ಮಧುಗಿರಿ, ಫೆ.19- ಖಾಸಗಿ ಆಸ್ಪತ್ರೆಯ ನರ್ಸ್‌ವೊಬ್ಬರ ಎಡವಟ್ಟಿನಿಂದ ಸೊಂಟಕ್ಕೆ ನೀಡಬೇಕಾದ ಚುಚ್ಚುಮದ್ದನ್ನು ನರಕ್ಕೆ ನೀಡಿದ್ದರಿಂದ ಬಾಲಕ ಸ್ವಾಧೀನ ಕಳೆದುಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ತಾಲ್ಲೂಕಿನ ಕೃಷ್ಣಯ್ಯ ಪಾಳ್ಯದ ಗಂಗರಾಜು ಎಂಬುವವರ ಪುತ್ರನಿಗೆ ಇತ್ತೀಚೆಗೆ ಆರೋಗ್ಯ ಸರಿಯಿಲ್ಲದ ಕಾರಣ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದಾರೆ.ಅಲ್ಲಿನ ವೈದ್ಯರು ಬಾಲಕನನ್ನು ಪರೀಕ್ಷಿಸಿ ಜ್ವರ ಬಂದಿದೆ ಎಂದು ತಿಳಿಸಿದ್ದಾರೆ. ಕೂಡಲೇ ರಕ್ತ ಪರೀಕ್ಷೆ ನಡೆಸಿ ಇಂಜೆಕ್ಷನ್ ನೀಡುವಂತೆ ವೈದ್ಯರು ನರ್ಸ್‌ಗೆ ಸೂಚಿಸಿದ್ದಾರೆ.
ಆದರೆ, ನರ್ಸ್ ಇಂಜೆಕ್ಷನ್ ಅನ್ನು ಮಗುವಿನ ಎಡಗಾಲಿನ ಸೊಂಟಕ್ಕೆ ನೀಡುವ ಬದಲಾಗಿ ನರಕ್ಕೆ ಕೊಟ್ಟಿದ್ದಾರೆ. ನಡೆಯಲಾಗದೆ ನೋವಿನಿಂದ ಬಾಲಕ ನರಳಾಡಿದ್ದಾನೆ. ಇಂಜೆಕ್ಷನ್ ನೋವಿರಬಹುದು. ಸ್ವಲ್ಪ ಸಮಯದ ನಂತರ ಸರಿಹೋಗಲಿದೆ ಎಂದು ಬಾಲಕನನ್ನು ಆಟೋದಲ್ಲಿ ಪೋಷಕರು ಮನೆಗೆ ಕರೆದೊಯ್ದಿದ್ದಾರೆ.
ಮನೆಯಲ್ಲಿ ನೋವು ಹೆಚ್ಚಾಗಿದ್ದು, ಕೂಡಲೇ ಮಧುಗಿರಿಯ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗೆ ಮತ್ತೆ ಕರೆದುಕೊಂಡು ಬಂದಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗ ನರಕ್ಕೆ ಇಂಜೆಕ್ಷನ್ ನೀಡಿರುವುದರಿಂದ ಈ ರೀತಿ ಆಗಿದೆ ಎಂದು ತಿಳಿದುಬಂದಿದ್ದು, ಪೋಷಕರು ಮಧುಗಿರಿ ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿಗೆ ದೂರು ನೀಡಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.