲದೆ ಇರುವ ಕಡೆಗೆ ಕೊಳಗೆ ನೀರು ರಾಜಕಾಲುವೆಗೆ ಬರುತ್ತಿದೆ, ಅದನ್ನು ತಡೆಯಬೇಕಿದೆ.
ಬಾಕಿ ಇರುವ 300 ಕಿ.ಮಿ. ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಬೇಕು. ಒಟ್ಟಾರೆ ಮೂರು ಸಾವಿರ ಕೋಟಿ ರೂಪಾಯಿಗಳನ್ನು ರೂಪಿಸಲಾಗಿದೆ. ಅದರಲ್ಲಿ ಎರಡು ಸಾವಿರ ಕೋಟಿ ರೂಪಾಯಿಗಳನ್ನು ಬಿಬಿಎಂಪಿಗೆ ಹಾಗೂ ಹೊರ ವಲಯದ ಹಳ್ಳಿಗಳಲ್ಲಿ ಒಳಚರಂಡಿ ನಿರ್ಮಿಸಲು ಬಿಡಬ್ಲ್ಯೂಎಸ್‌ಎಸ್‌ಬಿಗೆ ಒಂದು ಸಾವಿರ ಕೋಟಿ ರೂಪಾಯಿಗಳ ನೀಡಲಾಗುವುದು.
ಬೆಂಗಳೂರಿನ ನೀರನ್ನು ಎತ್ತಿ ಅಕ್ಕ ಪಕ್ಕದ ಜಿಲ್ಲೆಗಳಿಗೆ ಹರಿಸಲು 200 ಕೋಟಿ ಮತ್ತು ರಾಜ್ಯಾದ್ಯಂತ ಭೂ ಕುಸಿತ ತಪ್ಪಿಸಲು ಸೇರಿ ಒಟ್ಟಾರೆ ಐದು ಸಾವಿರ ಕೋಟಿ ರೂಪಾಯಿಗಳ ಯೋಜನೆ ರೂಪಿಸಲಾಗಿದೆ. ಇದಕ್ಕೆ ವಿಶ್ವ ಬ್ಯಾಂಕ್ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಸಾಲ ರೂಪದಲ್ಲಿ ನೀಡುತ್ತವೆ. ಇದಕ್ಕಾಗಿ ಒಪ್ಪಂದವಾಗಿವೆ ಉಳಿದ ಎರಡು ಸಾವಿರ ಕೋಟಿ ರೂಪಾಯಿಗಳನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿ ಮತ್ತು ಹಣಕಾಸು ಇಲಾಖೆಯಿಂದ ಪಡೆಯಲಾಗುವುದು ಎಂದರು.
ನಗರ ಪ್ರದೇಶಗಳಲ್ಲಿ ಮಳೆಯಾದಾಗ ಮನೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಎಲ್ಲಾ ಜಿಲ್ಲೆಗಳಲ್ಲಿ 184 ಕೋಟಿ ರೂಪಾಯಿಗಳ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರವಾಹ ತಡೆಯಲು ಕಾಲುವೆ ನಿರ್ಮಾಣ, ಸಂಪರ್ಕ ಕಡಿತಗೊಳ್ಳುವ ವೇಳೆಯಲ್ಲಿ ಅಗತ್ಯವಾದ ಸೇತುವೆ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಜಿಲ್ಲೆಗಳಿಂದ ಪ್ರಸ್ತಾವನೆ ಪಡೆದು 259 ಕಾಮಗಾರಿಗಳನ್ನು ರೂಪಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನೂ 300 ಕೋಟಿ ರೂಪಾಯಿಗಳನ್ನು ಡಿಸಾಸ್ಟರ್ ಮಿಟಿಗೇಷನ್ ಫಂಡ್ ನಲ್ಲಿ ಮೂಲಕ ಬಳಕೆ ಮಾಡಲಾಗುವುದು ಎಂದರು.