Tuesday, January 27, 2026
Homeರಾಜ್ಯವಿಧಾನಸಭೆಯಲ್ಲಿ ಧರಣಿ ಕೈಬಿಟ್ಟ ಪ್ರತಿಪಕ್ಷಗಳು

ವಿಧಾನಸಭೆಯಲ್ಲಿ ಧರಣಿ ಕೈಬಿಟ್ಟ ಪ್ರತಿಪಕ್ಷಗಳು

Opposition parties call off sit-in in the Assembly

ಬೆಂಗಳೂರು,ಜ.27- ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಶುಕ್ರವಾರ ಆರಂಭಿಸಿದ್ದ ಧರಣಿಯನ್ನು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌‍ ಇಂದು ವಿಧಾನಸಭೆಯಲ್ಲಿ ಹಿಂಪಡೆದವು.

ನಿಗದಿತ ಸಮಯಕ್ಕಿಂತ ಸುಮಾರು 2 ಗಂಟೆ ತಡವಾಗಿ ಸದನ ಆರಂಭವಾದಾಗ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಪದಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆ ಸಲ್ಲಿಸಲು ಮುಂದಾದರು. ಅಷ್ಟರಲ್ಲಾಗಲೇ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಪ್ರತಿಪಕ್ಷಗಳ ಶಾಸಕರು ಧರಣಿ ಆರಂಭಿಸಿದ್ದರು.

ಧರಣಿಯನ್ನು ವಾಪಸ್‌‍ ಪಡೆದು ಪ್ರಶ್ನೋತ್ತರ ಕಲಾಪ ಆರಂಭಿಸಲು ಸಹಕಾರ ಕೊಡಿ ಎಂದು ಸಭಾಧ್ಯಕ್ಷರು ಕೋರಿದರು.ಆದರೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಅಬಕಾರಿ ಇಲಾಖೆಯಲ್ಲಿ ಲಂಚ ಕೇಳಿದ ಆರೋಪದ ಬಗ್ಗೆ ಚರ್ಚೆ ನಡೆಸಲು ನಿಲುವಳಿ ಸೂಚನೆ ನೋಟಿಸ್‌‍ ಕೊಡಲಾಗಿತ್ತು. ಶುಕ್ರವಾರದಿಂದಲೂ ನಾವು ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ.

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ಹಾದಿಬೀದಿಯಲ್ಲಿ ಜನರು ಮಾತನಾಡುವಂತಾಗಿದೆ. ಲಂಚಕ್ಕೆ ಬೇಡಿಕೆ ಇಡಲಾಗಿದೆ ಎನ್ನಲಾದ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ನಾವು ಜನರ ದನಿಯಾಗಿ ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ.

ಅಬಕಾರಿ ಸಂಘದವರು ಕಾಂಗ್ರೆಸ್‌‍ ನಾಯಕ ರಾಹುಲ್‌ಗಾಂಧಿ, ಪ್ರಧಾನಿ, ರಾಷ್ಟ್ರಪತಿಯನ್ನು ಭೇಟಿ ಮಾಡಲು ಹೋಗಿದ್ದಾರೆ. ಸರ್ಕಾರದ ಮಾನ ಮರ್ಯಾದೆ ಹರಾಜಾಗುತ್ತಿದೆ. ಎಸ್‌‍ಟಿ ಅಭಿವೃದ್ಧಿ ನಿಗಮದ ಹಗರಣದ ವಿಚಾರ ಪ್ರಸ್ತಾಪವಾದಾಗ ಸಂಬಂಧಿಸಿದ ಸಚಿವರ ರಾಜೀನಾಮೆ ಪಡೆಯಲಾಗಿತ್ತು. ಆದರೆ ಅಬಕಾರಿ ಇಲಾಖೆಯ ವಿಚಾರದಲ್ಲಿ ಆ ರೀತಿಯ ಕ್ರಮವಿಲ್ಲ ಏಕೆ? ಈ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಆಗ ಸಭಾಧ್ಯಕ್ಷರು ನೀವು ನೀಡಿದ ನಿಲುವಳಿ ಸೂಚನೆಯನ್ನು ಪರಿವರ್ತಿಸಿ ನಿಯಮ 69 ರಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಈಗಾಗಲೇ ಹೇಳಿದ್ದೇನೆ. ರಾಜ್ಯಪಾಲರ ವಂದನಾ ನಿರ್ಣಯದ ಪ್ರಸ್ತಾಪ ಕುರಿತು ಆಡಳಿತ ಪಕ್ಷದ ಶಾಸಕ ಪೊನ್ನಣ್ಣ ಹಾಗೂ ಪ್ರದೀಪ್‌ ಈಶ್ವರ್‌ ಅವರು ಮಾತನಾಡಬೇಕಿದೆ. ಧರಣಿ ಕೈಬಿಟ್ಟು ಮುಂದಿನ ಕಾರ್ಯಕಲಾಪಕ್ಕೆ ಅವಕಾಶವನ್ನು ನೀಡಿ ಸಹಕಾರ ನೀಡಬೇಕು ಎಂದು ತಿಳಿಸಿದರು.

ಆಗ ಅಶೋಕ್‌ ಮಾತನಾಡಿ, ಮಧ್ಯಾಹ್ನದ ನಂತರ ನಮಗೆ ಚರ್ಚೆಗೆ ಅವಕಾಶ ಕೊಡಬೇಕು. ನೀವು ಆಡಳಿತ ಪಕ್ಷದ ಕಡೆ ವಾಲುವುದಿಲ್ಲ ಎಂಬ ವಿಶ್ವಾಸವಿದೆ. ಏಕೆಂದರೆ ಅಬಕಾರಿ ಇಲಾಖೆಗೆ ಸಂಬಂಧಿಸಿದ ಆಡಿಯೋ ಸಂಭಾಷಣೆಯಲ್ಲಿ ತುಳುವಿನಲ್ಲಿ ಮಾತನಾಡಿದ್ದಿದೆ. ಮಂಗಳೂರಿನವರು ಸಚ್ಚಾರಿತ್ರ್ಯ ಉಳ್ಳವರು. ನೀವು ಹಾಗೆಯೇ ಮಾತನಾಡಿ ಎಂದರು.

ಆಗ ಸಭಾಧ್ಯಕ್ಷರು ಆ ಕಡೆಯೂ ವಾಲುವುದಿಲ್ಲ, ಈಕಡೆಯೂ ವಾಲುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.ಪ್ರತಿಪಕ್ಷಗಳ ಶಾಸಕರು ಧರಣಿ ಕೈಬಿಟ್ಟು ಸ್ವಸ್ಥಾನಕ್ಕೆ ಮರಳಿ ಮುಂದಿನ ಕಾರ್ಯಕಲಾಪಗಳಿಗೆ ಸಹಕಾರ ನೀಡಿದರು.

RELATED ARTICLES

Latest News