ರತ್ಲಮ್, ಜ.27-ಪ್ರೇಮ ವಿವಾಹ ವಿರುದ್ದ ಇಲ್ಲಿನ ಗ್ರಾಮವೊಂದರಲ್ಲಿ ಕಠಿಣ ನಿಲುವಿನಲ್ಲಿ ,ನಿಯಮ ಪಾಲಿಸದವರಿಗೆ ಸಾಮಾಜಿಕ ಬಹಿಷ್ಕಾರ ಆದೇಶ ಹೊರಡಿಸಲಾಗಿದೆ.ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯ ಪಂಚೇವಾ ಗ್ರಾಮದ ನಿವಾಸಿಗಳು ಪ್ರೇಮ ವಿವಾಹವಾಗುವ ದಂಪತಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಘೋಷಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು,ಇದರಿಂದಾಗಿ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಪಂಚೇವಾದಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಕಳೆದ ಆರು ತಿಂಗಳಲ್ಲಿ ಗ್ರಾಮದ ಎಂಟು ಜೋಡಿಗಳು ಓಡಿಹೋಗಿ ಮದುವೆಯಾದ ನಂತರ ಸಾಮಾಜಿಕ ಬಹಿಷ್ಕಾರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿಕೊಂಡಿದ್ದಾರೆ.
ಓಡಿಹೋಗಿ ಪ್ರೀತಿಗಾಗಿ ಮದುವೆಯಾಗುವ ಯುವಕರು ಮತ್ತು ಯುವತಿಯರು ಹಾಗೂ ಅವರ ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುವುದು ಮತ್ತು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ ಎಂದು ವ್ಯಕ್ತಿಯೊಬ್ಬ ಘೋಷಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಜಿಲ್ಲಾಧಿಕಾರಿ ಮಿಶಾ ಸಿಂಗ್ ಅವರು ವಿಡಿಯೋದಲ್ಲಿರುವ ಜನರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರೇಮ ವಿವಾಹಗಳ ವಿರುದ್ಧದ ನಿರ್ಧಾರವನ್ನು ಗ್ರಾಮ ಸಭೆ ತೆಗೆದುಕೊಂಡಿಲ್ಲ, ಬದಲಾಗಿ ಗ್ರಾಮಸ್ಥರೇ ತೆಗೆದುಕೊಂಡಿದ್ದಾರೆ ಎಂದು ನಮ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಕುಮಾರ್ ಲಾಲ್ ಅವರು ಮಾತನಾಡಿ ವಿವರವಾದ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
