Saturday, February 22, 2025
Homeರಾಜ್ಯಲೋಕಾಯುಕ್ತದಿಂದ ಪಾರಾದ ಸಿಎಂ ಸಿದ್ದರಾಮಯ್ಯನವರಿಗೆ ಇ.ಡಿ ಸಂಕಷ್ಟ .!

ಲೋಕಾಯುಕ್ತದಿಂದ ಪಾರಾದ ಸಿಎಂ ಸಿದ್ದರಾಮಯ್ಯನವರಿಗೆ ಇ.ಡಿ ಸಂಕಷ್ಟ .!

CM Siddaramaiahto faces ED trouble!

ಬೆಂಗಳೂರು,ಫೆ.21– ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ( ಮೂಡಾ)ದ ಆಕ್ರಮ ನಿವೇಶನ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳಿಂದ ಕ್ಲೀನ್ ಚಿಟ್ ಪಡೆದು ನಿರಾಳರಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಏಕೆಂದರೆ, ಲೋಕಾಯುಕ್ತ ತನಿಖಾಧಿಕಾರಿಗಳ ಬಿ ರಿಪೋರ್ಟ್ ವರದಿಯನ್ನು ಪ್ರಶ್ನಿಸಿ ಜಾರಿ ನಿದೇರ್ಶನಾಲಯ (ಇ.ಡಿ) ಮತ್ತು ದೂರುದಾರ ಸ್ನೇಹಮಯಿ ಕೃಷ್ಣ ಅವರುಗಳು ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಇಲ್ಲವೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಮುಂದಿನ ವಾರ ಇ.ಡಿ ಹಾಗೂ ಸ್ನೇಹಮಯಿ ಕೃಷ್ಣ ಇಬ್ಬರೂ ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಲು ಸಜ್ಜಾಗಿದ್ದಾರೆ. ಇದಕ್ಕಾಗಿ ವಕೀಲರು ಲೋಕಾಯುಕ್ತ ತನಿಖಾ ಅಧಿಕಾರಿಗಳು ಉಲ್ಲೇಖಿಸಿರುವ ಅಂಶಗಳನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಇ.ಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು, ಈ ಹಿಂದೆ ಲೋಕಾಯುಕ್ತ ತನಿಖಾಧಿಕಾರಿಗಳು ಪ್ರಕರಣವೊಂದೆ ಸಂಬಂಧ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿರುವುದನ್ನು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ಇ.ಡಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರುವುದು ಖಚಿತವಾಗಿದೆ.

ಮುಖ್ಯಮಂತ್ರಿಗಳ ಪತ್ನಿ 14 ನಿವೇಶನಗಳನ್ನು ಮುಡಾಗೆ ಹಿಂತಿರುಗಿಸಿದ್ದಾರೆ. ಜೆಟ್ ವಿಮಾನದ ವೇಗದಲ್ಲಿ ಆ ಸೈಟ್ಗಳನ್ನು ವಾಪಸ್ ಪಡೆಯಲಾಗಿದೆ. ಸಾಮಾನ್ಯ ಜನ ಹೋದರೆ ತಿಂಗಳಾದರೂ ಕೆಲಸ ಆಗುವುದಿಲ್ಲ. ಸಿಎಂ ಪತ್ನಿ ಮನವಿ ಕೊಟ್ಟರೆ ಆ ಕ್ಷಣವೇ ಕೆಲಸವಾಗಿದೆ. ಪ್ರಕರಣ ದಾಖಲಿಸಿದಾಗ 14 ನಿವೇಶನ ಮುಖ್ಯಮಂತ್ರಿಗಳ ಪತ್ನಿ ವಶದಲ್ಲಿತ್ತು. ಅದು ಅಪರಾಧದ ಸಂಪತ್ತಾಗಿರುವುದರಿಂದ ತನಿಖೆ ನಡೆಯಬೇಕಾದ ಅಗತ್ಯವಿದೆ. ಇ.ಡಿ ಸಮನ್ಸ್‌ನಲ್ಲಿ ಯಾವುದೇ ಆರೋಪಗಳನ್ನು ಮಾಡಿಲ್ಲ, ಮಾಹಿತಿಗಾಗಿ ಜಾರಿಗೊಳಿಸಿದೆ. ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿರಬಹುದು. ಆದರೆ ಕೋರ್ಟ್ ಇನ್ನೂ ಬಿ ರಿಪೋರ್ಟ್ ಅಂಗೀಕರಿಸಿಲ್ಲ. ವರದಿ ಪ್ರಶ್ನಿಸಲು ಇಡಿಗೂ ಅಧಿಕಾರವಿದೆ ಎಂದು ಪೀಠಕ್ಕೆ ವಿವರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸೇರಿದ 14 ನಿವೇಶನಗಳ ಹಸ್ತಾಂತರದ ಹಿಂದೆ ಹಲವಾರು ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿದೆ ಎಂದು ಇ.ಡಿ(ಜಾರಿ ನಿರ್ದೇಶನಲಯ) ಬಹಿರಂಗಪಡಿಸಿದೆ. ಬೇನಾಮಿ ಹಾಗೂ ಇನ್ನಿತರ ಅವ್ಯವಹಾರಗಳ ಮೂಲಕ 1,098 ನಿವೇಶನಗಳನ್ನು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ ಇದರ ಮೌಲ್ಯ ಬರೋಬ್ಬರಿ 700 ಕೋಟಿ ರೂಪಾಯಿ ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿತ್ತು.

ಮುಡಾದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಹಸ್ತಾಂತರಿಸಿರುವ ಹಿಂದೆ ಹಲವಾರು ಆವ್ಯವಹಾರಗಳು ನಡೆದಿರುವುದಕ್ಕೆ ಹಲವು ಪುರಾವೆಗಳನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉರುಳಾಗಿ ಪರಿಣಮಿಸಿದೆ. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮಾಡಲಾದ ಭೂ ಪರಿವರ್ತನೆಯಲ್ಲಿ ಶಾಸನಬದ್ದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಸಾಕ್ಷ್ಯ ತಿರುಚುವಿಕೆಯಲ್ಲಿ ಸಾಕ್ಷಿ ಲಭಿಸಿದೆ. ಕಚೇರಿ ಕಾರ್ಯ ವಿಧಾನಗಳ ಉಲ್ಲಂಘನೆ, ಅನವಶ್ಯಕ ಒಲವು ತೋರಿರುವುದು, ಪ್ರಭಾವದ ಬಳಕೆ, ಪೋರ್ಜರಿ ಮಾಡಿರುವುದಕ್ಕೆ ಸಾಕ್ಷ್ಯಗಳು ಇ.ಡಿ ತನಿಖೆಯಲ್ಲಿ ಪತ್ತೆಯಾಗಿವೆ ಎಂಬುದನ್ನು ಈ ಹಿಂದೆ ಬಹಿರಂಗಪಡಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಗೆ ನಿವೇಶನ ಸಿಕ್ಕಾಗ ಅವರ ಪುತ್ರ ಯತೀಂದ್ರ ಮುಡಾ ಮಂಡಳಿಯಲ್ಲಿದ್ದರು. ಪತಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಮುಡಾದಿಂದ ಕೆಲವೊಂದು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಜಾಗವನ್ನೇ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಖರೀದಿಸಿದ್ದಾರೆ ಎಂದು ಇ.ಡಿ ತನಿಖೆಯಿಂದ ತಿಳಿದುಬಂದಿದೆ ಎಂಬುದು ತನಿಖಾಧಿಕಾರಿಗಳ ವಾದವಾಗಿದೆ.

2016 ರಿಂದ 2024ರ ವರೆಗೂ ಮುಡಾದಲ್ಲಿ ಆಯುಕ್ತರಾಗಿದ್ದ ಅಧಿಕಾರಿಗಳು 1,098 ಸೈಟ್‌ ಗಳು ದುರ್ಬಳಕೆ ಆಗಿದೆ ಎಂದು ತನಿಖೆ ಮುಂದುವರೆಸಿದ್ದಾರೆ. ಕಾನೂನಿನಲ್ಲಿ ಇ.ಡಿ ತನಿಖಾ ಸಂಸ್ಥೆಗೆ ಲೋಕಾಯುಕ್ತ ಸಲ್ಲಿಕೆ ಮಾಡಿರುವ ಬಿ. ರಿಪೋರ್ಟ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅಧಿಕಾರ ಹೊಂದಿದೆ. ಇದನ್ನೇ ದಾಳ ಮಾಡಿಕೊಂಡಿರುವ ಇ.ಡಿ ದೂರುದಾರ ಸ್ನೇಹಮಯಿ ಕೃಷ್ಣ ಪ್ರೊಟೆಸ್ಟ್ ಅಪ್ಲಿಕೇಷನ್ ಅಂದರೆ, ಬಿ ರಿಪೋರ್ಟ್ ಸ್ವೀಕೃತಿ ಮಾಡಬಾರದು ಎಂದು ಅರ್ಜಿ ಹಾಕಿದರೆ ಇ.ಡಿ ಕೂಡ ಪ್ರತ್ಯೇಕವಾದ ಅರ್ಜಿ ಹಾಕಲು ತಯಾರಿ ನಡೆಸಿದೆ.
ಜೊತೆಗೆ ಬಿ ರಿಪೋರ್ಟ್ ಸಲ್ಲಿಕೆಯಿಂದ ನಮ್ಮ ತನಿಖೆಗೆ ಯಾವುದೇ ತೊಂದರೆ ಇಲ್ಲ ಎಂದು ತನಿಖೆ ಮುಂದುವರೆಸಿದರೆ, ಅತೀ ದೊಡ್ಡ ಸಂಕಷ್ಟ ಸಿಎಂ ಮತ್ತು ಕುಟುಂಬ ಎದುರಿಸಬೇಕಾಗಿದೆ.
ಮುಖ್ಯಮಂತ್ರಿ ಒಳಗೊಂಡಂತೆ ನಾಲ್ವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಗುರುವಾರ ಮೈಸೂರು ಲೋಕಾಯುಕ್ತ ಅಧಿಕಾರಿಗಳು ತನಿಖಾ ವರದಿ ಸಲ್ಲಿಸಿದ್ದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಬೇನಾಮಿ ಆಸ್ತಿ ವಹಿವಾಟು ತಡೆ ಕಾಯ್ದೆ ಹಾಗೂ ಕರ್ನಾಟಕ ಭೂ ಕಬಳಿಕೆ ಕಾಯ್ದೆಗಳು ಒಳಗೊಂಡಂತೆ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಸಿದ್ದರಾಮಯ್ಯ, ಪತ್ನಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಹಾಗೂ ಜಮೀನು ಮಾಲೀಕ ದೇವರಾಜ್ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆ ನಡೆಸಿದ ಮೈಸೂರು ಲೋಕಾಯುಕ್ತ ತನಿಖಾಧಿಕಾರಿ ಎಸ್ಪಿ ಉದೇಶ್ ಸುಮಾರು 11,200 ಪುಟಗಳ 27 ಸಂಪುಟ ಹೊಂದಿರುವ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದರು. ತನಿಖಾ ವರದಿಯಲ್ಲಿ 50 ಮಂದಿ ಹೇಳಿಕೆಗಳನ್ನು ನಮೂದಿಸಲಾಗಿದೆ. ವರದಿ ಜೊತೆಗೆ ಕೆಲ ದಾಖಲಾತಿಗಳನ್ನೂ ಸಲ್ಲಿಸಲಾಗಿದ್ದು, ವರದಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿತ್ತು.

RELATED ARTICLES

Latest News