Monday, December 23, 2024
Homeಬೆಂಗಳೂರುಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಗೈಡ್‌ಲೈನ್ಸ್‌

ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಗೈಡ್‌ಲೈನ್ಸ್‌

Guidelines for New Year celebrations in Bengaluru

ಬೆಂಗಳೂರು, ಡಿ.23- ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಂತಹ ಚಟುವಟಿಕೆಗಳು ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಅಂತವರ ಮೇಲೆ ನಿಗಾ ವಹಿಸಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಎಲ್ಲಾ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಸೂಚಿಸಿದ್ದಾರೆ.

ಹೊಸ ಸಂಭ್ರಮಾಚರಣೆ ವೇಳೆ ಹದ್ದಿನ ಕಣ್ಣಿಡಲು ನಗರ ಪೊಲೀಸರು ಸಕಲ ತಯಾರಿ ಮಾಡಿಕೊಂಡಿದ್ದರೂ ಸುಮಾರು 36 ಅಂಶಗಳ ಗೈಡ್‌ಲೈನ್ಸ್‌ ನ್ನು ನಗರದ ಎಲ್ಲಾ ಅಧಿಕಾರಿಗಳಿಗೆ ಕಳುಹಿಸಿ ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುವ ಸಾಧ್ಯತೆ ಇದ್ದು, ಅಂತಹವರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆದೇಶಿಸಿದ್ದಾರೆ. ಹೊಸ ವರ್ಷಾಚರಣೆ ವಿರೋಧಿಸುವ ಸಂಘ ಸಂಸ್ಥೆಗಳ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸಿ ಎಂದು ಸೂಚಿಸಿರುವ ಅವರು, ಮಾಲ್ಗಳಲ್ಲಿ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿಡುವಂತೆ ಅಲ್ಲಿನ ಸಿಬ್ಬಂದಿಗಳಿಗೆ ಸೂಚನೆ ನೀಡಬೇಕು.

ಎಲ್ಲ ಅಧಿಕಾರಿಗಳು ಸರ್ವೀಸ್ ರಿವಾಲ್ವಾರ್ ಕಡ್ಡಾಯವಾಗಿ ಹೊಂದಿರಬೇಕು. ಪೊಲೀಸ್ ಸಿಬ್ಬಂದಿ ಹೆಲೆಟ್ ಹಾಗೂ ಲಾಠಿಗಳನ್ನು ಹೊಂದಿರಬೇಕು. ಹೆಣ್ಣು ಮಕ್ಕಳನ್ನು ಚುಡಾಯಿಸುವವರು ದಾಂಧಲೆ ಮಾಡುವವರನ್ನು ಕೂಡಲೇ ವಶಕ್ಕೆ ಪಡೆದು ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.

ರಸ್ತೆ ಮೇಲೆ ಬಾಟಲಿ ಹೊಡೆದು ದಾಂಧಲೆ ಮಾಡುವವರನ್ನು ಕೂಡಲೇ ವಶಕ್ಕೆ ಪಡೆದು ಕ್ರಮಕೈಗೊಳ್ಳಬೇಕು. ಮದ್ಯ ಮಾರಾಟ ಜಾಗದಲ್ಲಿ ಗಲಾಟೆ, ದೊಂಬಿ, ಬಾಟಲಿ ಎಸೆಯುವುದು, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆದರೆ ಅದಕ್ಕೆ ಮಾಲೀಕರೇ ಹೊಣೆ ಎಂದು ತಿಳಿಸುವಂತೆ ಅವರು ಸೂಚಿಸಿದ್ದಾರೆ.

ಅಂದು ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ, ಪ್ರಮುಖ ಪ್ರೈಓವರ್ಗಳ ಮೇಲೆ ವಾಹನ ಸಂಚಾರ ನಿಷೇಧಿಸಬೇಕು. ಮತ್ತು ಠಾಣೆಯ ಹೊಯ್ಸಳ ಮತ್ತು ಚೀತಾಗಳು ಸದಾ ಗಸ್ತು ನಿರ್ವಹಿಸಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.

ಸಿಸಿ ಕ್ಯಾಮೆರಾ- ವಿದ್ಯುತ್ ದೀಪ ಕಡ್ಡಾಯ:
ಜನ ಸೇರುವ ರಸ್ತೆ ಮತ್ತು ಪ್ರದೇಶಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಿರಬೇಕು. ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ.ರಸ್ತೆ ಸೇರಿದಂತೆ ಇತರೆಡೆ ಜನರ ಆಗಮನ ಮತ್ತು ನಿರ್ಗಮನಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಠಾಣೆಯ ಹೊಯ್ಸಳ ಮತ್ತು ಚೀತಾಗಳು ಚುರುಕಾದ ಗಸ್ತು ನಿರ್ವಹಿಸಬೇಕು ಹಾಗೂ ರೌಡಿ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಆಯುಕ್ತರು ಆದೇಶಿಸಿದ್ದಾರೆ.

RELATED ARTICLES

Latest News