ಕಠ್ಮಂಡು,ನ.4-ಭಾರತಕ್ಕೆ ಹೊಂದಿಕೊಂಡಿರುವ ನೆರೆಯ ಪುಟ್ಟ ರಾಷ್ಟ್ರ ನೇಪಾಳದಲ್ಲಿ ಕಳೆದ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 129 ಮಂದಿ ಸಾವನ್ನಪ್ಪಿ, ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಭೂಕಂಪದಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಪ್ರಬಲ ಭೂಕಂಪ ಸಂಭವಿಸಿರುವುದರಿಂದ ನೇಪಾಳ ತತ್ತರಿಸಿ ಹೋಗಿದೆ. ಘಟನೆಯಲ್ಲಿ ಜಾಜರ್ ಕೋಟ್‍ನ ನಲ್ಗಢ್ ಪುರಸಭೆಯ ಉಪಮೇಯರ್ ಸರಿತಾ ಸಿಂಗ್ ಅವರು ಸಾವನ್ನಪ್ಪಿದ್ದಾರೆ.
ಉಪಮೇಯರ್ ಸಿಂಗ್ ಅವರು ಪಾಲಿಕೆಯ ಪ್ರಧಾನ ಕಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿದ್ದರು. ಈ ವೇಳೆ ಭೂಕಂಪನದಿಂದ ಕಟ್ಟಡದಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಕರ್ನಾಲಿ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಡಿಐಜಿ ಭೀಮ್ ಧಾಕಲ್ ಮಾಹಿತಿ ನೀಡಿದ್ದಾರೆ. ಉಪಮೇಯರ್ ಸರಿತಾ ಸಿಂಗ್ ನೇಪಾಳಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.
ಭಾರತ-ನೇಪಾಳ ಗಡಿಯಲ್ಲಿರುವ ಕತಿಹಾರ್, ಮೋತಿಹಾರಿ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಜಿ (ಎನ್ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದುವು ನೇಪಾಳದ ಅಯೋಧ್ಯೆಯ ಉತ್ತರಕ್ಕೆ 227 ಕಿಮೀ ಮತ್ತು ಕಠ್ಮಂಡುವಿನಿಂದ 331 ಕಿಮೀ ಪಶ್ಚಿಮ ವಾಯುವ್ಯದಲ್ಲಿ 10 ಕಿಮೀ ಆಳದಲ್ಲಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯನ್ನು ಈ ಕಂಪನಗಳು ಹೊಂದಿದ್ದವು ಎಂದು ಅಮೆರಿಕದ ಜಿಯೋಲಜಿಕಲ್ ಸರ್ವೆ ಇಲಾಖೆ ತಿಳಿಸಿದೆ.
ಭೂಕಂಪದಿಂದ ಹಲವು ಮನೆಗಳು ಧ್ವಂಸಗೊಂಡಿವೆ. ರುಕುಮ್ ವೆಸ್ಟ್‍ನಲ್ಲಿ 35 ಜನರು ಸಾವನ್ನಪ್ಪಿದ್ದಾರೆ ಎಂದು ನೇಪಾಳಿ ಅಧಿಕಾರಿಗಳು ದೃಢಪಡಿಸಿದ್ದಾರೆ, ಜಜಕೋರ್ಟ್ ಜಿಲ್ಲೆಯಲ್ಲಿ ಇದುವರೆಗೆ 34 ಜನರು ಸಾವನ್ನಪ್ಪಿದ್ದಾರೆ. ಭೂಕಂಪದ ನಂತರ ರಕ್ಷಣಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಮಗನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಗುಂಡು ಹಾರಿಸಿದ ತಂದೆ
ತಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕಾಗಿ ಎಲ್ಲಾ 3 ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ ಎಂದು ನೇಪಾಳ ಪಿಎಂಒ ಟ್ವೀಟ್ ಮಾಡಿದೆ. ನೇಪಾಳದಲ್ಲಿನ ತೀವ್ರತೆ ಭೂಕಂಪನವನ್ನು ಕಣ್ಣಾರೆ ಕಂಡ ಜನರು, ಭಯಬೀತರಾಗಿದ್ದು, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಕಟ್ಟಡಗಳು ಉರುಳುತ್ತಿದ್ದುದು, ಅದರ ಅಡಿಗಳಲ್ಲಿ ಜನರು ಸಿಲುಕಿಕೊಂಡು ಜೋರಾಗಿ ಕೂಗಾಡುತ್ತಿದ್ದುದ್ದನ್ನು ಕಣ್ಣಾರೆ ಕಂಡಿದ್ದಾರೆ.
ಅಲ್ಲದೇ ಧರೆಗುರುಳಿದ ಕಟ್ಟಡಗಳಲ್ಲಿ ಅನೇಕ ಮಂದಿ ಸಿಲುಕಿದ್ದಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ನೇಪಾಳದ ಪಶ್ಚಿಮ ಭಾಗದಲ್ಲಿರುವ ಜಾಜರ್ ಕೋಟ್ ಜಿಲ್ಲೆಯಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ, ರುಕ್ಕುಮ್ ಜಿಲ್ಲೆಯಲ್ಲಿ 33 ಮಂದಿ ಸಾವಿಗೀಡಾಗಿದ್ದಾರೆ. ಈಗಾಗಲೇ 70 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರ ಈ ಬಗ್ಗೆ ಅಕೃತ ಪ್ರಕಟಣೆ ಹೊರಡಿಸಿಲ್ಲ.
ಸಹಸ್ರಾರು ವರ್ಷಗಳ ಹಿಂದೆ ಭಾರತವಿರುವ ಭೂಭಾಗವು, ಯೂರೇಷಿಯನ್ ಭೂಭಾಗವನ್ನು ಒತ್ತಿಕೊಂಡು ಹೋಗಿದ್ದರಿಂದಾಗಿ ಹಿಮಾಲಯ ಪರ್ವತಗಳು ಸೃಷ್ಟಿಯಾಗಿವೆ ಎಂದು ಹೇಳಲಾಗಿದೆ.
ಆದರೆ, ಭಾರತದ ಭೂಭಾಗವು, ಯುರೇಷಿಯನ್ ಭೂಭಾಗವನ್ನು ಸ್ಪರ್ಶಿಸಿದ್ದ ಭಾಗದಲ್ಲೇ ನೇಪಾಳ ದೇಶವಿದೆ. ಹಾಗಾಗಿ, ಇಲ್ಲಿ ಪ್ರಾಕೃತಿಕ ವಿಕೋಪಗಳು ಸಾಮಾನ್ಯ ಸಂಗತಿಗಳಾಗಿದ್ದು ಅದರಲ್ಲೂ ವಿಶೇಷವಾಗಿ ಆ ದೇಶ ಆಗಾಗ್ಗೆ ಭೂಕಂಪನಗಳಿಗೆ ಈಡಾಗುತ್ತಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಆರು ತಿಂಗಳ ಹಿಂದೆಯೂ ಅಲ್ಲಿ ಒಂದೇ ದಿನ ಎರಡು ಬಾರಿ ಭೂಮಿ ಕಂಪಿಸಿತ್ತು.
40 ಸೆಕೆಂಡುಗಳ ಕಾಲ ನಡುಗಿದ ಭೂಮಿ: ಭೂಕಂಪವು ರಾತ್ರಿ 11.47 ಕ್ಕೆ ಅಪ್ಪಳಿಸಿತು. ಅದರ ಕೇಂದ್ರಬಿಂದುವು ಜಜಕೋರ್ಟ್‍ನ ಭೂಮಿಯಿಂದ 10 ಕಿ.ಮೀ. ಆಳದಲ್ಲಿದೆ ಕಂಡು ಬಂದಿದೆ. ಭೂಕಂಪನದ ಪ್ರಭಾವ ಭಾರತ ಮತ್ತು ಚೀನಾದಲ್ಲಿಯೂ ಕಂಡುಬಂದಿದೆ. ಭಾರತದಲ್ಲೂ ಸುಮಾರು 20 ರಿಂದ 40 ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಡಿಯೋ ವೈರಲ್: ರಾತ್ರಿ 11.32ರ ವೇಳೆಗೆ ಭೂಕಂಪನದ ಅನುಭವವಾಗಿದೆ. ಜನರು ಊಟ ಮಾಡಿ ಮಲಗಲು ತಯಾರಿ ನಡೆಸುತ್ತಿದ್ದ ಸಮಯದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ನಂತರ ಜನರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಬಳಿಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಭೂಕಂಪದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮನೆಯ ಮತ್ತು ರಸ್ತೆ ದೀಪಗಳು ಹಾಗೂ ಸೀಲಿಂಗ್ ಫ್ಯಾನ್ ಅಲುಗಾಡುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಪ್ರಧಾನಿ ಸಂತಾಪ: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ಭೂಕಂಪದಿಂದ ಜೀವ ಮತ್ತು ಆಸ್ತಿ ನಷ್ಟಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ಜಜಕೋರ್ಟ್‍ನ ರಾಮಿದಂಡಾದಲ್ಲಿ ಸಂಭವಿಸಿದ ಭೂಕಂಪದಿಂದ ಜೀವ ಮತ್ತು ಆಸ್ತಿ ನಷ್ಟಕ್ಕೆ ಪ್ರಧಾನಿ ಪುಷ್ಪ ಕಮಲ್ ದಹಲ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಎಂದು ನೇಪಾಳದ ಪಿಎಂಒ ಟ್ವೀಟ್ ಮಾಡಿದೆ.
ಪೊಲೀಸ್ ಸಿಬ್ಬಂದಿಗಳು ಕಡ್ಡಾಯವಾಗಿ ಪರೇಡ್‍ನಲ್ಲಿ ಭಾಗವಹಿಸಿ : ದಯಾನಂದ
ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ ಪ್ರಾಣಹಾನಿ ಮತ್ತು ಹಾನಿಯಿಂದ ತೀವ್ರ ದುಃಖವಾಗಿದೆ. ಭಾರತವು ನೇಪಾಳದ ಜನರೊಂದಿಗೆ ನಿಲ್ಲಲಿದೆ. ನಾವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧರಿದ್ದೇವೆ. ನಾವು ದುಃಖತಪ್ತ ಕುಟುಂಬಗಳೊಂದಿಗೆ ಇರಲಿದ್ದೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ.ನರೇಂದ್ರ ಮೋದಿ ಪ್ರಧಾನ ಮಂತ್ರಿ