ಬೆಳಗಾವಿ,ಡಿ.19- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿ.ಟಿ.ರವಿ ಬಳಸಿದ್ದಾರೆ ಎನ್ನಲಾದ ಅಶ್ಲೀಲ ಪದ ವಿಧಾನಪರಿಷತ್ನಲ್ಲಿ ಭಾರೀ ಗದ್ದಲ, ಕೋಲಾಹಲ ಸೃಷ್ಟಿಸಿ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆೆ ಸಭಾಪತಿ ಬಸವರಾಜ ಹೊರಟ್ಟಿಯವರು ಸದನವನ್ನು 2 ಬಾರಿ ಮುಂದೂಡಿದ್ದರು. 3ನೇ ಬಾರಿ ಸದನ ಸೇರಿದಾಗ ಮತ್ತೆ ಅದೇ ಪರಿಸ್ಥಿತಿ ಉಂಟಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಆಗ ಮಧ್ಯಪ್ರವೇಶ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ರವರು, ಕುಡಿದು ಕಾರು ಹತ್ತಿಸಿ ಕೊಲೆ ಮಾಡಿದ್ದೀರಿ ಎಂದು ಹೇಳಿದ ಮಾತು ಸದನದ ದಿಕ್ಕನ್ನು ತಪ್ಪಿಸಿತು. ನಾನು ಕುಡಿಯುವುದಿಲ್ಲ. ಈ ರೀತಿ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡಬಾರದು. ಅದು ಆಕಸಿಕ ಘಟನೆ.
ನೀವು ಮಾತನಾಡಿದರೆ ನನಗೂ ಕೂಡ ಮಾತನಾಡಲು ಬರುತ್ತದೆ ಎಂದು ಸರಿ ಇರುವುದಿಲ್ಲ ಎಂದು ಎಚ್ಚರಿಕೆ ಪದಗಳನ್ನು ಬಳಸಿದರು.ನಾನು ಕುಡಿದು ವಾಹನ ಮಾಡಿದ್ದೇನೆ ಎನ್ನುವುದಾದರೆ ಕಾಂಗ್ರೆಸ್ ನಾಯಕ ರಾಹುಲ್ ಡ್ರಗ್ ಅಡಿಕ್ಟ್ ಎಂದು ನೇರ ಆರೋಪ ಮಾಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು.
ಗದ್ದಲದ ನಡುವೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಮಾತು ಮುಂದುವರೆಸಿದಾಗ ಕೆಂಡಾಮಂಡಲವಾದ ರವಿ, ಲಕ್ಷ್ಮೀಹೆಬ್ಬಾಳ್ಕರ್ ಕುರಿತು ಆಡಿದ ಮಾತು ಸದನದಲ್ಲಿ ಗದ್ದಲಕ್ಕೆ ಮುನ್ನುಡಿ ಬರೆಯಿತು. ಪರಸ್ಪರ ವೈಯಕ್ತಿಕ ಮಟ್ಟದಲ್ಲಿ ಪರಸ್ಪರ ಕಿತ್ತಾಡಿಕೊಂಡರಲ್ಲದೆ ಕೀಳುಮಟ್ಟದ ಭಾಷೆ ಪ್ರಯೋಗ ಮಾಡಿದರು.