Wednesday, January 15, 2025
Homeರಾಜ್ಯಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್ ಅಶ್ಲೀಲ ಪದಬಳಕೆ ಪ್ರಕರಣ ಸಿಐಡಿ ತನಿಖೆಗೆ

ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್ ಅಶ್ಲೀಲ ಪದಬಳಕೆ ಪ್ರಕರಣ ಸಿಐಡಿ ತನಿಖೆಗೆ

C.T. Ravi-Lakshmi Hebbalkar obscene language case to be investigated by CID

ಹುಬ್ಬಳ್ಳಿ, ಡಿ.24– ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ ಎಂದು ಸಭಾಪತಿ ಯವರು ಹೇಳಿರಬಹುದು. ಆದರೆ ಪೊಲೀಸರು ತಮ ಕರ್ತವ್ಯವನ್ನು ತಾವು ಮಾಡುತ್ತಾರೆ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಐಡಿ ತನಿಖೆ ನಡೆಸುವ ಹಂತದಲ್ಲಿ ತಾವು ಏನನ್ನೂ ಹೇಳಲು ಬಯಸುವುದಿಲ್ಲ. ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರೆಸಲಿದ್ದಾರೆ. ಸತ್ಯಾ ಸತ್ಯತೆಯ ಪರಿಶೀಲನೆ ನಡೆಯಲಿದೆ.

ಸಿ.ಟಿ.ರವಿ ತಾವು ಆ ರೀತಿ ಹೇಳಿಲ್ಲ ಎಂದು ಹೇಳಿದ್ದಾರೆ. ವಿಧಾನ ಪರಿಷತ್ ಸಭಾಂಗಣದಲ್ಲಿ ರವಿ ಅವರ ಪಕ್ಕದಲ್ಲಿ ಇದ್ದವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಸಿರುವುದು ನಿಜ ಎಂದು ಹೇಳುತ್ತಿದ್ದಾರೆ. ಎಲ್ಲವನ್ನೂ ಸಿಐಡಿ ಪೊಲೀಸರು ಪರಿಶೀಲನೆ ನಡೆಸುತ್ತಾರೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ ಕೆಲಸವನ್ನು ತಾವು ಮಾಡಿದ್ದಾರೆ. ಹಾಗಾಗಿ ಪ್ರಕರಣವನ್ನು ಮುಗಿದ ಅಧ್ಯಾಯ ಎಂದು ಹೇಳಿರಬಹುದು. ಆದರೆ ಪೊಲೀಸರು ತಮ ಕರ್ತವ್ಯ ನಿಭಾಯಿಸಲಿದ್ದಾರೆ. ಸಿ.ಟಿ.ರವಿ ನೀಡಿರುವ ದೂರು ಆಧರಿಸಿ ಐದು ದಿನಗಳ ಬಳಿಕ ಎಫ್ಐಆರ್ ದಾಖಲಿಸಲು, ಸವಿಸ್ತಾರವಾದ ವಿಚಾರಣೆ ನಡೆಸಬೇಕಿತ್ತು. ಸಭಾಪತಿ ಅವರ ಗಮನಕ್ಕೆ ತರಬೇಕಿತ್ತು. ಪೊಲೀಸರು ಅದನ್ನೆಲ್ಲಾ ಮಾಡಿದ ಬಳಿಕ ಪ್ರಕರಣ ದಾಖಲಿಸಿದ್ದಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮನ್ನು ಅಸಮರ್ಥ ಗೃಹ ಸಚಿವರು ಎಂದಿರುವುದು ಅಸಮಂಜಸವಾಗಿದೆ. ಕೇಂದ್ರ ಸಚಿವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ, ಒಂದು ವೇಳೆ ನಾನು ಪ್ರಹ್ಲಾದ್ ಜೋಶಿ ಅಸಮರ್ಥರು ಎಂದರೆ ಅದು ಸಮಂಜಸವಾಗಿರಲಿದೆಯೇ ಎಂದು ಪ್ರಶ್ನಿಸಿದರು.

ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ. ಇದು ಜವಾಬ್ದಾರಿ ಇರುವ ಇಲಾಖೆ, ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಅಥವಾ ಗೃಹ ಸಚಿವರು ಇಬ್ಬರ ಮಾತನ್ನು ಮಾತ್ರ ಕೇಳುತ್ತಾರೆ. ಬೇರೆ ಯಾರ ು ಆದೇಶ ನೀಡಿದರೂ ಅದನ್ನು ಕೇಳುವುದಿಲ್ಲ. ಇಲ್ಲಿ ಅಸಮರ್ಥನೆ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ಸಿಐಡಿ ತನಿಖೆಯ ಔಚಿತ್ಯವೇನು..?
ಬೆಳಗಾವಿಯ ಸುವರ್ಣಸೌಧದಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಪ್ರಕರಣವನ್ನು ಸಭಾಪತಿಯವರೇ ಮುಗಿದ ಅಧ್ಯಾಯ ಎಂದು ಹೇಳಿರುವುದರಿಂದ, ಸರ್ಕಾರ ಸಿಐಡಿಗೆ ವಹಿಸಿರುವ ಔಚಿತ್ಯವಾದರೂ ಏನು ಎಂದು ಮಾಜಿ ಸಚಿವ ಹಾಗೂ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಗೆ ಸಭಾಧ್ಯಕ್ಷರು, ವಿಧಾನಪರಿಷತ್ಗೆ ಸಭಾಪತಿಗಳೇ ಮುಖ್ಯಸ್ಥರು. ಅವರು ಪ್ರಕರಣ ಸಂಬಂಧ ಒಂದು ಬಾರಿ ತೀರ್ಪು ನೀಡಿದ ಮೇಲೆ ಅದನ್ನು ಯಾವ ನ್ಯಾಯಾಲಯಗಳು ಕೂಡ ಪ್ರಶ್ನಿಸುವಂತಿಲ್ಲ ಎಂದು ಹೇಳಿದರು.

ಬಸವರಾಜ ಹೊರಟ್ಟಿ ಅವರು ಈಗಾಗಲೇ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಅಶ್ಲೀಲ ಪದ ಬಳಕೆ ಮಾಡಿರುವುದಕ್ಕೆ ದಾಖಲೆಗಳಿಲ್ಲ ಎಂದು ರೂಲಿಂಗ್ ನೀಡಿದ್ದಾರೆ. ಜೊತೆಗೆ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ಹೀಗಿದ್ದರೂ ಸರ್ಕಾರ ಸಿಐಡಿಗೆ ವಹಿಸಿದೆ. ಪೊಲೀಸರು ಹೇಗೆ ತನಿಖೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಸಭಾಪತಿಗಳು ನೀಡಿದ ರೂಲಿಂಗ್ ಮೇಲೆ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡುವುದಿಲ್ಲ. ಇಲ್ಲಿ ಮಾಜರು ನಡೆಸಬೇಕಾದರೆ ಸುವರ್ಣಸೌಧಕ್ಕೆ ಹೋಗಬೇಕು. ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಮೇಲೆ ನಾನು ಪೊಲೀಸರಿಗೆ ತನಿಖೆಗೆ ಅನುಮತಿ ನೀಡುವುದಿಲ್ಲ ಎಂದು ಹೊರಟ್ಟಿ ಅವರೇ ಹೇಳಿದ್ದಾರೆ. ಸರ್ಕಾರ ದುರದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದರು.

ಪ್ರಕರಣ ಈಗಾಗಲೇ ಕೋರ್ಟ್ ಅಂಗಳ ಏರಿದರೂ, ಕೋರ್ಟ್ ನಲ್ಲಿ ತನಿಖೆಗೆ ಅವಕಾಶ ಇಲ್ಲ. ಏನೇ ತನಿಖೆ ಆದರೂ ಸಭಾಪತಿಯವರೇ ಮಾಡಬೇಕು. ಅವರ ವ್ಯಾಪ್ತಿ ಮೀರಿ ಹೋಗುವುದು ಸರಿಯಲ್ಲ. ಇದೆಲ್ಲ ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವರು, ಗೃಹ ಸಚಿವರಿಗೆ ಗೊತ್ತಿದೆ ಎಂದರು.

ಲಕ್ಷಿ ಹೆಬ್ಬಾಳ್ಕರ್ ಅವರು ಸಿಟ್ಟಿನಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಆಗುವುದು ಬೇಡ. ಈ ಹಂತದಲ್ಲಿ ಸರ್ಕಾರ ಪ್ರಕರಣ ಸಿಐಡಿ ತನಿಖೆಗೆ ಕೊಟ್ಟಿರುವುದು ಸರಿಯಲ್ಲ. ಸದನದಲ್ಲಿ ಸಿಐಡಿ ಹಸ್ತಕ್ಷೇಪ ಯಾಕೆ? ತನಿಖೆಗೆ ಕೊಡೋದೇ ಆದರೆ ಸಿಟಿ ರವಿ ಮೇಲೆ ನಡೆದ ಹಲ್ಲೆ ಪ್ರಕರಣ ಕೊಡಲಿ. ತನಿಖೆಗೆ ಕೊಡೋದಾದರೆ ಸಿಟಿ ರವಿ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ಕೊಡಲಿ ಎಂದು ಆಗ್ರಹಿಸಿದರು.

ಪ್ರಕರಣದಲ್ಲಿ ಗೃಹ ಸಚಿವರ ಕೈ ಕಟ್ಟಿ ಹಾಕಲಾಗಿತ್ತು. ಗೃಹ ಸಚಿವರಿಗೆ ಇಂಥ ಪರಿಸ್ಥಿತಿ ಬರಬಾರದಾಗಿತ್ತು. ರವಿ ಬಂಧನ ಬದಲು ನೊಟೀಸ್ ಕೊಟ್ಟು ವಿಚಾರಣೆಗೆ ಕರೆಸಬಹುದಿತ್ತು ಎಂದು ಟೀಕಿಸಿದರು.

ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಸರ್ಕಾರದ ಹಣ ಬಳಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಇದು. ಅವರ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರದ ಹಣ ಯಾಕೆ ಬಳಸುತ್ತಿದ್ದಾರೆ? ಸರ್ಕಾರ ಜನರ ತೆರಿಗೆ ಹಣ ಯಾಕೆ ಬಳಸುತ್ತಿದೆ..? ಎಂದು ಪ್ರಶ್ನಿಸಿದರು.

ಗಾಂಧೀಜಿಯವರ ಮೇಲೆ ನಮಗೂ ಗೌರವ ಇದೆ. ಆದರೆ ಅಧಿವೇಶನ ನಡೆಸಿದ್ದು ಕಾಂಗ್ರೆಸ್. ಹಾಗಾಗಿ ಸಂಪೂರ್ಣ ವೆಚ್ಚವನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿ ಎಂದು ಆಗ್ರಹಿಸಿದ ಅವರು, ಇವರ ಅಧಿಕಾರದ ದುರ್ಬಳಕೆಗೆ ಗಾಂದೀಜಿ ಇದ್ದಿದ್ದರೆ ನೊಂದುಕೊಳ್ಳುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES

Latest News