ಬೆಂಗಳೂರು,ಜ.21- ಅಂತೂ ಇಂತೂ ಎಚ್ಚೆತ್ತುಕೊಂಡಿರುವ ಬಿಎಂಆರ್ಸಿಎಲ್ ಅಧಿಕಾರಿಗಳು ಮೆಟ್ರೋ ನಿಲ್ದಾಣದಲ್ಲಿ ಶಿಶು ಸ್ತನ್ಯಪಾನ ಕೇಂದ್ರ ಆರಂಭಿಸಿದ್ದಾರೆ. ಕಳೆದ ವರ್ಷ ಟ್ರಿನಿಟಿ ನಿಲ್ದಾಣದಲ್ಲಿ ತಾಯಿಯೊಬ್ಬರು ಮಗುವಿಗೆ ಹಾಲುಣಿಸಲು ಪರದಾಡಿದ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೀಗ ಸ್ತನ್ಯಪಾನ ಕೇಂದ್ರಗಳನ್ನು ತೆರೆದಿದ್ದಾರೆ.
ಬಿಎಂಆರ್ಸಿಎಲ್ ಚೈಲ್ಡ್ ಹೆಲ್ತ್ ಫೌಂಡೇಶನ್ ಹಾಗೂ ಸಿಬ್ಡಿ ಸ್ವಾವಲಂಬನ್ ಫೌಂಡೇಶನ್ ಸಹಯೋಗದೊಂದಿಗೆ ಮೊದಲ ಹಂತದಲ್ಲಿ 5 ಮೆಟ್ರೋ ನಿಲ್ದಾಣಗಳಲ್ಲಿ ಶಿಶು ಸ್ತನ್ಯಪಾನ ಕೇಂದ್ರ ಆರಂಭಿಸಲಾಗಿದೆ.
ಬೈಯಪ್ಪನಹಳ್ಳಿ, ಮೆಜೆಸ್ಟಿಕ್ , ಯಶವಂತಪುರ, ಕೆಂಗೇರಿ ಮತ್ತು ಯಲಚೇನಹಳ್ಳಿ ನಿಲ್ದಾಣಗಳಲ್ಲಿ ಕೇಂದ್ರ ಆರಂಭ ಮಾಡಲಾಗಿದ್ದು ಎಂಟು ಇಂಟು ಎಂಟು ಅಡಿಯ ಕೊಠಡಿ ನಿರ್ಮಾಣ ಮಾಡಲಾಗಿದ್ದು, ಏಕಕಾಲಕ್ಕೆ ನಾಲ್ವರು ತಾಯಂದಿರು ತಮ ಮಕ್ಕಳಿಗೆ ಹಾಲುಳಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಜೊತೆಗೆ ತಾಯಂದಿರಯ ಬಯಸಿದರೆ ಬೆಂಚುಗಳ ಮೇಲೆ ಮಲಗಲು ಅವಕಾಶ ಮಾಡಿಕೊಡಲಾಗಿದೆ. ಸ್ತನ್ಯಪಾನ ಕೇಂದ್ರವಿಲ್ಲದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಗ್ರಾಹಕ ಸಹಾಯವಾಣಿ ಸಂಪರ್ಕಿಸಲು ಸೂಚನೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಸ್ತನ್ಯಪಾನ ಕೇಂದ್ರ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.