Monday, December 23, 2024
Homeರಾಜ್ಯ15,000 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ : ಹೆಚ್ಡಿಕೆ

15,000 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ : ಹೆಚ್ಡಿಕೆ

Union Min. HDK announces Rs15,000 cr revival plan for Bhadravati Visvesvaraya Iron & Steel Factory

ಮಂಡ್ಯ, ಡಿ.23-ಭದ್ರಾವತಿಯಲ್ಲಿರುವ ಸರ್‌ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸುಮಾರು 15,000 ಕೋಟಿ ರೂ.ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಕೈಗಾರಿಕಾಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆ ನಿಟ್ಟಿನಲ್ಲಿಯೇ ಭದ್ರಾವತಿ ಕಾರ್ಖಾನೆಗೆ ಮರುಜೀವ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು.

ಮೈಸೂರು ಮಹಾ ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಆಗಿತ್ತು. ಸಾವಿರಾರು ಜನರಿಗೆ ಅಲ್ಲಿ ಉದ್ಯೋಗ ಅವಕಾಶ ಸಿಕ್ಕಿತ್ತು. ಲಕ್ಷಾಂತರ ಜನರು ಪರೋಕ್ಷವಾಗಿ ಬದುಕು ಕಟ್ಟಿಕೊಂಡಿದ್ದರು. ಅಂತಹ ವೈಭವದ ದಿನಗಳು ಮರುಕಳಿಸುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದರು.

ಐಐಟಿ ಸ್ಥಾಪನೆಗೆ ಸಚಿವರ ಸ್ಪಂದನೆ: ಮಂಡ್ಯದ ಕೆಆರ್‌ಎಸ್‌‍ ಬಳಿ ಐಐಟಿ ಸ್ಥಾಪನೆ ಮಾಡುವ ಬಗ್ಗೆ ಶಾಸಕ ದಿನೇಶ್‌ ಗೂಳಿಗೌಡ ಮಾಡಿದ ಮನವಿಯ ಬಗ್ಗೆ ಸಕಾರಾತಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಈ ಬಗ್ಗೆ ಪರಿಶೀಲನೆ ಮಾಡೋಣ. ಸಂಬಂಧಪಟ್ಟ ಕೇಂದ್ರ ಸಚಿವರ ಜತೆ ಖಂಡಿತಾ ಚರ್ಚೆ ಮಾಡುತ್ತೇನೆ. ರಾಜ್ಯದಲ್ಲಿ ಈಗಾಗಲೇ ಒಂದು ಐಐಟಿ ಸ್ಥಾಪನೆಯಾಗಿದೆ, ಎಲ್ಲರೂ ಒಟ್ಟಿಗೆ ಪ್ರಯತ್ನ ಮಾಡಿ ರಾಜ್ಯಕ್ಕೆ ಮತ್ತೊಂದು ಐಐಟಿ ತರೋಣ. ಅದಕ್ಕೆ ಎಲ್ಲರ ಸಹಕಾರ ಇರಲಿ ಎಂದು ತಿಳಿಸಿದರು.

ತ್ರಿಭಾಷಾ ಸೂತ್ರಕ್ಕಿಂತ ದ್ವಿಭಾಷಾ ಸೂತ್ರ ಅಗತ್ಯ ಎಂದು ಸಮ್ಮೇಳನದ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ. ಆದರೆ, ಗ್ರಾಮಿಣ ಪ್ರದೇಶದ ಪೋಷಕರಿಗೆ ಬೃಹತ್ತಾದ ಸವಾಲು ಇದೆ. ಒಂದು ಕಡೆ ತಮ ಮಾತೃಭಾಷೆ ಕನ್ನಡವನ್ನು ಉಳಿಸಬೇಕು, ಇನ್ನೊಂದು ಕಡೆ ಜಾಗತಿಕ ಓಟಕ್ಕೆ ಅನುಗುಣವಾಗಿ ತಮ ಮಕ್ಕಳ ಭವಿಷ್ಯವನ್ನೂ ಕಟ್ಟಿಕೊಡಬೇಕು. ಇಂತಹ ತಳಮಳ, ಸವಾಲು, ಆತಂಕದಲ್ಲಿ ಪೋಷಕರು ಇದ್ದಾರೆ. ಅದಕ್ಕೆ ಪರಿಹಾರವೇನು ಎಂಬ ಬಗ್ಗೆ ನಾವೆಲ್ಲರೂ ಆಲೋಚನೆ ಮಾಡಬೇಕು ಎಂದು ಎಂದು ಅವರು ಪ್ರತಿಪಾದಿಸಿದರು.

ಕನ್ನಡ ಶಾಲೆಗಳಿಗೆ ಪ್ರೋತ್ಸಾಹ ಕೊಡುವ ವಿಷಯದಲ್ಲಿ ಲೋಪಗಳಾಗಿವೆ. ಅದನ್ನು ನಾವು ಸರಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮಕ್ಕಳು, ಪೋಷಕರು ಮಾತೃಭಾಷೆಯಿಂದ ವಿಮುಖರಾಗುತ್ತಾರೆ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ಸಮಾಜದ ಶಾಂತಿ ಕಾಪಾಡುವ ಸಿನಿಮಾಗಳು ಬರಲಿ : ಇಂದಿನ ಚಿತ್ರರಂಗದಲ್ಲಿ ಉತ್ತಮ, ಸದಭಿರುಚಿಯ ಚಿತ್ರಗಳು ಬರಬೇಕು, ಉತ್ತಮ ಕಥೆಗಳ, ಸಮಾಜಕ್ಕೆ ಒಳ್ಳೆಯದು ಮಾಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಸಮಾಜದಲ್ಲಿ ನೆಮದಿಯ ವಾತಾವರಣ ನೆಲೆಸಬೇಕಿದೆ. ಮನುಷ್ಯ ಸಂಬಂಧಗಳು ಹಾಳಾಗಬಾರದು.

ಅವುಗಳನ್ನು ಕಾಪಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ಎಲ್ಲರೂ ಕೂತು ಪಂಕ್ತಿಭೋಜನ ಮಾಡುವ ದಿನಗಳು ಮತ್ತೆ ಬರಬೇಕು. ಈಗ ಎಲ್ಲವೂ ಇದೆ, ಆದರೆ ಏನೂ ಇಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಿಂದಿನ ನಮ್ಮ ಸಂಸ್ಕೃತಿ, ಬಾಂಧವ್ಯ, ಸಂಬಂಧಗಳು ಮರುಕಳಿಸಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

RELATED ARTICLES

Latest News