Monday, May 6, 2024
Homeರಾಜ್ಯಕುಡಿಯುವ ನೀರಿನ ಸಮಸ್ಯೆ ಯಾಗದಂತೆ ನೋಡಿಕೊಳ್ಳಿ : ಸಿಎಂ ಎಚ್ಚರಿಕೆ

ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ನೋಡಿಕೊಳ್ಳಿ : ಸಿಎಂ ಎಚ್ಚರಿಕೆ

ಬೆಂಗಳೂರು,ನ.3- ರಾಜ್ಯದಲ್ಲಿ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದ ಅನುದಾನದ ಹೊರತಾಗಿಯೂ ರಾಜ್ಯ ಸರ್ಕಾರ ಮುಂದಾಗಿದ್ದು, ಕುಡಿಯುವ ನೀರಿನ ಬವಣೆ ನೀಗಿಸಲು 900 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದೆ. ಯಾವುದೇ ಭಾಗದಲ್ಲಿ ಸಮಸ್ಯೆಯಾಗದಂತೆ ಕಟ್ಟೆಚ್ಚರ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಮಳೆ ಕೊರತೆಯಿಂದಾಗಿ ಜಲಮೂಲಗಳು ಬತ್ತಿದ್ದು, ಹಾಹಾಕಾರ ಹೆಚ್ಚಾಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದಂತಹ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ 900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ಸಾಕಷ್ಟು ಹಣ ಲಭ್ಯವಿದೆ. ಜೊತೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಅದರ ಹೊರತಾಗಿಯೂ ಅನುದಾನದ ಕೊರತೆ ಎಂದು ಹಲವು ಕಡೆ ಆಕ್ಷೇಪಗಳು ಕೇಳಿಬರುತ್ತಲೇ ಇವೆ. ರಾಜ್ಯ ಸರ್ಕಾರ ಪಂಚ ಖಾತ್ರಿ ಯೋಜನೆಗಳಿಗೆ ಹಣ ಬಳಕೆ ಮಾಡಿ ಕುಡಿಯುವ ನೀರಿಗೆ ಸಂಕಷ್ಟದ ಸ್ಥಿತಿ ನಿರ್ಮಿಸಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ.

ಬಂಡೆಗೆ ಉಂಡೆ ನಾಮ ಗ್ಯಾರಂಟಿ : ಯತ್ನಾಳ್ ವ್ಯಂಗ್ಯ

ಬಿಜೆಪಿ ಹಲವಾರು ತಂಡಗಳನ್ನು ರಚಿಸಿಕೊಂಡು ಬರ ಅಧ್ಯಯನಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಗತ್ಯವಿರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಬರಗಾಲ ಮತ್ತು ಅದರ ಪರಿಣಾಮಗಳ ಬಗ್ಗೆ ತೀವ್ರ ನಿಗಾ ಇಡಬೇಕು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು, ನರೇಗಾ ಯೋಜನೆಯಡಿ ಕೇಂದ್ರದಿಂದ ಆರ್ಥಿಕ ನೆರವು ದೊರೆಯುವುದು ವಿಳಂಬವಾದರೂ ಕೂಡ ರಾಜ್ಯದ ಬೊಕ್ಕಸದಿಂದಲೇ ಉದ್ಯೋಗ ಸೃಷ್ಟಿಗೆ ಹಣ ನೀಡಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಡೆ ನೀಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ.

RELATED ARTICLES

Latest News