ಬೆಳಗಾವಿ,ಡಿ.19- ವಿಧಾನಸಭೆ ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ವಿಧಾನಮಂಡಲಗಳ ಉಭಯಸದನಗಳಲ್ಲಿಂದು ಕೋಲಾಹಲ ವಾತಾವರಣ ನಿರ್ಮಾಣವಾಯಿತು.
ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಎರಡೂ ಬದಿಯ ಶಾಸಕರು ಪರಸ್ಪರ ಆರೋಪ-ಪ್ರತ್ಯಾರೋಪ, ಧಿಕ್ಕಾರ ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಗದ್ದಲ ಎಬ್ಬಿಸಿದರು. ಹೀಗಾಗಿ ಸಭಾಧ್ಯಕ್ಷ ಯು.ಟಿ.ಖಾದರ್ರವರು ಎಷ್ಟೇ ಮನವಿ ಮಾಡಿದರೂ ಪರಿಸ್ಥಿತಿ ತಿಳಿಯಾಗದೆ 2 ಬಾರಿ ಕಲಾಪವನ್ನು ಮುಂದೂಡುವ ಅನಿವಾರ್ಯತೆ ಸೃಷ್ಟಿಯಾಯಿತು.
ಚಳಿಗಾಲದ ಬೆಳಗಾವಿ ಅಧಿವೇಶನದ ಕೊನೆ ದಿನವಾದ ಇಂದು ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿತು. ಆಡಳಿತ ಪಕ್ಷದ ಪ್ರತಿಯೊಬ್ಬ ಶಾಸಕರು ಹಾಗೂ ಸಚಿವರ ಆಸನಗಳ ಮುಂದೆ ಅಂಬೇಡ್ಕರ್ರವರ ಫೋಟೊವನ್ನು ಅಳವಡಿಸಿ ನೀಲಿಮಯದ ವಾತಾವರಣ ನಿರ್ಮಿಸಲಾಗಿತ್ತು.
ಇತ್ತ ವಿರೋಧಪಕ್ಷಗಳಾದ ಬಿಜೆಪಿ, ಜೆಡಿಎಸ್ನ ಶಾಸಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನಾ ರೀತಿಯ ಘೋಷಣೆಗಳ ಭಿತ್ತಿಪತ್ರಗಳನ್ನು ತಮ ಆಸನಗಳ ಮುಂದೆ ಅಳವಡಿಸಿಕೊಂಡಿದ್ದರು.
ಅಂಬೇಡ್ಕರ್ ಅವರನ್ನು ಸೋಲಿಸಿದ್ದ ಕಾಂಗ್ರೆಸ್, ಅಪಮಾನಿಸಿದ್ದು ಕಾಂಗ್ರೆಸ್, ಕಳಪೆ ಔಷಧಿ ಉಪಯೋಗಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಸಿದ್ದರಾಮಯ್ಯ ಅವರ ಸರ್ಕಾರ ತೊಲಗಲಿ, ಬಡವರ ಜೀವ ಉಳಿಯಲಿ. ಆರೋಗ್ಯ ಸಚಿವ ದಿನೇಶ್ಗುಂಡೂರಾವ್ ತೊಲಗಲಿ, ಅಮಾಯಕರ ಜೀವ ಉಳಿಯಲಿ.
ಅನ್ನದಾತರ ಜಮೀನು ಕಬಳಿಸಿದ ಜಮೀರ್ಗೆ ಧಿಕ್ಕಾರ, ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಲಿ, ಜನರಿಗೆ ನ್ಯಾಯ ದೊರಕಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ ಎಂಬೆಲ್ಲಾ ಘೋಷಣೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬಿತ್ತಿಪತ್ರಗಳ ಮೂಲಕ ಅಳವಡಿಸಿಕೊಂಡಿದ್ದರು. ಇತ್ತ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಅಂಬೇಡ್ಕರ್ ಹೆಸರು ಹೇಳುವುದು ಒಂದು ವ್ಯಸನ ಎಂದಿರುವ ಕೇಂದ್ರ ಗೃಹಸಚಿವರನ್ನು ವಜಾ ಮಾಡಬೇಕು ಎಂದು ಘೋಷಣೆ ಕೂಗುತ್ತಿದ್ದರು.
ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಜೈಭೀಮ್ ಘೋಷಣೆಗಳು ಮೊಳಗಿದವು. ಶಾಸಕರ ಜೊತೆಗೆ ಸಚಿವರುಗಳೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಶಾಸಕರು ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್, ಅಪಮಾನಿಸಿದ್ದು ಕಾಂಗ್ರೆಸ್ ಎಂದು ಘೋಷಣೆ ಕೂಗಿದರು. ಆಡಳಿತ ಪಕ್ಷದ ಶಾಸಕರು, ಸಚಿವರು ಅಂಬೇಡ್ಕರ್ ಫೋಟೊ ಹಿಡಿದು ಸಭಾಧ್ಯಕ್ಷರ ಮುಂದಿನ ಬಾವಿಯ ಸಮೀಪಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರೆ, ಬಿಜೆಪಿ ಮತ್ತು ಜೆಡಿಎಸ್ನ ಶಾಸಕರು ಅದೇ ರೀತಿ ಬಾವಿಯ ಸುತ್ತಳತೆಗೆ ಬಂದು ನಿಂತು ಘೋಷಣೆ ಕೂಗುವ ಜೊತೆಗೆ ಕಾಗದ ಪತ್ರಗಳನ್ನು ಹರಿದೆಸೆದು ಘೋಷಣೆ ಕೂಗಿದರು.
ಪರಿಸ್ಥಿತಿ ನಿಭಾಯಿಸಲು ಸಭಾಧ್ಯಕ್ಷ ಯು.ಟಿ.ಖಾದರ್ ಹರಸಾಹಸಪಟ್ಟರು. ಕೊನೆಯ ದಿನದ ಕಲಾಪ ಸುಗಮವಾಗಿ ನಡೆಯಲಿ, ಜನಪರ ಚರ್ಚೆಯಾಗಲಿ, ಸಹನೆಯಿಂದ ವರ್ತಿಸಿ ಎಂದು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಬಿತ್ತಿಪತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದು ಹಲವು ಬಾರಿ ತಿಳಿ ಹೇಳಿದರೂ ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಖುದ್ದು ಸಚಿವರೇ ಘೋಷಣೆ ಕೂಗುತ್ತಿದ್ದುದು ಅಚ್ಚರಿ ಮೂಡಿಸುತ್ತಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು. ಪರಿಸ್ಥಿತಿಗೆ ತಹಬದಿಗೆ ಬರದಿದ್ದಾಗ ಸಭಾಧ್ಯಕ್ಷರು ಮತ್ತೆ ಕಲಾಪವನ್ನು 5 ನಿಮಿಷಗಳ ಕಾಲ ಮುಂದೂಡಿದರು.