Wednesday, January 15, 2025
Homeರಾಜಕೀಯ | Politicsಆಹ್ವಾನ ಕೈತಪ್ಪಿದ್ದಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ

ಆಹ್ವಾನ ಕೈತಪ್ಪಿದ್ದಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ

Home Minister Dr. G. Parameshwar on the missed invitation

ಬೆಂಗಳೂರು,ಜ.15- ದೆಹಲಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಕಚೇರಿ ಇಂದಿರಾಗಾಂಧಿ ಭವನ ಉದ್ಘಾಟನೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಗೃಹಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲೇ ಉಳಿದಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ್ದ ಪರಮೇಶ್ವರ್, ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದ್ದರು.

ಆದರೆ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಅಧಿಕೃತ ಆಹ್ವಾನ ನೀಡಿದೆ. ಉಳಿದಂತೆ ಕೆಲ ಸಚಿವರು ತಮಷ್ಟಕ್ಕೇ ತಾವು ದೆಹಲಿಗೆ ಭೇಟಿ ನೀಡಿದ್ದಾರೆ.

8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿ ಒಂದು ಬಾರಿ ಸರ್ಕಾರವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ತಮಗೆ ಹೈಕಮಾಂಡ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿದೆ ಎಂದು ಪರಮೇಶ್ವರ್ ನಿರೀಕ್ಷಿಸಿದರು. ಅದು ಹುಸಿಯಾಗಿದೆ. ಇತ್ತೀಚೆಗೆ ಪ್ರತ್ಯೇಕ ಡಿನ್ನರ್ ಮೀಟಿಂಗ್ ಆಯೋಜಿಸಿ ವಿವಾದದ ಕೇಂದ್ರಬಿಂದುವಾಗಿದ್ದ ಪರಮೇಶ್ವರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವುದು ನಾನಾ ರೀತಿಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಪಕ್ಷ ಅಶಿಸ್ತು ಹಾಗೂ ಗುಂಪುಗಾರಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದಂತಾಗಿದೆ.ಡಿನ್ನರ್ ಮೀಟಿಂಗ್ಗೆ ಫೋನ್ ಕರೆ ಮೂಲಕವೇ ಬ್ರೇಕ್ ಹಾಕಿದ್ದ ರಣದೀಪ್ ಸಿಂಗ್ ಸುರ್ಜೇವಾಲ ಅನಂತರ ಬೆಂಗಳೂರಿಗೆ ಆಗಮಿಸಿದಾಗ ನಡೆಸಿದ ಸರಣಿ ಸಭೆಗಳಲ್ಲೂ ಪರಮೇಶ್ವರ್ಗೆ ಆಹ್ವಾನ ನೀಡದೇ ಕಡೆಗಣಿಸಿದರು. ತುಮಕೂರಿನಲ್ಲಿ ನಿಗಧಿತ ಕಾರ್ಯಕ್ರಮ ಇದ್ದಿದ್ದರಿಂದಾಗಿ ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಲಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು. ಪ್ರತ್ಯೇಕ ಡಿನ್ನರ್ ಮೀಟಿಂಗ್ ಪರಿಣಾಮ ಬೀರಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು.

ಇಂದಿರಾಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಡಿನ್ನರ್ ಮೀಟಿಂಗ್ಗೆ ಅವಕಾಶ ಪಡೆದುಕೊಳ್ಳುವ ಇರಾದೆಯಲ್ಲಿದ್ದ ಪರಮೇಶ್ವರ್ ಅವರಿಗೆ ಆಹ್ವಾನ ಪತ್ರ ದೊರೆಯದೇ ಇರುವುದು ಮುಜುಗರ ಉಂಟುಮಾಡಿದೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಕಾರ್ಯದೊತ್ತಡದಲ್ಲಿರುವುದರಿಂದ ಭೇಟಿಗೆ ಸಮಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಸದ್ಯಕ್ಕೆ ದೆಹಲಿಗೆ ತೆರಳುತ್ತಿಲ್ಲ. ಮುಂದೆ ಬೇರೆ ಸಂದರ್ಭದಲ್ಲಿ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಡಿನ್ನರ್ ಮೀಟಿಂಗ್ ಅನ್ನು ಹೈಕಮಾಂಡ್ ಸೂಚನೆ ಮೇರೆಗೆ ಮುಂದೂಡಲಾಗಿತ್ತು. ಈಗ ಮುಂದೇನು ಮಾಡಬೇಕು ಎಂಬುದನ್ನು ಮತ್ತೊಮೆ ನಾವೆಲ್ಲಾ ಕುಳಿತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಹೇಳುವ ಮೂಲಕ ಹೈಕಮಾಂಡ್ ವಿರುದ್ಧವೇ ತಿರುಗಿ ಬೀಳುವ ಮುನ್ಸೂಚನೆ ನೀಡಿದ್ದಾರೆ.

ದಲಿತರು ಮುಖ್ಯಮಂತ್ರಿಯಾಗಬಾರದೇ ಎಂಬ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಪರಮೇಶ್ವರ್, ಅವರಿಗೂ ಸಾಮರ್ಥ್ಯವಿದೆ. 30 ವರ್ಷ ಮೇಲ್ಪಟ್ಟು ರಾಜಕೀಯ ಮಾಡಿದ ಮೇಲೆ ಅವರಿಗೂ ಅವಕಾಶ ಸಿಗಬೇಕಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಮಾತನಾಡಬಾರದು ಎಂದು ಎಐಸಿಸಿ ಪ್ರತಿನಿಧಿಯಾಗಿರುವ ಪ್ರಧಾನ ಕಾರ್ಯದರ್ಶಿಯವರು ಸೂಚನೆ ನೀಡಿದ್ದಾರೆ. ಇನ್ನು ಅದರ ಬಗ್ಗೆ ನಾನು ಕಡಿಮೆ ಮಾತನಾಡುತ್ತೇನೆ. ಪಕ್ಷವೇ ಸಮುದಾಯದ ಸಭೆ ನಡೆಸುವುದಾದರೆ ನಾವೇನೂ ವಿರೋಧ ಮಾಡುವುದಿಲ್ಲ. ನಮಗೆ ಸಮಸ್ಯೆ ಬಗೆಹರಿಯಬೇಕು. ನಾವೂ ಕೂಡ ಪಕ್ಷದಲ್ಲೇ ಇದ್ದೇವೆ. ಪಕ್ಷ ಒಂದು ಆಂದೋಲನ. ಯಾರು, ಯಾವುದೇ ರೀತಿಯ ವ್ಯಾಖ್ಯಾನ ಮಾಡಲಿ, ನಮಗೆ ಸಮಸ್ಯೆ ಬಗೆಹರಿಯುವುದು ಮುಖ್ಯ ಎಂದರು.

ಪರಮೇಶ್ವರ್ರವರ ಈ ಅಸಹನೆ ಮಾತುಗಳು ಒಂದೆಡೆಯಾದರೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗುವ ಬಗ್ಗೆ ಎದುರಾದ ಪ್ರಶ್ನೆಯೊಂದಕ್ಕೆ ಸಾರಾಸಗಟಾದ ನಿರಾಕರಣೆ ಮಾಡುವ ಬದಲಾಗಿ ಜ್ಯೋತಿಷ್ಯ ಹೇಳಲು ನನಗೆ ಬರುವುದಿಲ್ಲ ಎಂದು ಪರಮೇಶ್ವರ್ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

RELATED ARTICLES

Latest News