ಬೆಂಗಳೂರು, ಜ.21- ಬಿಬಿಎಂಪಿ ಯಲ್ಲಿ ಅವಧಿ ಮೀರಿ ಅಡಳಿತಾಧಿಕಾರಿಗಳನ್ನು ಮುಂದುವರೆ ಸಿರುವುದು ಹಾಗೂ ಕಾನೂನು ನಿಯಮ ಮೀರಿ ಕೈಗೊಳ್ಳುತ್ತಿರುವ ತೀರ್ಮಾನಗಳನ್ನು ಬಿಜೆಪಿ ನಾಯಕ ಎನ್.ಆರ್.ರಮೇಶ್ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ತಮ ವಕೀಲರ ಮೂಲಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಅವರು ಸರ್ಕಾರದ ಕಾನೂನುಬಾಹೀರ ಕ್ರಮಗಳನ್ನು ನಿಲ್ಲಿಸುವಂತೆ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಬಹತ್ ಬೆಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ನಿರ್ವಹಣೆ ಕಾರ್ಯವನ್ನು 25 ವರ್ಷಗಳ ಗುತ್ತಿಗೆಗೆ ನೀಡುವ ಸಂವಿಧಾನ ಬಾಹಿರ ನಿರ್ಣಯವನ್ನು ಅವರು ಪ್ರಶ್ನಿಸಿದ್ದಾರೆ.
40,000 ಕೋಟಿಗಳಿಗೂ ಹೆಚ್ಚು ಮೊತ್ತವನ್ನು ಏಕೀಕತ ಘನತ್ಯಾಜ್ಯ ನಿರ್ವಹಣಾ ಪದ್ಧತಿ ಎನ್ನುವ ಹೆಸರಿನಲ್ಲಿ ನಾಲ್ಕು ಪ್ಯಾಕೇಜ್ ಗಳ ರೂಪದಲ್ಲಿ ನೀಡುವ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಳ್ಳುವ ಮೂಲ ಸಂವಿಧಾನದ 74ನೇ ತಿದ್ದುಪಡಿಯ ನಿಯಮವನ್ನು ಅತ್ಯಂತ ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿರುತ್ತದೆ ಎಂದು ಅವರು ವಾದಿಸಿದ್ದಾರೆ.
ಸಂವಿಧಾನದ 74ನೇ ತಿದ್ದುಪಡಿಯ ಅನ್ವಯ ಯಾವುದೇ ಸ್ಥಳೀಯ ಸಂಸ್ಥೆಯಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಆಡಳಿತಾಧಿಕಾರಿಗಳು ಆಡಳಿತ ನಡೆಸುವಂತಿಲ್ಲ ಮತ್ತು ಪ್ರಜಾಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಯಾವುದೇ ಮಹತ್ವಪೂರ್ಣ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ ಎಂಬ ನಿಯಮಗಳು ಅತ್ಯಂತ ಸ್ಪಷ್ಟವಾಗಿದ್ದರೂ ಸಹ ಸಂವಿಧಾನದ ಈ ನಿಯಮಗಳನ್ನು ಅತ್ಯಂತ ಸ್ಪಷ್ಟವಾಗಿ ಗಾಳಿಗೆ ತೂರಿರುವ ಸಿದ್ದರಾಮಯ್ಯ ನೇತತ್ವದ ಸಚಿವ ಸಂಪುಟವು ಸಂವಿಧಾನ ಬಾಹಿರ ಕಾರ್ಯವನ್ನು ಮಾಡಿರುತ್ತದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ನೇತತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಸಂವಿಧಾನ ಬಾಹಿರ ಕಾರ್ಯದ ಬಗ್ಗೆ ಮತ್ತು ವಿಶೇಷವಾಗಿ ಸಂವಿಧಾನದ 74 ನೇ ತಿದ್ದುಪಡಿಯ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ನಮ ವಕೀಲರು ನ್ಯಾಯಾಧೀಶರಿಗೆ ಮನದಟ್ಟು ಮಾಡಿಕೊಡಲಿದ್ದಾರೆ ಕಸ ವಿಲೇವಾರಿ ಎಂಬಹೆಸರಿನಲ್ಲಿ ಹತ್ತಾರು ಸಾವಿರ ಕೋಟಿ ರೂಪಾಯಿಗಳನ್ನು ಒಂದೇ ಸಲ ಲೂಟಿ ಹೊಡೆಯಲು ರೂಪಿಸಿರುವ ಮಹಾ ಸಂಚು ಎಂಬುದನ್ನು ದಾಖಲೆಗಳ ಸಹಿತ ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಲಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ.