ಕಲ್ಬುರ್ಗಿ,ನ.6- ಸರ್ಕಾರದ ವಿವಿಧ ಹುದ್ದೆಗಳಿಗೆ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಪಟ್ಟಂತೆ ಕಲ್ಬುರ್ಗಿಯಲ್ಲಿ 13 ಜನ, ಯಾದಗಿರಿಯಲ್ಲಿ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಅಕ್ರಮ ತಡೆಗೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿತ್ತು. 24 ಗಂಟೆಗೂ ಮುನ್ನ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. 200 ಮೀಟರ್ ಅಂತರದಲ್ಲಿ ವಾಹನ ನಿಲುಗಡೆ ನಿಷೇಧ, ಪ್ರತಿಯೊಂದು ವಸತಿ ಗೃಹ ಹಾಗೂ ವಾಹನಗಳ ತಪಾಸಣೆ, ಪರೀಕ್ಷಾ ಕೇಂದ್ರದಲ್ಲಿ ಮೆಟಲ್ ಡಿಟಕ್ಟರ್ ಮತ್ತು ಹ್ಯಾಂಡ್‍ಹೆಲ್ಡ್ ಡಿಟಕ್ಟರ್‍ಗಳನ್ನು ಅಳವಡಿಸಲಾಗಿತ್ತು.
ಅದರ ಹೊರತಾಗಿಯೂ ಅಕ್ರಮ ನಡೆಸುವವರು ವಿಶೇಷವಾದ ಶರ್ಟ್‍ಗಳನ್ನು ಧರಿಸಿದ್ದಾರೆ. ಬ್ಲೂಟೂತ್ ಸಲಕರಣೆ ಅತ್ಯಂತ ಚಿಕ್ಕದಾಗಿದ್ದು, ಪತ್ತೆಹಚ್ಚಲು ಕಷ್ಟಸಾಧ್ಯವಾಗುವಂತೆ ಬಳಕೆ ಮಾಡಿದ್ದಾರೆ. ಆದರೂ ಪೊಲೀಸರು ಮತ್ತು ಪರೀಕ್ಷಾ ಕೇಂದ್ರದ ಉಸ್ತುವಾರಿಗಳು ತೀವ್ರ ತಪಾಸಣೆ ನಡೆಸಿದಾಗ ನಗರದಲ್ಲಿ ಒಂದು ಪ್ರಕರಣ, ಯಾದಗಿರಿಯಲ್ಲಿ ಮೂರ್ನಾಲ್ಕು ಕಡೆ ಅಕ್ರಮಗಳು ಪತ್ತೆಯಾಗಿವೆ. ಕಲ್ಬುರ್ಗಿಯಲ್ಲಿ 13, ಯಾದಗಿರಿಯಲ್ಲಿ 19 ಮಂದಿಯನ್ನು ಬಂಸಲಾಗಿದೆ ಎಂದು ತಿಳಿಸಿದರು.
CIC ಮುಖ್ಯಸ್ಥರಾಗಿ ನೇಮಕಗೊಂಡ ದೇಶದ ಮೊದಲ ದಲಿತ ಅಧಿಕಾರಿ
ಹಿಂದಿನ ಸರ್ಕಾರದ ಅವಧಿಯಲ್ಲಿ ಪರೀಕ್ಷಾ ಅಕ್ರಮಗಳ ತಡೆಗೆ ಮುಂಜಾಗ್ರತೆ ವಹಿಸಿರಲಿಲ್ಲ. ನಾವು ಬಿಗಿ ಕ್ರಮ ಕೈಗೊಂಡಿದ್ದರಿಂದಾಗಿ ಅಕ್ರಮಗಳು ಕಡಿಮೆಯಾಗಿವೆ. ಸಾಮಾನ್ಯವಾಗಿ ಪರೀಕ್ಷೆಗೆ ಶೇ.15ರಿಂದ 20ರಷ್ಟು ಜನ ಗೈರು ಹಾಜರಾಗುತ್ತಾರೆ. ಪರೀಕ್ಷಾ ಅಕ್ರಮ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ಬಾರಿ ಗೈರು ಹಾಜರಿಯ ಪ್ರಮಾಣ ಶೇ.40ರಷ್ಟಾಗಿದೆ ಎಂದು ಹೇಳಿದರು.
ಮೂಲಗಳ ಪ್ರಕಾರ ಪರೀಕ್ಷಾ ಅಕ್ರಮಗಳಲ್ಲಿ ಬಂತರಾಗಿರುವವರ ಪೈಕಿ ಶೇ.90ರಷ್ಟು ಅಫ್ಜಲಪುರ ತಾಲ್ಲೂಕಿನವರಾಗಿದ್ದಾರೆ. ಬಹುತೇಕ ಆರೋಪಿಗಳ ವಾಟ್ಸಪ್‍ಗೆ ಪರೀಕ್ಷೆಯ ಹಿಂದಿನ ದಿನ ಕರೆ ಬಂದಿದೆ. ಕೆಲವರು ಆ ಸಂಖ್ಯೆಯನ್ನು ಸರ್ಕಾರ್ ಎಂದು ಸೇವ್ ಮಾಡಿಕೊಂಡಿದ್ದಾರೆ. ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಜತೆಗೂ ಈ ಸಂಖ್ಯೆಯಲ್ಲಿ ಸಂವಹನ ನಡೆದಿರುವ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.