ಮುಜಾಫರ್‌ನಗರ, ಫೆ.13- ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಅಪಘಾತದ ಸಂದರ್ಭದಲ್ಲಿ ಪಂತ್ ಅವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಜತ್‌ಕುಮಾರ್ ಎಂಬಾತ ತನ್ನ ಗೆಳತಿಯೊಂದಿಗೆ ವಿಷ ಸೇವಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಬುಚಾ ಬಸ್ತಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯ ಆತನ ಗೆಳತಿ ಮೃತಪಟ್ಟಿದ್ದು ರಜತ್‌ಕುಮಾರ್ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮನು ಕಶ್ಯಪ್ ಎಂಬುವರನ್ನು ಪ್ರೀತಿಸಿ ವಿವಾಹವಾಗಲು ರಜತ್ ನಿರ್ಧರಿಸಿದ್ದರು. ಆದರೆ, ಮನು ಪೋಷಕರು ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಘಟನೆಯಲ್ಲಿ ಮನು ಮೃತಪಟ್ಟಿರುವುದರಿಂದ ಅವರ ಪೋಷಕರು ಕುಮಾರ್ ತನ್ನ ಮಗಳನ್ನು ಅಪಹರಿಸಿ ವಿಷ ಸೇವಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಡಿಸೆಂಬರ್ 2022 ರಲ್ಲಿ ರಿಷಬ್ ಪಂತ್ ಅವರ ಕಾರು ಅಪಘಾತವಾದಾಗ ಸ್ಥಳೀಯ ನಿವಾಸಿಯಾದ ನಿಶು ಕುಮಾರ್ ಅವರೊಂದಿಗೆ ರಜತ್ಕುಮಾರ್ ಅವರು ಪಂತ್ ಅವರನ್ನು ಮಾರಣಾಂತಿಕ ಕಾರು ಅಪಘಾತದಿಂದ ರಕ್ಷಿಸ ರಾಷ್ಟ್ರೀಯ ಗಮನ ಸೆಳೆದಿದ್ದರು. ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ಚಾಲನೆ ಮಾಡುತ್ತಿದ್ದಾಗ ರೂರ್ಕಿ ಬಳಿ ಅವರ ಮರ್ಸಿಡಿಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು.
ಸಮೀಪದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರು ಅಪಘಾತವನ್ನು ಕಂಡು ಸಹಾಯ ಮಾಡಲು ಧಾವಿಸಿದರು. ಅವರು ಉರಿಯುತ್ತಿರುವ ವಾಹನದಿಂದ ಪಂತ್ ಅವರನ್ನು ಎಳೆದು ತುರ್ತು ವೈದ್ಯಕೀಯ ಸಹಾಯಕ್ಕಾಗಿ ವ್ಯವಸ್ಥೆ ಮಾಡಿದ್ದರು. ಅವರ ತ್ವರಿತ ಕ್ರಿಯೆಯನ್ನು ವ್ಯಾಪಕವಾಗಿ ಪ್ರಶಂಸೆಗೆ ಪಾತ್ರವಾಗಿತ್ತು. ಮತ್ತು ಅವರ ಶೌರ್ಯವನ್ನು ಗುರುತಿಸಿ ಪಂತ್ ನಂತರ ಅವರಿಗೆ ಮೆಚ್ಚುಗೆಯ ಸಂಕೇತವಾಗಿ ಸ್ಕೂಟರ್ ಗಳನ್ನು ಉಡುಗೊರೆಯಾಗಿ ನೀಡಿದ್ದರು.