ಬೆಂಗಳೂರು, ಫೆ.11-ರಾಜ್ಯದ ಔದ್ಯೋಗಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇಂದಿನಿಂದ ಆರಂಭಗೊಂಡಿದ್ದು ಸುಮಾರು 10 ಲಕ್ಷ ಕೋಟಿ ರೂ.ಗಳ ಹೂಡಿಕೆಯ ನಿರೀಕ್ಷೆ ವ್ಯಕ್ತವಾಗಿದೆ.ಸುಮಾರು 20 ಕ್ಕೂ ಹೆಚ್ಚು ದೇಶಗಳ ಪ್ರಮುಖ ಉದ್ಯಮಿಗಳು, 150ಕ್ಕೂ ಹೆಚ್ಚು ಪ್ರದರ್ಶಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಈ ಸಮಾವೇಶಕ್ಕಾಗಿ ರಾಜ್ಯಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಬಂಡವಾಳ ಹೂಡಿಕೆಗೆ ಜಾಗತಿಕ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ದೇಶ ಹಾಗೂ ವಿದೇಶಿಯ ಪ್ರಮುಖ ಕಂಪನಿಗಳು, ಮುಂದುವರೆದ ರಾಷ್ಟ್ರಗಳ ಉದ್ಯಮಿಗಳು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
ಇದಕ್ಕಾಗಿ 30 ಗೋಷ್ಠಿಗಳನ್ನು ಆಯೋಜಿಸಿದ್ದು, 100ಕ್ಕೂ ಹೆಚ್ಚು ಭಾಷಣಕಾರರು ರಾಜ್ಯದ ನೈಸರ್ಗಿಕ, ಮಾನವ ಸಂಪನೂಲಗಳ ಬಗ್ಗೆ ವಿವರಣೆ ನೀಡಲಿದ್ದು, ಕೈಗಾರಿಕಾ ಸ್ನೇಹಿ ವಾತಾವರಣದ ಬಗ್ಗೆ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಇಲಾಖೆಗಳು ಸಮಾವೇಶದ ಆಯೋಜನೆಗೆ ಟೊಂಕ ಕಟ್ಟಿ ನಿಂತಿವೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು.ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮತ್ತಿತರರು ಸಮಾವೇಶಕ್ಕೆ ಸಾಕ್ಷಿಯಾದರು. ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ , ನವೋದ್ಯಮ, ಏರೊಸ್ಪೇಸ್ ಆ್ಯಂಡ್ ಡಿಫೆನ್ಸ್ ಮತ್ತಿತರ ಕ್ಷೇತ್ರಗಳಲ್ಲಿ ವಿಶ್ವದಾದ್ಯಂತ ಪ್ರಖ್ಯಾತಿಯ ಛಾಪು ಮೂಡಿಸಿರುವ ಕರ್ನಾಟಕವು, ಪ್ರಗತಿಯ ಮರುಕಲ್ಪನೆ ಧ್ಯೇಯದ ಇನ್ವೆಸ್ಟ್ ಕರ್ನಾಟಕ -2025ರ ಮೂಲಕ ವಿಶ್ವದಾದ್ಯಂತದ ಹೂಡಿಕೆದಾರರನ್ನು ರಾಜ್ಯದತ್ತ ಚುಂಬಕದಂತೆ ಸೆಳೆಯಲು ಸಜ್ಜಾಗಿದೆ.
ಶುಕ್ರವಾರದವರೆಗೆ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲಿರುವ ಉದ್ದಿಮೆ ದಿಗ್ಗಜರು, ಹೂಡಿಕೆದಾರರು, ನವೋದ್ಯಮಗಳ ಕನಸುಗಾರರು, ನೀತಿ ನಿರೂಪಣೆಯ ಚಿಂತಕರಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಕೆಂಪುರತ್ನಗಂಬಳಿಯ ಸ್ವಾಗತ ಕೋರಲು ಸಜ್ಜುಗೊಂಡಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ ಒದಗಿಸಲಿದೆ. ನಾಳೆಯಿಂದ ಶುಕ್ರವಾರದವರೆಗೆ ನಡೆಯಲಿರುವ ವಿವಿಧ ವಿಚಾರಗೋಷ್ಠಿಗಳಲ್ಲಿ ವಿವಿಧ ಕ್ಷೇತ್ರಗಳ ದಿಗ್ಗಜರು ಉದ್ದಿಮೆ ಲೋಕದ ಭವಿಷ್ಯದ ಬಗೆಗಿನ ತಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರಮುಖ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗುವುದು ಎಂದು ಅವರು ವಿವರಿಸಿದ್ದಾರೆ.
ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ ಪ್ರಶಸ್ತಿ, ಎಸ್ಎಂಇ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಎಸ್ಎಂಇ ಕನೆಕ್ಟ್- 25, ವೆಂಚುರೈಸ್ನ ಎರಡನೆ ಆವೃತ್ತಿ ಇತರ ವಿಶೇಷತೆಗಳಾಗಿವೆ. 60ಕ್ಕೂ ಹೆಚ್ಚು ಕಂಪನಿಗಳು ಮತ್ತು ನವೋದ್ಯಮಗಳು ತಯಾರಿಕೆ, ಸಂಚಾರ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುವ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕ್ವೀನ್ಸಿಟಿನಲ್ಲಿ ಸಹಭಾಗಿತ್ವ ವಿಸ್ತರಿಸಲು ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕವನ್ನು ಜಾಗತಿಕ ಬಂಡವಾಳ ಹೂಡಿಕೆಯ ಪ್ರಮುಖ ತಾಣವನ್ನಾಗಿ ಇಡೀ ವಿಶ್ವಕ್ಕೆ ಪ್ರದರ್ಶಿಸಲು, ಪಾಲುದಾರಿಕೆ ಉತ್ತೇಜಿಸುವುದು ಮತ್ತು ವಿವಿಧ ಕೈಗಾರಿಕಾ ವಲಯಗಳಲ್ಲಿ ನಾವೀನ್ಯತೆಗೆ ಚಾಲನೆ ನೀಡುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಇದು ಬಂಡವಾಳ ಹೂಡಿಕೆಗೆ ವೇದಿಕೆಯಾಗಿರುವುದರ ಜೊತೆಗೆ, ಸರ್ಕಾರ ಮತ್ತು ಉದ್ಯಮ ವಲಯದ ನಡುವಣ ಅರ್ಥಪೂರ್ಣ ಸಹಯೋಗ ಬೆಸೆಯುವುದಕ್ಕೂ ನೆರವಾಗಲಿದೆ. ವಿವಿಧ ಕೈಗಾರಿಕಾ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆ ಬೆಳೆಸುವುದರ ಜೊತೆಗೆ, ನಾವೀನ್ಯತೆ ಮತ್ತು ಹೂಡಿಕೆ ಕೇಂದ್ರವಾಗಿರುವ ಕರ್ನಾಟಕದ ಮಹತ್ವವನ್ನು ಇಡೀ ವಿಶ್ವಕ್ಕೆ ಮತ್ತೊಮೆ ಮನದಟ್ಟು ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.
ನೂರಕ್ಕೂ ಹೆಚ್ಚು ಪರಿಣಿತ ಭಾಷಣಕಾರರು ಭಾಗವಹಿಸಲಿದ್ದಾರೆ. 30 ಕ್ಕೂ ಹೆಚ್ಚು ತಾಂತ್ರಿಕ ಅಧಿವೇಶನಗಳು, 19ಕ್ಕೂ ಹೆಚ್ಚು ದೇಶಗಳ ಜೊತೆಗಿನ ಸಭೆ, ಮತ್ತು ಎಸ್ಎಂಇ ಕನೆಕ್ಟ್ಗೆ ಸಂಬಂಧಿಸಿದ ಸಮಾಲೋಚನೆಗಳಿಗೆ ಈ ಹೂಡಿಕೆ ಶೃಂಗಸಭೆಯು ಸಾಕ್ಷಿಯಾಗಲಿದೆ.
ರಾಜ್ಯಕ್ಕೆ ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲು ಅಗತ್ಯವಾದ ಭೂಮಿಕೆಯನ್ನು ರಾಜ್ಯ ಸರ್ಕಾರವು ಹದಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹತ್ತಾರು ಪ್ರಥಮಗಳನ್ನು ತನ್ನ ಮುಡಿಗೆ ಏರಿಸಿಕೊಂಡಿರುವ ಕರ್ನಾಟಕವು, ಈ ಸಮಾವೇಶದ ನೆರವಿನಿಂದ ತನ್ನ ಕೈಗಾರಿಕಾ ಪ್ರಗತಿಯ ವೇಗ ಹೆಚ್ಚಿಸಲು ದೃಢ ನಿರ್ಧಾರ ಮಾಡಿದೆ ಎಂದು ಸಚಿವ ಪಾಟೀಲ ಅವರು ವಿವರಿಸಿದ್ದಾರೆ.
ನಾಳೆಯಿಂದ 14ರವರೆಗೆ ಸಮಾವೇಶ ಸ್ಥಳದಲ್ಲಿ ವಿವಿಧ ವಿಚಾರಗೋಷ್ಠಿಗಳು, ಸಂವಾದ, ಸಮೂಹ ಚರ್ಚೆಗಳೂ ನಡೆಯಲಿವೆ. ನಾಳೆ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ: ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ, ಕ್ಷಮತೆಯ ಮಾರ್ಗೋಪಾಯಗಳು: ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ ,
ಭವಿಷ್ಯಕ್ಕೆ ನಾವೀನ್ಯತೆ,ಮುಂದಾಳತ್ವ:
ಭಾರತದ ಭವಿಷ್ಯ ರೂಪಿಸುತ್ತಿರುವ ಯುವ ನಾವೀನ್ಯಕಾರರು- ಸಂವಾದಗಳಲ್ಲಿ ಪರಿಣತರು ತಮ್ಮ ಚಿಂತನೆಗಳನ್ನು ಮಂಡಿಸಲಿದ್ದಾರೆ. ಫೆ. 13 ರಂದು ಕೃತಕ ಬುದ್ಧಿಮತ್ತೆ ಸೀಮಾರೇಖೆ: ದೈತ್ಯ ಜಿಗಿತದಿಂದ ನೈಜ-ಪ್ರಪಂಚದ ಪ್ರಭಾವಗಳವರೆಗೆ- ಸಂವಾದ, ವೈವಿಧ್ಯಮಯ ಪಥಗಳಿಂದ ಸಾಮಾನ್ಯ ಗುರಿಯವರೆಗೆ- ಸಮೂಹ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.