Friday, January 10, 2025
Homeರಾಜ್ಯಶಸ್ತ್ರಾಸ್ತ್ರ ತ್ಯಜಿಸಿ ಇಂದು ಆರು ನಕ್ಸಲರ ಶರಣಾಗತಿ

ಶಸ್ತ್ರಾಸ್ತ್ರ ತ್ಯಜಿಸಿ ಇಂದು ಆರು ನಕ್ಸಲರ ಶರಣಾಗತಿ

Six Naxalites to surrender today

ಬೆಂಗಳೂರು,ಜ.8- ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಆರು ಮಂದಿ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಯಾವುದೇ ಕ್ಷಣದಲ್ಲಿ ಶರಣಾಗಲಿದ್ದಾರೆ. ಲತಾ, ವನಜಾಕ್ಷಿ ಎಂ., ಜಯಣ್ಣ ಅರೋಲಿ, ಸುಂದರಿ, ವಸಂತ್ ಕೆ., ಜಿಷ ಎ.ಡಿ. ಅವರುಗಳು ಶರಣಾಗಲಿದ್ದಾರೆ.

ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಶಾಂತಿಗಾಗಿ ನಾಗರಿಕ ವೇದಿಕೆಯ ಅಶೋಕ್, ಸಿರಿಮನೆ ನಾಗರಾಜ್, ವನಜಾಕ್ಷಿ ಅವರ ಸಹೋದರ ಉಮೇಶ್ ಮತ್ತಿತರರು ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಬಳಿ ಕಾದುಕುಳಿತಿದ್ದರು.

ಆರಂಭದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಣಾಗುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.

ಕೊನೆಕ್ಷಣದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯವರ ಸಮುಖದಲ್ಲೇ ಶರಣಾಗಲು ನಕ್ಸಲರು ನಿರ್ಧರಿಸಿದ್ದು ಅದಕ್ಕೆ ಸಹಮತ ದೊರೆತ ಹಿನ್ನೆಲೆಯಲ್ಲಿ ಪೊಲೀಸರ ಎಸ್ಕಾರ್ಟ್ನಲ್ಲಿ ಚಿಕ್ಕಮಗಳೂರಿನ ಕಾಡಿನಿಂದ ನಕ್ಸಲರು ಹಾಗೂ ಅವರ ಬಗ್ಗೆ ಸಹಾನುಭೂತಿ ಉಳ್ಳವರು ಬೆಂಗಳೂರಿನತ್ತ ಪ್ರಯಾಣಿಸಿದರು.

ರಾಜಕೀಯ ಚರ್ಚೆಗೆ ಗ್ರಾಸ :
25 ವರ್ಷಗಳಿಂದ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಇವರಲ್ಲಿ ಬಹುತೇಕರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಇತ್ತೀಚೆಗೆ ಮಲೆನಾಡು ಭಾಗದಲ್ಲಿ ನಕ್ಸಲರ ಹೆಜ್ಜೆಗುರುತುಗಳು ಕಾಣಿಸಿಕೊಂಡ ಕಾರಣಕ್ಕೆ ನಕ್ಸಲ್ ನಿಗ್ರಹ ಪಡೆ ಕೋಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ವಿಕ್ರಂಗೌಡ ಎನ್ಕೌಂಟರ್ಗೆ ತುತ್ತಾಗಿದ್ದರು.

ಅದರ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ನಕ್ಸಲರಿಗೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು.ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ನಕ್ಸಲ್ ಪುನರ್ವಸತಿ ಸಮಿತಿ ಈ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಿತ್ತು. ಅದರ ಪರಿಣಾಮ ಆರು ಮಂದಿ ನಕ್ಸಲರು ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಾರೆ.

ಇದು ಸಾಧ್ಯವಾಗಿದ್ದೇ ಆದರೆ ರಾಜ್ಯದಲ್ಲಿ ಮಾವೋವಾದಿ ಚಳವಳಿಯ ಪ್ರಮುಖ ಘಟ್ಟ ಕ್ಷೀಣಿಸಲಿದ್ದು ಬಹುತೇಕ ನಕ್ಸಲೀಯ ಚಟುವಟಿಕೆ ಕೊನೆಗಾಣಲಿದೆ ಎಂಬ ನಿರೀಕ್ಷೆಗಳಿವೆ. ಹೊಸ ಪೀಳಿಗೆ ಮಾವೋವಾದಿ ಚಳವಳಿಗೆ ಧುಮುಕದೇ ಇದ್ದರೆ ಅಥವಾ ಬೇರೆಬೇರೆ ರಾಜ್ಯಗಳ ನಕ್ಸಲೀಯರು ಮಲೆನಾಡು ಭಾಗಕ್ಕೆ ಕಾಲಿಡದೇ ಇದ್ದರೆ ಕರ್ನಾಟಕ ಬಹುತೇಕ ನಕ್ಸಲ್ ಮುಕ್ತವಾಗುವ ಅವಕಾಶವಿದೆ.

ಇಂದು ಶರಣಾಗತಿಯ ಸಾಧ್ಯತೆಗೂ ಮುನ್ನ ನಕ್ಸಲೀಯರು ಬರೆದಿದ್ದಾರೆ ಎಂಬ ಪತ್ರ ವೈರಲ್ ಆಗಿದೆ. ಅದರಲ್ಲಿ ಅವರು ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಆದರೆ ನಕ್ಸಲರು ಮೊದಲು ಶರಣಾಗಲಿ, ಅನಂತರ ಪುನರ್ವಸತಿ ಸೇರಿದಂತೆ ಅವರ ಬೇಡಿಕೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಕ್ಸಲರ ಶರಣಾಗತಿಗೆ ನೀಡಲಾಗಿರುವ ಭರವಸೆಗಳ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಕ್ಸಲರ ಶರಣಾಗತಿ ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಬಿಜೆಪಿ ಶಾಸಕ ಸುನೀಲ್ ಕುಮಾರ್ ಶಸ್ತ್ರಸಜ್ಜಿತ ಹೋರಾಟ ನಡೆಸಿ ಕಾನೂನು ಸುವ್ಯವಸ್ಥೆಗೆ ಭಂಗ ತಂದಿದ್ದ ನಕ್ಸಲರಿಗೆ ಶರಣಾಗತಿ ಹೆಸರಿನಲ್ಲಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸರ್ಕಾರ ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ ಎಂದು ಆಕ್ಷೇಪಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಆಗ್ರಹ :
ಶರಣಾಗತಿಗೂ ಮುನ್ನ ನಕ್ಸಲರು ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾದ ಪತ್ರದಲ್ಲಿ ನಾವು ಆರು ಜನ ಕಳೆದ 25 ವರ್ಷಗಳಿಂದ ಜನರ ಪರವಾಗಿ ಹೋರಾಡುತ್ತಾ ಬಂದಿದ್ದು, ಈಗ ಮುಖ್ಯವಾಹಿನಿಗೆ ಸಂವಿಧಾನಾತಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸ್ವಇಚ್ಛೆಯಿಂದ ಬಯಸಿದ್ದೇವೆ. ಈಗಿನ ಬದಲಾದ ಪರಿಸ್ಥಿತಿಯಲ್ಲಿ ಅದೇ ಸರಿ ಎಂದು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಹಿಂದೆಯೂ ಜನಪರವಾಗಿ ಕೊನೆ ಉಸಿರಿನ ತನಕ ಹೋರಾಡಲು ಬಯಸಿದ್ದೇವೆ. ಇದಕ್ಕೆ ಸಹಕರಿಸಿದ ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ನಕ್ಸಲ್ ಪುನರ್ ವಸತಿ ಸಮಿತಿಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.

ಕಳೆದ 25 ವರ್ಷಗಳಿಂದ ನಮ ಹೋರಾಟಕ್ಕೆ ಸಹಕರಿಸಿದ ಜನರಿಗೆ ಹಾಗೂ ಸಂಗಾತಿಗಳಿಗೆ ಧನ್ಯವಾದಗಳು ಎಂದಿರುವ ಅವರು, ನಮನ್ನು ಮುಖ್ಯವಾಹಿನಿಗೆ ಕರೆಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಸರ್ಕಾರಕ್ಕೆ ಧನ್ಯವಾದಗಳು. ಪ್ರಜಾತಾಂತ್ರಿಕ ಹೋರಾಟಗಳಲ್ಲಿ ಯಾವುದೇ ತೊಡಕುಗಳು ಇಲ್ಲದಂತೆ ಮುನ್ನಡೆಯಲು ಹಾಗೂ ಜನರ ಹಕ್ಕುಗಳಿಗಾಗಿ ನಾವಿಟ್ಟ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ ಎಂದು ಆರು ಮಂದಿ ನಕ್ಸಲರು ತಿಳಿಸಿದ್ದಾರೆ.

ಮೂರು ರಾಜ್ಯಗಳ ಪಶ್ಚಿಮಘಟ್ಟದಲ್ಲಿ ವಾಸಿಸುತ್ತಿರುವ ಆದಿವಾಸಿ, ದಲಿತ, ಕೂಲಿ ಜನರ ಬದುಕಿಗೆ ಸಂಬಂಧಿಸಿದ ಹಾಗೂ ಇಲ್ಲಿನ ಪರಿಸರಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಖಚಿತ ಹೆಜ್ಜೆಗಳನ್ನು ಇಡಬೇಕು ಎಂದು ನಾವು ಮನಸಾರೆ ಬಯಸಿದ್ದೇವೆ. ಮೂರು ರಾಜ್ಯಗಳ ಸರ್ಕಾರಗಳಲ್ಲಿ ಈ ವಿಚಾರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಮೂರೂ ರಾಜ್ಯಗಳ ಜೈಲಿನಲ್ಲಿರುವ ನಮ ಎಲ್ಲಾ ಕಾಮ್ರೇಡ್ಗಳ ಕೇಸುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಬಿಡುಗಡೆಗೊಳಿಸಲು ಮೃದು ಧೋರಣೆ ತೋರಬೇಕು, ವಿಕ್ರಂಗೌಡ ಹತ್ಯೆ ಕುರಿತು ನ್ಯಾಯಾಂಗ ತನಿಖೆಗೆ ತಂಡ ರಚಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಪ್ರಜಾತಾಂತ್ರಿಕ ಹೋರಾಟಕ್ಕೆ ನಾವು ಬರುವುದನ್ನು ಜನ ಸ್ವಾಗತಿಸುತ್ತಾರೆ ಎಂದು ಭಾವಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಪತ್ರಕ್ಕೆ ಯಾರೂ ಕೂಡ ಸಹಿ ಮಾಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Latest News