ಬೆಂಗಳೂರು,ಡಿ.24-ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರು ಬಳಸಿಕೊಂಡು ಚಿನ್ನ-ವಜ್ರಾಭರಣ ಮಳಿಗೆಗೆ ಸುಮಾರು 12 ಕೋಟಿಗೂ ಹೆಚ್ಚು ಮೌಲ್ಯದ ಆಭರಣಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣಪತಿ ಸರ್ಕಲ್ ಬಳಿ ಇರುವ ಓರಾಯ್ ಗೋಲ್‌್ಡ ಮಳಿಗೆಗೆ ಸುಮಾರು 14 ಕೆಜಿ ಚಿನ್ನವನ್ನು ವಂಚಿಸಲಾಗಿದೆ ಎಂದು ಐಶ್ವರ್ಯ ಗೌಡ, ಹರೀಶ್, ಧರ್ಮೇಂದ್ರ, ಅನಿತ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಕಳೆದ ಒಂದು ವರ್ಷದಿಂದ ಆರೋಪಿಗಳು ಜ್ಯುವೆಲರಿ ಅಂಗಡಿಗೆ ಬಂದು ಚಿನ್ನಾಭರಣ ಖರೀದಿಸುವ ನೆಪದಲ್ಲಿ ವಂಚಿಸಿದ್ದಾರೆ ಎಂದು ವನಿತಾ ಐತಾಳ್ ಎಂಬುವರು ಚಂದ್ರಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ ಚಿತ್ರರಂಗದ ನಂಟು ಹೊಂದಿರುವ ಧರ್ಮೇಂದ್ರ ಅವರು ನನಗೂ ಐಶ್ವರ್ಯಗೂ ಅಷ್ಟಾಗಿ ಪರಿಚಯವಿಲ್ಲ.
ನಾನು ಯಾರ ಧ್ವನಿಯಲ್ಲೂ ಮಾತನಾಡಿಲ್ಲ. ಆಕೆ ನಾನು ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ಸುಮಾರು 8 ಕೋಟಿ ಮೌಲ್ಯದ ಚಿನ್ನಾಭರಣ ಖರೀದಿಸಿ ನಂತರ ಹಂತ ಹಂತವಾಗಿ 14 ಕೋಟಿ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.