ಬೆಂಗಳೂರು,ಫೆ.13 – ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾದ ಹಿನ್ನಲೆಯಲ್ಲಿ ಬೆಂಗಳೂರು ಜನತೆ ಜೀವನಾಡಿಯಾಗಿ ನಮ್ಮ ಮೆಟ್ರೋ ಪ್ರಯಾಣ ದರ ಇಳಿಕೆಯಾಗುವ ಸಂಭವವಿದೆ.
ಈ ಬಗ್ಗೆ ಸುಳಿವು ನೀಡಿರುವ ಬಿಎಂಆರ್ಸಿಎಲ್ ಸಂಸ್ಥೆ ನಿರ್ದೇಶಕ ಮಹೇಶ್ವರ ರಾವ್ ಅವರು, ಕೆಲವು ಕಡೆ ಶೇ.100ರಿಂದ 90ರಷ್ಟು ದರ ಏರಿಕೆಯಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ ಮಧ್ಯಾಹ್ನ 1.30ಕ್ಕೆ ಸುದ್ದಿಗೋಷ್ಟಿ ನಡೆಸಿರುವ ಅವರು, ಯಾವ ಯಾವ ಕಡೆ 100ರಿಂದ 90ರಷ್ಟು ಏರಿಕೆಯಾಗಿರುವ ಕಡೆ ದರವನ್ನು ಪರಿಷ್ಕರಣೆ ಮಾಡುತ್ತೇವೆಂಬ ಸುಳಿವು ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ರೊ ದರ ಹೆಚ್ಚಳ ಮಾಡಿರುವುದನ್ನು ಪರಿಷ್ಕರಣೆ ಮಾಡುವಂತೆ ಸೂಚನೆ ನೀಡಿದ ಬೆನ್ನಲ್ಲೇ ದರ ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಪ್ರಯಾಣಿಕರ ಆಕ್ರೋಶಕ್ಕೆ ಮಣಿದಿರುವ ಬಿಎಂಆರ್ಸಿಎಲ್ ದರ ಇಳಿಕೆಗೆ ಮುಂದಾಗಿದೆ. ಬೆಲೆ ಏರಿಕೆಯಿಂದಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 80 ಸಾವಿರದಷ್ಟು ಇಳಿಕೆಯಾಗಿತ್ತು, ಮತ್ತೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ನಮೋ ಮೆಟ್ರೋ ಎಂದು ಟ್ರೆಂಡ್ ಕ್ರಿಯೇಟ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಮೆಟ್ರೋ ದರ ಇಳಿಕೆ ಮಾರ್ಪಾಡಿಗೆ ಬಿಎಂಆರ್ ಸಿಎಲ್ ಮುಂದಾಗಿದೆ. ಶೇ.100, ಶೇ.15ರಷ್ಟು ಏರಿಕೆ ಆಗಿರುವ ಭಾಗದಲ್ಲಿ ದರ ಇಳಿಕೆ ಮಾಡಲಾಗುವುದು. 100% ಏರಿಕೆ ಆಗಿದೆ ಎಂದು ಜನ ಸೋಶಿಯಲ್ ಮೀಡಿಯಾದಲ್ಲಿ ದರ ತೋರಿಸಿದ್ದಾರೆ. ಹಾಗಾಗಿ ಆ ಭಾಗದಲ್ಲಿ ಫೇರ್ ಮ್ಯಾಟ್ರಿಕ್ಸ್ನಲ್ಲಿ ದರ ಮಾರ್ಪಾಡು ಮಾಡಲಾಗುವುದು ಎಂದು ಮಹೇಶ್ವರ ರಾವ್ ಹೇಳಿಕೆ ನೀಡಿದ್ದಾರೆ.
ಸೋಮವಾರ ದರ ಏರಿಕೆ ಮಾಡಿದ್ದೇವೆ. ಆ ಬಳಿಕ ಸಾಕಷ್ಟು ಕಡೆಗಳಲ್ಲಿ 100%, 90% ಏರಿಕೆಯಾಗಿದೆ ಮಾಹಿತಿ ಬಂದಿದೆ. ಸಾಕಷ್ಟು ಕಡೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ದರ ನಿಗದಿ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಈಗಾಗಲೇ ನಮ್ಮ ಅಧಿಕಾರಿಗಳು ಮತ್ತೊಮ್ಮೆ ದರ ನಿಗದಿ ಸಮಿತಿಯ ವರದಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬೆಲೆ ಇಳಿಕೆ ಬಗ್ಗೆ ಸಿಎಂ ಕೂಡ ಸೂಚನೆ ಕೊಟ್ಟಿದ್ದು, ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ.
ಎಲ್ಲೆಲ್ಲಿ ಹೆಚ್ಚು ದರ ಏರಿಕೆ ಆಗಿದೆ ಅಲ್ಲಿ ಏನು ಮಾಡಬಹುದು ಎಂದು ಪರಿಶೀಲಿಸುತ್ತಿದ್ದೇವೆ. ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಸಂಪೂರ್ಣವಾಗಿ ವಿವರಣೆ ನೀಡುತ್ತೇವೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಯಾವ ರೀತಿ ದರ ಏರಿಕೆ ಆಗಿರುವ ದರವನ್ನು ಮರು ನಿಗದಿ ಮಾಡಬಹುದು ಎಂಬುದನ್ನು ನೋಡುತ್ತೇವೆ ಎಂದು ಹೇಳಿದ್ದಾರೆ.
ಇಳಿಮುಖವಾದ ಪ್ರಯಾಣಿಕರ ಸಂಖ್ಯೆ:
ಮೆಟ್ರೋ ಟಿಕೆಟ್ ದರ ಏರಿಕೆಯಾದ ಬೆನ್ನಲ್ಲೇ ಮೆಟ್ರೋನಲ್ಲಿ ಪ್ರಯಾಣಿಸುವವರ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಪ್ರತಿದಿನ ಮೆಟ್ರೋದಲ್ಲಿ 8 ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದರೆ ಇದೀಗ ದರ ಏರಿಕೆಯಾದ ಮೇಲೆ ಪ್ರಯಾಣಿಕರ ಸಂಖ್ಯೆ ಶೇ.35ರಿಂದ ಶೇ.40ರಷ್ಟು ಕಡಿಮೆಯಾಗಿದೆ. 6 ರಿಂದ 7 ಲಕ್ಷ ಪ್ರಯಾಣಿಕರು ಮಾತ್ರ ಸಂಚರಿಸಿದ್ದಾರೆ ಎಂದು ಪ್ರಯಾಣಿಕರ ಕುಸಿತವನ್ನು ನಮ್ಮ ಮೆಟ್ರೋ ದಾಖಲಿಸಿದೆ.
ಮೆಟ್ರೋ ಪ್ರಯಾಣಿಕರ ಅಂಕಿ ಸಂಖ್ಯೆ
ಪ್ರಯಾಣ ದರ ಏರಿಕೆಗೂ ಮೊದಲು ಫೆ.8ರಂದು 8.07 ಲಕ್ಷ ಪ್ರಯಾಣಿಕರು ಪ್ರಯಾಣ, ಫೆ.9ರಂದು ದರ ಏರಿಕೆ ಬಳಿಕ ಪ್ರಯಾಣಿಕರ ಸಂಖ್ಯೆ 6.23 ಲಕ್ಷಕ್ಕೆ ಏಳಿಕೆ, ಫೆಬ್ರುವರಿ 10 ರಂದು ಪ್ರಯಾಣಿಕರ ಸಂಖ್ಯೆ 8.28 ಲಕ್ಷ, ಫೆ.11 ರಂದು ಪ್ರಯಾಣಿಕರ ಸಂಖ್ಯೆ 1.78 ಲಕ್ಷಕ್ಕೆ ಇಳಿಕೆಯಾಗಿದೆ.
ಪ್ರಯಾಣಿಕರ ಸಂಖ್ಯೆ ಕುಂಠಿತವಾಗುತ್ತಿದ್ದಂತೆಯೇ ಸಹಜವಾಗಿ ಕಲೆಕ್ಷನ್ ಸಹ ಕಡಿಮೆಯಾಗಿದೆ. ದರ ಏರಿಕೆ ಮಾಡುವ ಮೊದಲು ಒಂದು ದಿನಕ್ಕೆ 2 ಕೋಟಿಯಿಂದ 2.50 ಕೋಟಿ ರೂ. ಕಲೆಕ್ಷನ್ ಆಗುತ್ತಿತ್ತು. ದರ ಏರಿಕೆ ಬಳಿಕ ದಿನಕ್ಕೆ ಒಂದೂವರೆಯಿಂದ 2 ಕೋಟಿ ರೂ.ವರೆಗೆ ಮಾತ್ರ ಕಲೆಕ್ಷನ್ ಆಗುತ್ತಿದೆ.
ಈ ಸೋಮವಾರದಿಂದ ಮೆಟ್ರೋ ಪ್ರಯಾಣಿಕರು ಮೆಟ್ರೋ ಬಿಟ್ಟು ತಮ್ಮ ಸ್ವಂತ ಕಾರು, ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ನಾಲ್ಕು ದಿನದಿಂದ ಬೆಂಗಳೂರು ನಗರದಲ್ಲಿ ವಿಪರೀತವಾಗಿ ಟ್ರಾಫಿಕ್ ಸಮಸ್ಯೆ ಸಹ ಹೆಚ್ಚಾಗಿದೆ.
ಈಗಾಗಲೇ ಮೆಟ್ರೋ ದರ ಏರಿಕೆಯನ್ನು ಜನರು ಖಂಡಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಪ್ರಯಾಣಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಎಂಆರ್ ಸಿಎಲ್ 45% ರಿಂದ 50% ರಷ್ಟು ದರ ಏರಿಕೆ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ ದರ ಏರಿಕೆಯಾಗಿರುವುದು ಶೇ.100ರಷ್ಟು, ಅಂದರೆ ಬನ್ ಟು ಡಬಲ್.
ರೈತರು, ಕನ್ನಡಪರ ಹೋರಾಟಗಾರರು, ಪ್ರಗತಿಪರ ಸಂಘಟನೆಗಳು ಮತ್ತು ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರು ಬಿಎಂಆರ್ ಸಿಎಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.
ಬಿಜೆಪಿ-ಕಾಂಗ್ರೆಸ್ ನಾಯಕರ ಕೆಸರೆರಚಾಟ
ಮೆಟ್ರೋ ದರ ಏರಿಕೆ ಮಾಡುವುದು ನಮ್ಮ ಕೈನಲ್ಲಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಹ ಇಲ್ಲ ರಾಜ್ಯ ಸರ್ಕಾರ ಸಲಹೆ ನೀಡಿದ್ದಕ್ಕೆ ಏರಿಕೆಯಾಗಿದೆ ಎಂದು ತಿರುಗೇಟು ನೀಡುತ್ತಿದ್ದಾರೆ. ಹೀಗೆ ಎರಡೂ ಪಕ್ಷಗಳ ನಾಯಕರ ಕೆಸರೆರಚಾಟ ಮುಂದುವರೆದಿದೆ ಹೊರೆತು ಮೆಟ್ರೋವನ್ನೇ ನೆಚ್ಚಿಕೊಂಡಿರುವ ಜನರ ಸಮಸ್ಯೆ ಮಾತ್ರ ಕೇಳುತ್ತಿಲ್ಲ.
ಇನ್ನು ಈ ದರ ಏರಿಕೆ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಸಹ ಭೇಟಿ ಮಾಡಿದ್ದು, ದರ ಏರಿಕೆಯಿಂದ ಮಾಧ್ಯಮ ವರ್ಗದ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರಕ್ಕೆ ಒಂದು ಪತ್ರ ಬರೆದರೆ ಮಾತ್ರ ಏರಿಕೆ ಮಾಡಲಾಗಿರುವ ದರವನ್ನು ಇಳಿಕೆ ಮಾಡಲು ಸಾಧ್ಯ ಎಂದಿದ್ದಾರೆ.
ಬಿಜೆಪಿ ವಿರುದ್ಧ ಸಿಎಂ ಆಕ್ರೋಶ :
ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ ಮಾಹಿತಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ. ಸರ್ಕಾರದ ಯಾವುದೇ ನೀತಿ-ನಿರ್ಧಾರಗಳನ್ನು ವಿರೋಧಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ.
ಸಂವಿಧಾನಬದ್ದವಾದ ಅವರ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ವಿರೋಧ ಪಕ್ಷದ ಸ್ಥಾನದಲ್ಲಿ ಜನ ಕೂರಿಸಿರುವ ರಾಜ್ಯದ ಬಿಜೆಪಿಯು ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ. ಒಂದೆಡೆ ಮೆಟ್ರೋ ರೈಲು ನಿರ್ಮಾಣದ ಸಾಧನೆ ಕೇಂದ್ರ ಸರ್ಕಾರದ್ದು ಎಂದು ಡಂಗುರ ಬಾರಿಸುತ್ತಿರುವ ಬಿಜೆಪಿ ನಾಯಕರು ದರ ಪರಿಷ್ಕರಣೆ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಅದರ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವುದು ಆತ್ಮವಂಚಕ ನಡವಳಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.