Saturday, April 18, 2026
Homeಬೆಂಗಳೂರುಜಾತ್ರೆ, ಸಂತೆ ಹಾಗೂ ಬಸ್‌‍ಗಳಲ್ಲಿ ಮಹಿಳೆಯರ ಚಿನ್ನಾಭರಣ ಕದಿಯುತ್ತಿದ್ದ ದಂಪತಿ ಅರೆಸ್ಟ್

ಜಾತ್ರೆ, ಸಂತೆ ಹಾಗೂ ಬಸ್‌‍ಗಳಲ್ಲಿ ಮಹಿಳೆಯರ ಚಿನ್ನಾಭರಣ ಕದಿಯುತ್ತಿದ್ದ ದಂಪತಿ ಅರೆಸ್ಟ್

Couple arrested for stealing women's jewellery at fairs, festivals and buses

ಬೆಂಗಳೂರು,ಜ.28- ಹೆಚ್ಚಾಗಿ ಜನರು ಸೇರುವ ಜಾತ್ರೆ, ಸಂತೆ ಹಾಗೂ ಬಸ್‌‍ಗಳಲ್ಲಿ ಸಂಚರಿಸುತ್ತಿದ್ದ ಮಹಿಳೆಯರ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಮೈಸೂರು ಮೂಲದ ದಂಪತಿಯನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿ 60 ಲಕ್ಷ ಮೌಲ್ಯದ 398 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಹೆಚ್‌ಡಿಕೋಟೆ ತಾಲ್ಲೂಕು ನಿವಾಸಿಗಳಾದ ಶ್ರೀಕಾಂತ್‌ (42) ಮತ್ತು ಗಾಯತ್ರಿ (33) ಬಂಧಿತ ದಂಪತಿ. ಈ ದಂಪತಿ ನಗರದ ಕಮಸಂದ್ರ ವಡ್ಡಾರಪಾಳ್ಯದ ಸಂಪಿಗೆ ನಗರದಲ್ಲಿ ವಾಸವಾಗಿದ್ದುಕೊಂಡು ಪಾತ್ರೆ ವ್ಯಾಪಾರ ಹಾಗೂ ಕೂದಲು ವ್ಯಾಪಾರ ಮಾಡುತ್ತಿದ್ದರು.

ದೇವಸಂದ್ರದಲ್ಲಿ ನಿವಾಸಿ ಲಕ್ಷ್ಮಮ ಎಂಬುವವರು ಕಳೆದ ಏ.3 ರಂದು ರಾತ್ರಿ ಮೊಮಗನ ಜೊತೆಯಲ್ಲಿ ಮನೆ ಸಮೀಪವಿರುವ ಮಾರಿಯಮ ದೇವಸ್ಥಾನಕ್ಕೆ ಹೋಗಿದ್ದಾಗ ಪ್ರಸಾದ ಕೊಡುವ ಸ್ಥಳದಲ್ಲಿ ನೂಕುನುಗ್ಗಲಾಗಿದ್ದು, ನಂತರ ಅವರ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ಚಿನ್ನದ ಮಾಂಗಲ್ಯದ ಸರ ಕಳುವಾಗಿದೆ.

ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮಾಹಿತಿಯನ್ನು ಕಲೆ ಹಾಕಿ, ಕಮಸಂದ್ರದ ಸಂಪಿಗೆ ನಗರದಲ್ಲಿ ದಂಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ದಂಪತಿಯನ್ನು ವಿಚಾರಣೆ ಮಾಡಿದಾಗ ನಗರದ ವಿವಿಧ ಕಡೆಗಳಲ್ಲಿ ಇತರೆ ಮೂವರು ಹೊರ ರಾಜ್ಯದ ಮಹಿಳಾ ಸಹಚರರೊಂದಿಗೆ ಸೇರಿಕೊಂಡು ಜಾತ್ರೆ, ಸಂತೆ ಹಾಗೂ ಬಸ್‌‍ಗಳಲ್ಲಿ ಸಂಚರಿಸುವ ಮಹಿಳೆಯರ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ದಂಪತಿಯನ್ನು ಸುಧೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಹೆಬ್ಬಗೋಡಿಯ ಬ್ಯಾಂಕ್‌ವೊಂದರಲ್ಲಿ ಹಾಗೂ ಮೈಸೂರಿನ ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟಮಾಡಿರುವುದಾಗಿ ತಿಳಿಸಿರುತ್ತಾರೆ.

ಈ ಮಾಹಿತಿಯಂತೆ ಪೊಲೀಸರು ತನಿಖೆ ಮುಂದುವರೆಸಿ ಹೆಬ್ಬಗೋಡಿಯ ಬ್ಯಾಂಕ್‌ನಲ್ಲಿ ಮಾರಾಟ ಮಾಡಿದ್ದ 358 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಮೈಸೂರಿನ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 40 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳ ಒಟ್ಟು ಮೌಲ್ಯ 60ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಹೊರರಾಜ್ಯದ ಮೂವರು ಮಹಿಳೆಯರ ಪತ್ತೆ ಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ. ದಂಪತಿಯ ಬಂಧನದಿಂದ, ಕೆ.ಆರ್‌ ಪುರ ಪೊಲೀಸ್‌‍ ಠಾಣೆಯ 3, ಆವಲಹಳ್ಳಿ , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ಕೋಲಾರ ಟೌನ್‌ ಠಾಣೆಯ ತಲಾ 1 ಕಳವು ಪ್ರಕರಣ ಸೇರಿದಂತೆ ಒಟ್ಟು 6 ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಕಾರ್ಯಾಚರಣೆೆಯಲ್ಲಿ ಇನ್ಸ್ ಪೆಕ್ಟರ್‌ ರಾಮಮೂರ್ತಿ ಹಾಗು ಸಿಬ್ಬಂದಿ ತಂಡ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News