Friday, November 22, 2024
Homeರಾಜ್ಯಶಾಸಕರಿಗೆ 50 ಕೋಟಿ ಆಫರ್ : ಸಿಒಡಿ ಆಂತರಿಕ ವಿಚಾರಣೆ

ಶಾಸಕರಿಗೆ 50 ಕೋಟಿ ಆಫರ್ : ಸಿಒಡಿ ಆಂತರಿಕ ವಿಚಾರಣೆ

ಮೈಸೂರು, ನ.2- ಕಾಂಗ್ರೆಸ್‍ನ ನಾಲ್ವರು ಶಾಸಕರಿಗೆ ತಲಾ ಐವತ್ತು ಕೋಟಿ ಆಮಿಷವೊಡ್ಡಿ, ಸರ್ಕಾರವನ್ನು ಪತನಗೊಳಿಸಲು ನಡೆಸಿದ ಆಪರೇಷನ್ ಕಮಲ ಪ್ರಯತ್ನದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದು. ಸಿಒಡಿಯಿಂದ ಆಂತರಿಕ ವಿಚಾರಣೆಯಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್‍ನ 11ಶಾಸಕರನ್ನು ಸಂಪರ್ಕಿಸುವ ಯತ್ನ ನಡೆಸಿದ್ದಾರೆ. ಆ ಪಟ್ಟಿಸಿಒಡಿ ಕೈನಲ್ಲಿದೆ. ಅದರಲ್ಲಿ ನಾಲ್ವರನ್ನು ಬಿಜೆಪಿಯವರು ಭೇಟಿ ಮಾಡಿ ಮಾತುಕತೆ ನಡೆಸಿರುವ ಮಾಹಿತಿಯನ್ನು ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ಬಹಿರಂಗ ಪಡಿಸಿದ್ದಾರೆ. ಆ ಕುರಿತು ಮುಖ್ಯಮಂತ್ರಿಯವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದರು.

ಬಿಜೆಪಿಯವರು ಏನೇ ಪ್ರಯತ್ನ ಮಾಡಿದರು ಐದು ವರ್ಷ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಸಾಧ್ಯವಿಲ್ಲ. ಕಳೆದ ಒಂಬತ್ತುವರೆ ವರ್ಷದಲ್ಲಿ 10 ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿ ಸರ್ಕಾರಗಳನ್ನು ಬೀಳಿಸಿದೆ. ರಾಜ್ಯದಲ್ಲೂ ಆ ಪ್ರಯತ್ನಗಳು ನಡೆದಿವೆ. ಶಾಸಕರ ಪಕ್ಷಾಂತರದ ಆಪರೇಷನ್ ಫಲಿತಾಂಶದ ಬಗ್ಗೆ 10 ದಿನ ಕಾದು ನೋಡಿ. ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂದು ಗೋತ್ತಾಗಲಿದೆ. ನಾವಂತೂ ಬೇರೆ ಪಕ್ಷಗಳ ಶಾಸಕರನ್ನು ಸೆಳೆಯುವುದಿಲ್ಲ. ಅಲ್ಲಿನ ಪರಿಸ್ಥಿತಿಯಿಂದ ಅಸಮಾಧಾನಗೊಂಡು ಬರುವವರ ಸಂಖ್ಯೆ ಹೆಚ್ಚಿದೆ ಎಂದರು.

ಬಿಜೆಪಿ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿ ಪ್ರಾಮುಖ್ಯತೆ ಕಳೆದುಕೊಂಡು ಜೋಕರ್ ಆಗಿದ್ದಾರೆ. ಆಪರೇಷನ್ ಕಮಲದ ನೇತೃತ್ವ ವಹಿಸಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಬೀಳಿಸಿದ ಅವರನ್ನೇ ಬಿಜೆಪಿಯವರು ಒಂದು ವರ್ಷದಲ್ಲಿ ಸಂಪುಟದಿಂದ ಕಿತ್ತು ಹಾಕಿದರು. ಅದು ಯಾವ ಕಾರಣಕ್ಕೆ ಎಂದು ರಮೇಶ್ ಜಾರಕಿಹೊಳಿಯವರು ಹೇಳಬೇಕು. ಇಂತಹ ನಗೆಪಾಟಿಲಿಗೀಡಾಗುವ ವ್ಯಕ್ತಿಗಳಿಗೆ ನಮ್ಮ ನಾಯಕರು ಪ್ರತಿಕ್ರಿಯಿಸಬಾರದು ಎಂದ ಅವರು, ಮಾಜಿ ಸಚಿವ ಹೆಚ್.ವಿಶ್ವನಾಥ್ ಬಾಂಬೆ ಡೇ ಪುಸ್ತಕ ಬರೆಯುತ್ತಿದ್ದು, ಅದರಲ್ಲಿ ಯಾರು ಕೈನಲ್ಲಿ ಬೀರ್ ಬಾಟಲ್ ಹಿಡಿದುಕೊಂಡಿದ್ದರು. ಏನೇನು ಮಾಡುತ್ತಿದ್ದರು ಎಂದು ಪುಸ್ತಕದಲ್ಲಿ ಬಹಿರಂಗವಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್

ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ನಾಲ್ಕುವರೆ ಲಕ್ಷ ಕೋಟಿ ರೂಪಾಯಿ ತೆರಿಗೆ ಆದಾಯ ರವಾನೆಯಾಗುತ್ತಿದೆ. ಅಲ್ಲಿಂದ ವಾಪಾಸ್ ಬರುತ್ತಿರುವುದು 50 ಸಾವಿರ ಕೋಟಿ ರೂಪಾಯಿ ಮಾತ್ರ. ನೀತಿ ಆಯೋಗದ ನಿಯಮದ ಪ್ರಕಾರ ರಾಜ್ಯಗಳಿಗೆ ಶೇ. 42ರಷ್ಟು ತೆರಿಗೆ ಪಾಲು ನೀಡಬೇಕು. ಬಿಜೆಪಿಯವರ ಮೆಹರರ್ಬಾನಿ ಬೇಕಿಲ್ಲ. ನಮ್ಮ ಪಾಲು ನಮಗೆ ಕೊಡಿ ಎಂದು ಆಗ್ರಹಿಸಿದರು.
ಸಂಸದ ಪ್ರತಾಪ್ ಸಿಂಹ್ ಮಹಿಷ ದಸರಾ ಹೆಸರಿನಲ್ಲಿ 15ದಿನ ಗಲಾಟೆ ಮಾಡಿದರು.

ಬಸ್ ನಿಲ್ದಾಣದ ಮೇಲೆ ಗುಂಬಸ್ ನಿರ್ಮಾಣವಾಗಿದೆ ಎಂದು ಒಂದು ತಿಂಗಳು ಗಲಾಟೆ ನಡೆಸಿದರು. ಹಿಜಾಬ್, ಹಲಾಲ್ ಎಂಬ ಕಿಡಿ ಹೊತ್ತಿಸುವ ಗಲಾಟೆಗಳನ್ನಷ್ಟೆ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಏನು ಚರ್ಚೆ ಮಾಡಿದ್ದಾರೆ ತೋರಿಸಲಿ. ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹುಣಸೂರು, ಚಾಮುಂಡೇಶ್ವರಿ ಸೇರಿ ಹಲವು ಕ್ಷೇತ್ರಗಲ್ಲಿ ಬರ ಇದೆ. ಇದಕ್ಕೆ ಸ್ಪಂದಿಸಲು ಪ್ರತಾಪ್ ಸಿಂಹರ ಪ್ರಯತ್ನವೇನು. ಕನಿಷ್ಠ ಕೇಂದ್ರ ಸರ್ಕಾರಕ್ಕೆ ಒಂದು ಪತ್ರವನ್ನಾದರೂ ಬರೆದಿದ್ದಾರೆಯೇ ಎಂದು ಪ್ರಶ್ನಿಸಿದರು. ನಾವು ಅವರ ಕಚೇರಿಗೆ ಹೋಗಿ ಕೇಂದ್ರಕ್ಕೆ ಪತ್ರ ಬರೆಸಲು ಯತ್ನಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯಲ್ಲಿ ಈವರೆಗೂ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಆಯ್ಕೆಯಾಗಿಲ್ಲ. ಕೆಲವು ದಿನ ಅಶ್ವಥ್‍ನಾರಾಯಣ, ಅಶೋಕ್, ಶೋಭಾ ಕರಂದ್ಲಾಜೆ ಹೆಸರುಗಳು ಕೇಳಿ ಬಂದವು. ಬಸವನಗೌಡ ಯತ್ನಾಳ್ ತಲೆಯ ಮೇಲೆ ಏನೇನನ್ನೋ ಸುರಿದುಕೊಂಡರೂ ಪ್ರಯೋಜನವಾಗಲಿಲ್ಲ. ರಾಷ್ಟ್ರೀಯ ಪಕ್ಷ ಎನ್ನುತ್ತಾರೆ. ಈವರೆಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗಿಲ್ಲ. ಈ ಬಗ್ಗೆ ಕಾಂಗ್ರೆಸ್‍ನವರು ಮಾತನಾಡುತ್ತಿದ್ದಾರೆಯೇ ಹೊರತು, ಬಿಜೆಪಿಯವರು ಏಕೆ ಮೌನವಾಗಿದ್ದಾರೆ ಎಂದು ಪಶ್ನಿಸಿದರು.

ಏರ್ಖಾಂಡ್‍ನಲ್ಲಿ ನಾಲ್ಕು ವರ್ಷ ವಿರೋಧ ಪಕ್ಷದ ನಾಯಕನ್ನೇ ನೇಮಕ ಮಾಡಿರಲಿಲ್ಲ. ರಾಜ್ಯದಲ್ಲೂ ಅಂತಹ ನಿರ್ಲಕ್ಷ್ಯವನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆಯೇ. ರಾಜ್ಯದಲ್ಲಿ ಈಗಾಗಲೇ ಯಡಿಯೂರಪ್ಪ ಹಾಗೂ ಈಶ್ವರಪ್ಪ ಕತೆ ಮುಗಿಸಿದ್ದಾರೆ. ರಾಜ್ಯ ನಾಯಕತ್ವವನ್ನು ಸಂಪೂರ್ಣ ಮೂಲೆ ಗುಂಪು ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸಿ ವಿದ್ಯುತ್ ಖರೀದಿಯಲ್ಲಿ ಕಮಿಷನ್ ಪಡೆಯಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ವಿದ್ಯುತ್ ಖರೀದಿಸುತ್ತಿರುವುದು ಕೇಂದ್ರ ಗ್ರೀಡ್‍ನಿಂದ ಕೇಂದ್ರ ಸಚಿವರು ಕಮಿಷನ್ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ 28,471 ಮೇಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿದ್ದರೂ, ಹಾಲಿ ಉತ್ಪಾದನೆಯಾಗುತ್ತಿರುವುದು 15 ಸಾವಿರ ಮಾತ್ರ. ಮಳೆ ಕೊರತೆಯಿಂದ ಜಲ ವಿದ್ಯುತ್ ಇಲ್ಲ. ಉಷ್ಣವಿದ್ಯುತ್ ಉತ್ಪಾದನೆಯಲ್ಲೂ ಹಿನ್ನೆಡೆಯಾಗಿದೆ. ಕೇಂದ್ರ ಸರ್ಕಾರ 4415 ಮೇಗಾವ್ಯಾಟ್ ಬದಲು, ಒಂದು ಸಾವಿರ ಮೇಗಾವ್ಯಾಟ್ ಮಾತ್ರ ಪೂರೈಸುತ್ತಿದೆ. ಇನ್ನೂ 3400 ಮೇಗಾವ್ಯಾಟ್ ಬರುತ್ತಿಲ್ಲ. ರಾಜ್ಯಕ್ಕೆ ಪ್ರತಿದಿನ 18 ಸಾವಿರ ಮೇಗಾವ್ಯಾಟ್ ಬೇಡಿಕೆ ಇದೆ. ಕೊರತೆ ಇರುವ ಮೂರು ಸಾವಿರ ಮೇಗಾವ್ಯಾಟ್ ನಿರ್ವಹಣೆ ಮಾಡುತ್ತಿದ್ದೇವೆ.

ಕೇಂದ್ರ ಗ್ರೀಡ್‍ನಿಂದ ಒಂದು ಸಾವಿರ ಮೇಗಾವ್ಯಾಟ್ ಖರೀದಿಸುತ್ತಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ ಮತ್ತು ಅಲ್ಲಿನ ಸಚಿವರು ಕಮಿಷನ್ ಕೊಡುತ್ತಾರೆಯೇ, ವಿರೋಧ ಪಕ್ಷಗಳು ಮಾತನಾಡುವಾಗ ಸಾಮಾನ್ಯ ಜ್ಞಾನ ಬೇಡವೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಖಾಸಗಿಯಿಂದ ವಿದ್ಯುತ್ ಖರೀದಿ ಮಾಡುತ್ತಿಲ್ಲ. ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಉತ್ಪಾದನೆ-ಪೂರೈಕೆ ನಡುವೆ ಐದು ಸಾವಿರ ಮೇಗಾವ್ಯಾಟ್ ವ್ಯತ್ಯಾಸವಿದೆ. ರಾಜ್ಯ ಸರ್ಕಾರ ಉಚಿತವಾಗಿ ವಿದ್ಯುತ್ ನೀಡುತ್ತಿರುವುದರಿಂದ ಬಹಳಷ್ಟು ಮಂದಿ ಹೆಚ್ಚು ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಬರ ಪರಿಹಾರ ನೀಡಿಲ್ಲ : ಪರಮೇಶ್ವರ್

ಕೇಂದ್ರ ಸರ್ಕಾರದ ಅಕಾರಿಗಳು ಅಧ್ಯಕ್ಷತೆಯಲ್ಲಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನೀರು ನಿರ್ವವಣಾ ಪ್ರಾಕಾರಗಳು ತಮಿಳುನಾಡು ಸರ್ಕಾರ ನೀಡುವ ಮನವಿ ಆಧರಿಸಿ ಪದೇ ಪದೇ ನೀರು ಬಿಡುವಂತೆ ಆದೇಶಿಸುತ್ತಿದೆ. ರಾಜ್ಯದಲ್ಲಿರುವ ನೀರಿನ ಕೊರತೆಯನ್ನು ಅಧ್ಯಯನ ನಡೆಸಲು ತಜ್ಞರ ತಂಡ ಕಳುಹಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದರು. ಕೇಂದ್ರ ಜಲಶಕ್ತಿ ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಇದರ ಹಿಂದೆ ರಾಜ್ಯದಲ್ಲಿ ಗಲಾಟೆಯಾಗಲಿ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿ ಎಂಬ ದುರುದ್ದೇಶ ಇದೆ ಎಂದರು.

ತಮಿಳುನಾಡಿನಲ್ಲಿ ಅಕಾರದಲ್ಲಿರುವ ಡಿಎಂಕೆ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸಿ ಎಂದು ಬಿಜೆಪಿಯವರು ಬಾಲಿಶವಾಗಿ ಹೇಳುತ್ತಿದ್ದಾರೆ. ಏನು ಚರ್ಚೆ ಮಾಡಬೇಕು, ನೀವು ನೀರು ಕೇಳಬೇಕು ಎಂದು ಡಿಎಂಕೆಯನ್ನು ಮನವೋಲಿಸಬೇಕೆ. 120 ವರ್ಷಗಳ ಸಮಸ್ಯೆ ಈ ರೀತಿ ಮನವೋಲಿಕೆಯಿಂದ ಬಗೆಹರಿಯುತ್ತದೆಯೇ ಎಂದು ಪ್ರಶ್ನಿಸಿದರು.

RELATED ARTICLES

Latest News