ನವದೆಹಲಿ, ಫೆ.13- ಕೇಂದ್ರದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತಾತ್ಮಕವಾಗಿ ಹಲವಾರು ಸುಧಾರಣೆಗಳನ್ನು ಮಾಡಿರುವ ಮೋದಿ ಸರ್ಕಾರ, ಈ ಬಾರಿ 1961ರ ಆದಾಯ ತೆರಿಗೆ ಕಾಯ್ದೆಯನ್ನು ಕೈಬಿಟ್ಟು ಹೊಸದಾಗಿ 2025ರ ಆದಾಯ ತೆರಿಗೆ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧವಾಗಿದೆ.
ಬದಲಾದ ಸಂದರ್ಭದಲ್ಲಿ ಹಣ, ಆಸ್ತಿ ಎಂಬುದು ನಾನಾ ಸ್ವರೂಪ ತಾಳುತ್ತಿರುವ ಹಾಗೂ ಅದನ್ನು ಅರ್ಥೈಸುವ ರೀತಿಗಳೂ ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ಕಾಯ್ದೆ ಅಗತ್ಯತೆಯನ್ನು ಅರಿತಿರುವ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ.
ಟ್ಯಾಕ್ಸ್ ಇಯರ್ – ಹೊಸ ಪರಿಕಲ್ಪನೆ
ಈವರೆಗಿನ ಕಾಯ್ದೆಯಲ್ಲಿ ಏ. 1ರಿಂದ ಅದರ ಮರುವರ್ಷದ ಮಾ. 31ರ ಅವಧಿಯನ್ನು ಹಣಕಾಸು ವರ್ಷ (ತೆರಿಗೆದಾರರಿಗೆ) ಎಂದು ಕರೆಯಲಾಗುತ್ತಿತ್ತು. ಆದರೆ, ಹೊಸ ಕಾಯ್ದೆಯಲ್ಲಿ ಈ 12 ತಿಂಗಳ ಅವಧಿಯನ್ನು ತೆರಿಗೆ ವರ್ಷ ಎಂದು ಹೆಸರಿಸಲಾಗಿದೆ.
ಇನ್ನು, ಹೊಸದಾಗಿ ಬ್ಯುಸಿನೆಸ್ ಶುರು ಮಾಡುವವರಿಗೆ ಅವರು ತಮ್ಮ ವ್ಯವಹಾರ ಆರಂಭಗೊಳಿಸಿದ ದಿನಾಂಕದಿಂದ ಆ ಹಣಕಾಸು ವರ್ಷದ ಮಾ. 31 ರೊಳಗೆ ಎಷ್ಟು ವ್ಯವಹಾರವಾಗಿರುತ್ತದೋ ಅದರ ಆಧಾರದ ಮೇಲೆ ತೆರಿಗೆ ಲೆಕ್ಕಚಾರ ಹಾಕಲಾಗುತ್ತದೆ. ಅವರಿಗೂ ತೆರಿಗೆ ವರ್ಷ ಎಂಬ ಪದ ಅನ್ವಯಿಸಲಾಗಿದೆ.
ಯಾವ ವರ್ಷ ಆದಾಯವೋ, ಅದೇ ವರ್ಷ ತೆರಿಗೆ
ಈಗ ಚಾಲ್ತಿಯಲ್ಲಿರುವ ಕಾಯ್ದೆಯಂತೆ, ತೆರಿಗೆ ಪದ್ಧತಿಯನ್ನು ಆದಾಯ ವರ್ಷ ಹಾಗೂ ಮೌಲ್ಯಮಾಪನ ವರ್ಷ ವರ್ಷ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಅಂದರೆ, 2024-25ರಲ್ಲಿ ನಿಮಗೆ ಬಂದಿರುವ ಆದಾಯವನ್ನು 2025-26ರಲ್ಲಿ ಮೌಲ್ಯಮಾಪನ (ಅಸ್ಸೆಸ್ ಮೆಂಟ್ ) ಮಾಡಲಾಗುತ್ತಿತ್ತು. ಹೊಸ ಕಾಯ್ದೆಯಲ್ಲಿ ಈ ಪದ್ಧತಿಯನ್ನು ತೆಗೆದುಹಾಕಲಾಗುತ್ತದೆ. ಅದರಲ್ಲಿ ಆದಾಯದ ವರ್ಷವನ್ನೇ ಮೌಲ್ಯಮಾಪನ ವರ್ಷ ಎಂದು ಪರಿಗಣಿಸಲಾಗುತ್ತದೆ.
ವಡ್ಯೂವಲ್ ಡಿಜಿಟಲ್ ಅಸೆಟ್ ಪರಿಕಲ್ಪನೆ ಸೇರ್ಪಡೆ
ಬದಲಾದ ಕಾಲಘಟ್ಟದಲ್ಲಿ ಹಣದ ಹೂಡಿಕೆಯು ನಾನಾ ಸ್ವರೂಪಗಳಲ್ಲಿ ನಡೆಯುತ್ತಿವೆ. ಕ್ರಿಪ್ರೋ ಕರೆನ್ಸಿ ಸೇರಿದಂತೆ ಹಲವಾರು ರೀತಿಯ ವಿದ್ಯುನ್ಮಾನ ಮಾದರಿಯ ಹೂಡಿಕೆಗಳೂ ಈಗ ಚಾಲ್ತಿಗೆ ಬಂದಿವೆ. ಭಾರತೀಯರು ಅದರಲ್ಲಿ ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡಿದ್ದಾರೆ. ಅದನ್ನು ಮನಗಂಡಿರುವ ಕೇಂದ್ರ ಆದಾಯ ತೆರಿಗೆ ಇಲಾಖೆ, 2025ರ ಆದಾಯ ತೆರಿಗೆ ವಿಧೇಯಕದಲ್ಲಿ ವಚ್ಯುವಲ್ ಡಿಜಿಟಲ್ ಅಸೆಟ್ (ತತ್ಸಮಾನ ವಿದ್ಯುನ್ಮಾನ ಆಸ್ತಿ) ಎಂಬ ಪರಿಕಲ್ಪನೆ ಆಧಾರದಲ್ಲಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಅದರಂತೆ ಭಾರತೀಯರು ಕ್ರಿಪ್ರೋ ಕರೆನ್ಸಿ, ಡಿಜಿಟಲ್ ಮಾದರಿಯ ಫೋಟೋ, ವಿಡಿಯೋ, ದಾಖಲೆಗಳ ಮೂಲಕ ಗಳಿಸುತ್ತಿರುವ ಆದಾಯವಾಗಿರಬಹುದು. ಈ ಎಲ್ಲಾ ರೀತಿಯ ವಿದ್ಯುನ್ಮಾನ ಆಸ್ತಿಪಾಸ್ತಿಗಳನ್ನು ಡಿಜಿಟಲ್ ಅಸೆಟ್ ಪರಿಕಲ್ಪನೆಯಡಿ ತರಲಾಗಿದೆ.
ಘೋಷಿಸದ ಆಸ್ತಿ ವನ್ನೂವಲ್ ಆಸ್ತಿ!
ಒಂದು ವೇಳೆ, ನಿರ್ದಿಷ್ಟ ಆದಾಯ ವರ್ಷದಲ್ಲಿ ನಿಮಗೆ ಬಂದಿರುವ ಹಣ, ಷೇರು ಮಾರುಕಟ್ಟೆ ಆದಾಯ ಅಥವಾ ಚಿನ್ನಾಭರಣಗಳು ಇತ್ಯಾದಿ ಬೆಲೆ ಬಾಳುವಂಥ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಸಲ್ಲಿಸದೇ ಇದ್ದರೆ ಅವುಗಳನ್ನು ವಚ್ಯುವಲ್ ಡಿಜಿಟಲ್ ಅಸೆಟ್ ಗಳೆಂದು ಪರಿಗಣಿಸಲು ಹೊಸ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾನ್ಯ ಭಾಷೆಯಲ್ಲಿರುವ ಮಸೂದೆ
1951ರ ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ, 2025ರ ಆದಾಯ ತೆರಿಗೆ ಮಸೂದೆಯು ತೀರಾ ಸರಳ ಭಾಷೆಯಲ್ಲಿದೆ. 1951 ರ ಕಾಯ್ದೆಯಲ್ಲಿ 823 ಪುಟಗಳಿದ್ದರೆ, ಹೊಸ ಕಾಯ್ದೆಯಲ್ಲಿ 622 ಪುಟಗಳಷ್ಟು ಕಾನೂನುಗಳಿವೆ. ಆದಾಯ ತೆರಿಗೆ ವಿಧೇಯಕದಲ್ಲಿ 23 ಅಧ್ಯಾಯಗಳಿವೆ. 1961 ರ ಆದಾಯ ತೆರಿಗೆ ಕಾಯ್ದೆಯಲ್ಲಿರುವ ವಿಭಾಗಗಳು 298 ಇದ್ದರೆ, ಹೊಸ ಕಾಯ್ದೆಯಲ್ಲಿ 536 ವಿಭಾಗಗಳಿವೆ. ಹಳೆಯ ಕಾಯ್ದೆಯಲ್ಲಿ 14 ಶೆಡ್ಯೂಲುಗಳಿದ್ದರೆ, ಹೊಸ ಕಾಯ್ದೆಯಲ್ಲಿ 10 ಶೆಡ್ಯೂಲುಗಳಿವೆ.