ಬೆಂಗಳೂರು, ಫೆ.18-ಹವಾಮಾನದಲ್ಲಾಗುತ್ತಿರುವ ಬದಲಾವಣೆಯಿಂದಾಗಿ ತಾಪಮಾನದಲ್ಲಿ ವ್ಯತ್ಯಾಸವಾಗುತ್ತಿದ್ದು,ಬೇಸಿಗೆಗೂ ಮುನ್ನವೇ ಬಿಸಿಲಿನ ಬೇಗೆ ತೀವ್ರಗೊಂಡಿದೆ. ಬಿಸಿಲನಾಡು ಎಂದೇ ಬಿಂಬಿಸಲಾಗುವ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿ.ಸೆಂ.ನಷ್ಟು ದಾಖಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ 2ರಿಂದ 3ಡಿ.ಸೆಂ.ನಷ್ಟು ತಾಪಮಾನ ಏರಿಕೆಯಾಗುವ ಮುನ್ಸೂಚನೆಗಳಿವೆ.
ಚಳಿಗಾಲದಲ್ಲೇ ರಾಜ್ಯಾದ್ಯಂತ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳಲ್ಲಿ ಸರಾಸರಿಗಿಂತ ಹೆಚ್ಚಾಗಿರುವುದು ಕಂಡುಬರುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಉಷ್ಣಾಂಶ ಈಗಾಗಲೇ 30 ಡಿ.ಸೆಂ. ಗಡಿ ದಾಟಿದೆ. ಕನಿಷ್ಠ ತಾಪಮಾನವೂ16 ಡಿ.ಸೆಂ.ಗಿಂತ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 20 ಡಿ.ಸೆಂ.ಗಿಂತಲೂ ಹೆಚ್ಚಾಗಿದೆ.
ಸಾಮಾನ್ಯವಾಗಿ ಮಾರ್ಚ್ ನಿಂದ ಬೇಸಿಗೆ ಆರಂಭವಾಗಲಿದೆ. ಫೆಬ್ರವರಿ ತಿಂಗಳು ಮುಗಿಯಲು ಇನ್ನೂ 12 ದಿನ ಬಾಕಿ ಇದೆ. ಆದರೂ ಬೇಸಿಗೆಯ ಅನುಭವ ಜನರಿಗಾಗುತ್ತಿದೆ. ಇದೇ ರೀತಿ ತಾಪಮಾನ ಏರಿಕೆಯಾದರೆ, ಏಪ್ರಿಲ್, ಮೇ ತಿಂಗಳಲ್ಲಿ ಯಾವ ರೀತಿ ಸುಡು ಬಿಸಿಲು ಇರಬಹುದು ಎಂಬ ಆತಂಕ ಮನೆ ಮಾಡತೊಡಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಗುರ್‌ಗುಂಟ ಹೋಬಳಿಯಲ್ಲಿ ಗರಿಷ್ಠ ತಾಪಮಾನ 40ಡಿ.ಸೆಂ. ದಾಖಲಾಗಿದೆ. ರಾಜ್ಯ 8 ಹೋಬಳಿಗಳಲ್ಲಿ ನಿನ್ನೆ 39.2ಡಿ.ಸೆಂ.ನಿಂದ 40 ಡಿ.ಸೆಂ.ವರೆಗೆ ಗರಿಷ್ಠ ತಾಪಮಾನ ದಾಖಲಾಗಿದೆ.
ಹಾವೇರಿ ತಾಲ್ಲೂಕಿನ ಹಾವೇರಿ, ಯಡ್ರಾಮಿ ತಾಲ್ಲೂಕಿನ ಐಜೇರಿ ಹಾಗೂ ಸಿಂಧನೂರು ತಾಲ್ಲೂಕಿನ ಸಾಲ್ಗುಂಡಿ ಹೋಬಳಿಗಳಲ್ಲಿ ತಲಾ 39.6 ಡಿ.ಸೆಂ.ನಷ್ಟು, ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ, ಸಿಂಧನೂರು ತಾಲ್ಲೂಕಿನ ಹುಡ ಹೋಬಳಿಗಳಲ್ಲಿ ತಲಾ 39.4 ಡಿ.ಸೆಂ.ನಷ್ಟು ಮುಂಡಗೋಡ್ ತಾಲ್ಲೂಕಿನ ಪಾಲ ಹೋಬಳಿಯಲ್ಲಿ 39.3 ಡಿ.ಸೆಂ. ಮತ್ತು ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಹೋಬಳಿಯಲ್ಲಿ 39.2 ಡಿ.ಸೆಂ.ನಷ್ಟು ಗರಿಷ್ಠ ತಾಪಮಾನ ದಾಖಲಾಗಿರುವುದು ಕಂಡುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ 29.4 ಡಿ.ಸೆಂ.ನಷ್ಟಿದೆ. ಬೆಂಗಳೂರಿನಲ್ಲಿ 34.5 ಡಿ.ಸೆಂ.ನಷ್ಟು ದಾಖಲಾಗಿದ್ದು, ಒಟ್ಟಾರೆ 33 ಡಿ.ಸೆಂ.ನಿಂದ 36 ಡಿ.ಸೆಂ.ವರೆಗೂ ದಾಖಲಾಗುತ್ತಿದೆ.
ಕರಾವಳಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ತಾಪಮಾನದಲ್ಲಿ ಏರಿಳಿತವಾಗುತ್ತಿದ್ದು, ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಹವಾಮಾನ ವೈಪರೀತ್ಯದ ಪರಿಣಾಮದಿಂದ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.
ಕಳೆದ ಎರಡು ತಿಂಗಳಿನಿಂದ ಮಳೆಯಾಗಿಲ್ಲ. ಜನವರಿ, ಫೆಬ್ರವರಿಯಲ್ಲಿ ಆಕಾಲಿಕ ಮಳೆ ಪ್ರಮಾಣ ಕಡಿಮೆ ಇರುತ್ತದೆ. ಆದರೂ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಇದರಿಂದ ಚಳಿಯ ಪ್ರಮಾಣವೂ ಕಡಿಮೆಯಾಗಿದ್ದು, ಬಿಸಿಲು ಏರತೊಡಗಿದೆ. ಅಲ್ಲದೆ, ಚಳಿಗಾಲ ಮುಗಿಯುತ್ತಿರುವ, ಬೇಸಿಗೆ ಆರಂಭವಾಗುವ ಪರ್ವಕಾಲವಾಗಿರುವುದರಿಂದ ಕೆಲವೊಂದು ಬದಲಾವಣೆಗಳಾಗಲಿವೆ.