Friday, November 28, 2025
Homeಬೆಂಗಳೂರುಸುಪ್ರೀಂ ಕೋರ್ಟ್ ಆದೇಶದಂತೆ ಬೆಂಗಳೂರಲ್ಲಿ ಶೆಲ್ಟರ್‌ಗಳಿಗೆ ಬೀದಿ ನಾಯಿಗಳ ಸ್ಥಳಾಂತರ ಕಾರ್ಯಕ್ಕೆ ಚಾಲನೆ

ಸುಪ್ರೀಂ ಕೋರ್ಟ್ ಆದೇಶದಂತೆ ಬೆಂಗಳೂರಲ್ಲಿ ಶೆಲ್ಟರ್‌ಗಳಿಗೆ ಬೀದಿ ನಾಯಿಗಳ ಸ್ಥಳಾಂತರ ಕಾರ್ಯಕ್ಕೆ ಚಾಲನೆ

Bengaluru rushes to find space as Supreme Court orders shifting of stray dogs to shelters

ಬೆಂಗಳೂರು, ನ. 27: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಮಾಹಿತಿ ಸಂಗ್ರಹಿಸಲು ವಿವಿಧ ಇಲಾಖೆ ಹಾಗೂ ಸಂಸ್ಥೆಗಳಿಗೆ ಐದು ನಗರ ಪಾಲಿಕೆಗಳಿಂದ ನೋಟೀಸ್‌‍ ಗಳನ್ನು ಜಾರಿ ಮಾಡಲಾಗಿದೆ.

ಬೀದಿ ನಾಯಿಗಳ ನಿರ್ವಹಣೆ ಕುರಿತು ಎಂಟು ವಾರಗಳ ಒಳಗೆ ಅಫಿಡವಿಟ್‌ ಸಲ್ಲಿಸಲು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನದ ಮೇರೆಗೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆ ಮತ್ತು ಸಂಸ್ಥೆಗಳನ್ನು ಗುರುತಿಸಿ, ಬೀದಿ ನಾಯಿಗಳ ಸಂಖ್ಯೆ ಮಾಹಿತಿ ಪಡೆದು, ಇರುವ ಬೀದಿ ನಾಯಿಗಳನ್ನು ತೆರವುಗೊಳಿಸಿ, ಅವುಗಳನ್ನು ನಾಯಿ ಆಶ್ರಯತಾಣದಲ್ಲಿ ಆಶ್ರಯ ನೀಡಿ ಪೋಷಿಸಲು ಕ್ರಮ ಕೈಗೊಳಲು ಸೂಚನೆ ನೀಡಲಾಗಿದೆ.

ನಗರ ಪಾಲಿಕೆಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು-ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೋಚಿಂಗ್‌ ಕೇಂದ್ರಗಳು (ಹಾಸ್ಟೆಲ್‌ಸಹಿತ / ರಹಿತ), ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು -ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳು(ಸಾರ್ವಜನಿಕ ಅಥವಾ ಖಾಸಗಿ), ಬಸ್‌‍ ನಿಲ್ದಾಣಗಳು, ಡಿಪೋಗಳು ಇಂಟರ್‌ ಸ್ಟೇಟ್‌ ಬಸ್‌‍ ಟರ್ಮಿನಲ್‌ ಮತ್ತು ರೈಲು ನಿಲ್ದಾಣ ಸೇರಿದಂತೆ ಇತರೆ ಇಲಾಖೆ ಸಂಸ್ಥೆಗಳಿಗೆ ನೋಟೀಸ್‌‍ ನೀಡಿ ಕೆಳಕಂಡತೆ ಮಾಹಿತಿ ಒದಗಿಸಲು ಸೂಚಿಸಲಾಗಿದೆ.

ಬೀದಿನಾಯಿಗಳ ಸಂಖ್ಯೆ ಮಾಹಿತಿಯನ್ನು ನೀಡುವುದು, ಸಂಸ್ಥೆಗಳ ಆವರಣದೊಳಗೆ ಬೀದಿ ನಾಯಿಗಳ ಮರು ಪ್ರವೇಶವನ್ನು ತಡೆಗಟ್ಟಲು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಆರೋಗ್ಯರಕ್ಷಣಾ ಸಂಸ್ಥೆಗಳು, ಬಸ್‌‍ ನಿಲ್ದಾಣಗಳು/ಡಿಪೋಗಳು (ಅಂತರರಾಜ್ಯ ಬಸ್‌‍ ಟರ್ಮಿನಲ್ಗಳು ಸೇರಿದಂತೆ) ಮತ್ತುರೈಲ್ವೆ ನಿಲ್ದಾಣಗಳು, ಕ್ರೀಡಾ ಸಂಕೀರ್ಣ ಸಂಸ್ಥೆಗಳ ಆವರಣವನ್ನು ತಡೆಗೊಡೆ ಹಾಕಿಸುವುದು, ತ್ಯಾಜ್ಯ ನಿರ್ವಹಣೆ, ಸ್ವಚ್ಛತೆಯನ್ನು ಕಾಪಾಡುವಿಕೆ ಹಾಗು ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಲು ಓರ್ವ ಜವಾಬ್ದಾರಿಯುತ ಅಧಿಕಾರಿಯನ್ನು ನಾಮ ನಿರ್ದೇಶನ ಮಾಡುವುದು.

ಸದರಿ ನೋಡಲ್‌ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸಂಸ್ಥೆಯ ಆವರಣದಲ್ಲಿ ಪ್ರದರ್ಶಿಸುವುದು ಹಾಗು ಪಾಲಿಕೆಗೆ ನೋಡಲ್‌ ಅಧಿಕಾರಿಯ ಮಾಹಿತಿ ನೀಡುವುದು, ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳು ಆವರಣದಲ್ಲಿ ಬೀದಿನಾಯಿಗಳ ಪ್ರವೇಶ ತಡೆಗಟ್ಟಲು 2 ಭದ್ರತಾ ಸಿಬ್ಬಂದಿಗಳನ್ನು ನೇಮಿಸುವುದು.

ಈ ಮೇಲ್ಕಂಡಂತೆ ಮಾಹಿತಿ ನೀಡಲು ಈಗಾಗಲೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 05 ನಗರ ಪಾಲಿಕೆಗಳಿಂದ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ನೋಟೀಸ್‌‍ ನೀಡಲಾಗಿದೆ. ನೋಟೀಸ್‌‍ ಸ್ವೀಕೃತವಾಗದಿದ್ದಲ್ಲಿ, ಸದರಿ ಪ್ರಕಟಣೆಯನ್ನು ಆಧರಿಸಿ ಸಂಸ್ಥೆಗಳ ಮುಖ್ಯಸ್ಥರು ಇದರೊಂದಿಗೆ ಲಗತ್ತಿಸಿರುವ ಮಾಹಿತಿಯಂತೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಗತ್ಯಕ್ರಮ ವಹಿಸಿ ಅನುಪಾಲನಾ ವರದಿ ನೀಡುವುದು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳ/ತಾಣಗಳನ್ನು ನಗರ ಪಾಲಿಕೆಗಳ ಪಶುಪಾಲನಾ ವಿಭಾಗದ ಅಧಿಕಾರಿಗಳು ಗುರುತಿಸಲಿದ್ದಾರೆ. ಆ ತಾಣಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಆಹಾರ ನೀಡುವುದನ್ನು ನಿಷೇದಿಸಲಾಗಿದೆ.
ಇದನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಆಹಾರ ನೀಡುವುದು ಕಂಡುಬಂದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ. ಈ ಆದೇಶವನ್ನು ಉಲ್ಲಂಘಿಸುವ ಸಾರ್ವಜನಿಕರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದು.

ಭಾರತೀಯ ಪ್ರಾಣಿಕಲ್ಯಾಣ ಮಂಡಳಿ ಮಾರ್ಗಸೂಚಿ ಮತ್ತು ಎಬಿಸಿ ನಿಯಮಗಳು 2023ರ ಮಾರ್ಗಸೂಚಿಗಳಂತೆ ಸಾರ್ವಜನಿಕರು ಬೀದಿನಾಯಿಗಳನ್ನು ದತ್ತು ಪಡೆದು ಅವುಗಳಿಗೆ ಆಹಾರ, ಆರೋಗ್ಯ, ಭದ್ರತೆ ಮತ್ತು ಸುರಕ್ಷಿತ ಆಶ್ರಯ ನೀಡಿ ಬೀದಿನಾಯಿಗಳ ಸಮಸ್ಯೆ ಪರಿಹರಿಸಲು ಸಹಕರಿಸವುದು. ಬೀದಿನಾಯಿಗಳನ್ನು ದತ್ತು ಪಡೆಯಲು ಐದು ನಗರ ಪಾಲಿಕೆಗಳ ಪಶುಪಾಲನಾ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರು, ನಗರ ಪಾಲಿಕೆಯು ಬೀದಿನಾಯಿಗಳಿಗೆ ಆಹಾರನೀಡಲು ನಿಗದಿಪಡಿಸಿದ ತಾಣಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಆಹಾರ ನೀಡುವುದು ಕಂಡುಬದಲ್ಲಿ, ಬೀದಿನಾಯಿ ಕಡಿತ ಹಾಗೂ ಬೀದಿನಾಯಿ ಉಪಟಳ ಸೇರಿದಂತೆ ಇತರ ಸಂಬಂಧಿತ ದೂರುಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಸಹಾಯವಾಣಿ ಸಂಖ್ಯೆ(1533) ಮತ್ತು ರೇಬೀಸ್‌‍ ಸಹಾಯವಾಣಿ ಸಂಖ್ಯೆ 6364893322 ಗೆ ಕರೆ ಮಾಡಬಹುದಾಗಿದೆ.

RELATED ARTICLES

Latest News