ಬೆಂಗಳೂರು,ಫೆ.21– ಕೂಡಲೇ ಬೇಸಿಗೆಯ ತಿಂಗಳುಗಳಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ಅಂದಾಜಿಸಿ ಕುಡಿಯುವ ನೀರು, ವಿದ್ಯುತ್ ಪೂರೈಕೆಯನ್ನು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕದಂತೆ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಮುಂದಾಗಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರು ಬವಣೆಯ ಬಲೆಯಲ್ಲಿ ಸಿಲುಕದಂತೆ ಮುಂದಾಲೋಚನೆಯ ಯೋಜನೆಯನ್ನು ಈ ಕ್ಷಣದಿಂದಲೇ ಆರಂಭಿಸುವಂತೆ ಒತ್ತಾಯಿಸಿದ್ದಾರೆ. ಪರಿಸ್ಥಿತಿಯ ಭೀಕರತೆ ನಿಯಂತ್ರಣಕ್ಕೆ ತರಲಾರದಷ್ಟು ಉಲ್ಬಣಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ಘನಘೋರ ಪರಿಸ್ಥಿತಿ ಬೇಸಿಗೆಯ ಸಂದರ್ಭದಲ್ಲಿ ನಿರ್ಮಾಣವಾದರೆ ಅದರ ಹೊಣೆಯನ್ನು ಸರ್ಕಾರ ಪರಿಸರದ ಮೇಲೆ ಹೊರಿಸಿ ಕೈ ತೊಳೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಕಾಳಜಿಯ ಮಾತು ಹಾಗಿರಲಿ.
ರೈತರನ್ನು ಶೋಷಿಸಿದ್ದೇ ಹೆಚ್ಚು. ರೈತರು ಉಪಟಳ, ಉಪದ್ರವ ನಿರಂತರ ಅನುಭವಿಸುತ್ತಲೇ ಇದ್ದಾರೆ. ಇದೀಗ ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲ್ಲೂಕಿನ ಕೆಲ ಗ್ರಾಮದ ರೈತರು ವಿದ್ಯುತ್ ಅಡಚಣೆಯಿಂದ ರೋಸಿ ಹೋಗಿ ಸೆಸ್ಕ್ ಅಧಿಕಾರಿಗಳಿಗೆ ದಿಗ್ಧಂಧನ ಮಾಡಿ ತಮ್ಮ ಆಕ್ರೋಶಭರಿತ ಆಕ್ರಂದನ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.
ಬಿರು ಬೇಸಿಗೆ ತಾಪ ಆರಂಭದಲ್ಲೇ ಜನರನ್ನು ಹೈರಾಣಾಗಿಸುತ್ತಿದೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಬಹುದು ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ಕೃಷಿಕರ ಸ್ಥಿತಿ ಊಹಿಸಲಸಾಧ್ಯ ಪರಿಸ್ಥಿತಿ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಆಶ್ರಯಿಸುವುದನ್ನು ಬಿಟ್ಟು ಪರ್ಯಾಯ ಮಾರ್ಗ ಇಲ್ಲವೇ ಇಲ್ಲ. ಆದರೆ ಈಗಲೇ ರೈತರಿಗೆ ವಿದ್ಯುತ್ ಅಡಚಣೆ ಸರಿಪಡಿಸುವಲ್ಲಿ ತಾತ್ಸಾರ ಧೋರಣೆ ಪ್ರಾರಂಭಿಸಿರುವ ಕಾಂಗ್ರೆಸ್ ಸರ್ಕಾರ ತನ್ನ ಆಂತರಿಕ ಕಚ್ಚಾಟದಿಂದ ಹೊರಗೆ ಬಂದು ಜನರ ಸಂಕಷ್ಟವನ್ನು ಗಮನಿಸುತ್ತಿಲ್ಲ, ನಿವೇದನೆಗಳನ್ನು ಆಲಿಸುತ್ತಿಲ್ಲ ಎಂದು ವಿಜಯೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.