ಮೆಲ್ಬೊರ್ನ್, ಡಿ.22- ಬಾಕ್ಸಿಂಗ್ ಡೇ ಟೆಸ್ಟ್ ನಿಮಿತ್ತ ಇಂದು ಬೆಳಗ್ಗೆ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ನಾಯಕ ರೋಹಿತ್ ಶರ್ಮಾ ಅವರು ಎಡ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ.
ನೆಟ್‌್ಸ ನಲ್ಲಿ ಥ್ರೋ ಡೌನ್ ಸ್ಪೆಷಾಲಿಸ್ಟ್ ಎಸೆದ ಚೆಂಡು ರೋಹಿತ್ ಶರ್ಮಾ ಅವರ ಪ್ಯಾಡ್ ಗೆ ಬಲವಾಗಿ ಬಡಿದಿದ್ದು ಹಿಟ್ ಮ್ಯಾನ್‌ರ ಮೊಣಕಾಲಿಗೆ ನೋವಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯು ಮೂರನೇ ಪಂದ್ಯದ ಅಂತ್ಯಕ್ಕೆ 1-1ರಲ್ಲಿ ಸಮಬಲ ಕಂಡಿದ್ದು, ಸರಣಿಯು ರೋಚಕತೆ ಮೂಡಿಸಿದೆ.
ಟೀಮ್ ಇಂಡಿಯಾ ಐಸಿಸಿ ಆಯೋಜನೆಯ ಡಬ್ಲ್ಯುಟಿಸಿಯ ಫೈನಲ್ ಹಂತಕ್ಕೆ ತಲುಪಬೇಕಾದರೆ ಉಳಿದೆರಡು ಪಂದ್ಯಗಳಲ್ಲಿ ಭಾರತ ಭಾರೀ ಅಂತರದಿಂದ ಗೆಲುವು ಸಾಧಿಸುವ ಒತ್ತಡಕ್ಕೆ ಸಿಲುಕಿರುವ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಗಾಯಕ್ಕೆ ಒಳಗಾಗಿರುವುದು ತಂಡದಲ್ಲಿ ಆತಂಕ ಸೃಷ್ಟಿಸಿದೆ.
ನೆಟ್‌್ಸ ಪ್ರಾಕ್ಟೀಸ್ ವೇಳೆ ಮೊಣಕಾಲಿನ ಗಾಯಕ್ಕೆ ಒಳಗಾದ ನಂತರ ನಾಯಕ ರೋಹಿತ್ ಶರ್ಮಾ ಅವರು ಅಭ್ಯಾಸವನ್ನು ಸ್ಥಗಿತಗೊಳಿಸಿ ಗಾಯಕ್ಕೆ ಐಸ್ ಪ್ಯಾಕ್ ನಿಂದ ಥೆರಪಿ ಮಾಡಿಸಿಕೊಳ್ಳುತ್ತಿರುವ ಫೋಟೋವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಾಹುಲ್ ಗೂ ಗಾಯ:
ಮೆಲ್ಬೊರ್ನ್ ಪಿಚ್ ಹೆಚ್ಚು ಬೌನ್ಸಿ ಆಗುವ ಲಕ್ಷಣಗಳನ್ನು ಹೊಂದಿದ್ದು , ನಿನ್ನೆ ನೆಟ್ಸ್ ಅಭ್ಯಾಸದ ವೇಳೆ ಕನ್ನಡಿಗ ಕೆ.ಎಲ್.ರಾಹುಲ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ಬಲಗೈ ತಗುಲಿದ್ದು ಗಾಯಕ್ಕೆ ಒಳಗಾಗಿದ್ದಾರೆ. ಆದರೆ ಅದೃಷ್ಟ ಎಂಬಂತೆ ಈ ಗಾಯಗಳು ಗಂಭೀರ ಸ್ವರೂಪಕ್ಕೆ ತಲುಪಿಲ್ಲದಿರುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಗೆ ಈ ಇಬ್ಬರು ಆಟಗಾರರು ಲಭ್ಯವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.
ಎಂಸಿಜಿ ಮೈದಾನದಲ್ಲಿ ಭಾರತ ಆಡಿರುವ 14 ಪಂದ್ಯಗಳಿಂದ ಕೇವಲ 4ರಲ್ಲಿ ಗೆಲುವು ಸಾಧಿಸಿದೆ. ಆದರೆ 2014ರ ನಂತರ ಈ ಮೈದಾನದಲ್ಲಿರುವ ಆಡಿರುವ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.