Thursday, December 7, 2023
Homeರಾಜ್ಯಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಬ್ರೇಕ್

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಬ್ರೇಕ್

ಬೆಂಗಳೂರು, ನ.6- ಕಾಂಗ್ರೆಸ್‍ನ ಶಾಸಕರ ವಿದೇಶಿ ಪ್ರವಾಸ ಸದ್ಯಕ್ಕಿಲ್ಲ. ಮುಂದೆ ಅವಕಾಶ ಬಂದಾಗ ನೋಡೋಣ, ವರಿಷ್ಠರ ಗಮನಕ್ಕೆ ತಂದು ಪ್ರವಾಸ ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾನಮನಸ್ಕರು ಸೇರಿದಾಕ್ಷಣ ಅದನ್ನು ಗುಂಪು ಅಥವಾ ಪಕ್ಷ ವಿರೋಧಿ ಚಟುವಟಿಕೆ ಎಂದು ಬಿಂಬಿಸಲಾಗುವುದಿಲ್ಲ. ಸದ್ಯಕ್ಕೆ ಕದನ ವಿರಾಮ ಜಾರಿಯಲ್ಲಿದೆ, ಎಲ್ಲವೂ ತಣ್ಣಗಿದೆ, ಬಹಳಷ್ಟು ಕೆಲಸ ಮಾಡಬೇಕಿದೆ ಎಂದರು.

ದಲಿತ ಮುಖ್ಯಮಂತ್ರಿ ವಿಚಾರ 2013ರಲ್ಲೂ ಚಾಲನೆಯಲ್ಲಿತ್ತು, ಐದು ವರ್ಷ ಪೂರ್ತಿ ಚರ್ಚೆಯಲ್ಲಿತ್ತು. ಕೊನೆಗೆ ಫಿಚ್ಚರ್ ರಿಲೀಸ್ ಆಗಲಿಲ್ಲ, ಹಾಗಿದೆ ನಮ್ಮ ಪರಿಸ್ಥಿತಿ. 2008ರಿಂದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂದಿತ್ತು ಅವಕಾಶ ಸಿಗಲಿಲ್ಲ, ಪರಮೇಶ್ವರ್ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಿಎಂ ಆಗಲಿಲ್ಲ. ಆ ಸಮುದಾಯದಲ್ಲಿ ಅವಕಾಶಕ್ಕಾಗಿ ಕೂಗು ಕೇಳಿ ಬರುತ್ತಲೇ ಇದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಬೇಕಿದೆ ಎಂದರು.

ವಾಲ್ಮಿಕಿ ಸಮುದಾಯದ ಸ್ವಾಮೀಜಿ ಯವರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಯಾಗಬೇಕು ಎಂದು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಸಮುದಾಯದ ಸಭೆ ನಡೆದಾಗಲೆಲ್ಲಾ ಈ ವಿಚಾರ ಚರ್ಚೆಯಾಗುತ್ತದೆ. ಅದೇ ರೀತಿ ದಲಿತರಲ್ಲಿ, ಲಿಂಗಾಯಿತರಲ್ಲಿ, ಒಕ್ಕಲಿಗರಲ್ಲೂ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇದೆ. ಅದೇ ರೀತಿ ನನ್ನ ಹೆಸರು ರೇಸ್‍ನಲ್ಲಿ ಇದೆ, ಅದರಲ್ಲಿ ವಿಶೇಷವೇನು ಇಲ್ಲ ಎಂದರು.

ಮುಖ್ಯಮಂತ್ರಿಯವರು ಕರೆದಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಲು ಆಗಲಿಲ್ಲ. ಅಂದು ನನಗೆ ಆರೋಗ್ಯ ಸರಿ ಇರಲಿಲ್ಲ, ಹಾಗಾಗಿ ಭಾಗವಹಿಸಲಿಲ್ಲ. ಸಭೆಯಲ್ಲಿ ಇರಲಿಲ್ಲ ಎಂದಾಕ್ಷಣ ನಾವು ಹೊರಗಿದ್ದೇವೆ ಎಂದರ್ಥವಲ್ಲ. ಏನೇ ತೀರ್ಮಾನವಾದರೂ ಅದಕ್ಕೆ ನಾವು ಬದ್ಧರಾಗಿರುತ್ತೇವೆ, ತೀರ್ಮಾನಗಳನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ಎರಡು ಮೂರು ಶಕ್ತಿ ಕೇಂದ್ರಗಳು ಇವೆ ಎಂಬುದು ವದ್ಧಂತಿ ಮಾತ್ರ. ನಮ್ಮಲ್ಲಿ ಇರುವುದು ಒಂದೇ ಶಕ್ತಿ ಕೇಂದ್ರ, ಅದು ದೆಹಲಿಯಲ್ಲಿದೆ. ಅಧಿಕಾರ ಹಂಚಿಕೆಯ ಬಗ್ಗೆ ಯಾರು ಚರ್ಚೆ ಮಾಡಬಾರದು ಎಂಬದಕ್ಕೆ ಎಲ್ಲರೂ ಬದ್ಧರಾಗಿಬೇಕಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಪಂಚರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ರಾಜಕೀಯ ಕಾರಣಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದು ಪ್ರಧಾನಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಹಿಂದೆ ನಾವು ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಪಡೆದ ಹಾಗೂ ಪೇ ಸಿಎಂ ಆರೋಪ ಮಾಡಿದ್ದೇವು. ಪ್ರಧಾನಿಯವರು ಅದನ್ನು ಒಪ್ಪಿಕೊಳ್ಳುತ್ತಾರೆಯೇ, ರಾಜಕೀಯದಲ್ಲಿ ಆರೋಪ ಮಾಡುವುದು ಸುಲಭ ಸಾಬೀತು ಪಡಿಸುವುದು ಕಷ್ಟ ಎಂದು ಪ್ರಶ್ನಿಸಿದರು.

ರಾಜಕೀಯದಲ್ಲಿ ಮಾತನಾಡುವವರಿಗೆ ಪ್ರಾಮುಖ್ಯತೆ ಸಿಗಬಾರದು. ಟಿವಿ ಮುಂದೆ ಬಂದವರು ಮಾತ್ರವೇ ನಾಯಕರಲ್ಲ. ಮಾತನಾಡದವರಿಗೂ ಅವಕಾಶಗಳು ಸಿಗಬೇಕು. ಕೆಲವರಿಗೆ ಪ್ರಾಕ್ಟಿಕಲ್ ಗೋತ್ತಿರುತ್ತದೆ, ಇನ್ನೂ ಕೆಲವರಿಗೆ ಥಿಯೆರಿ ಗೋತ್ತಿರುತ್ತದೆ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದರು.

ಜಾತಿ ಜನಗಣತಿ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಬಳಿಕ ಸಂಪುಟದಲ್ಲಿ ಚರ್ಚೆಯಾಗಬೇಕು. ಒಮ್ಮೇಲೆ ಒಪ್ಪಿಕೊಳ್ಳುವುದಿಲ್ಲ. ವಿಧಾನಮಂಡಲದ ಉಭಯ ಸದನಗಳಲ್ಲೂ ಚರ್ಚೆಯಾಗಬೇಕು. ಅಲ್ಲಿ ಸಮುದಾಯಗಳವಾರು ಇರುವ ಆಕ್ಷೇಪಗಳನ್ನು ಹೇಳಬಹುದಾಗಿದೆ, ಸರಿ ಇದ್ದರೆ ಒಪ್ಪಿಕೊಳ್ಳಬಹುದು, ಇಲ್ಲವಾದರೆ ಮರು ಸಮೀಕ್ಷೆ ನಡೆಸಬಹುದು ಎಂದರು.

ಪ್ಲಾಟ್‍ಫಾರ್ಮ್ ಮೇಲೆ ಬಸ್ ಉರುಳಿ ಇಬ್ಬರ ಸಾವು

ಎಂಟು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಸರಿಯಾಗಿತ್ತು. ಜನಗಣತಿ ವರದಿಗಳನ್ನು ಸಾಮಾನ್ಯವಾಗಿ ಐದಾರು ವರ್ಷಗಳ ಹಿಂದಿನದವುಗಳನ್ನೇ ಪರಿಗಣಿಸಲಾಗುತ್ತದೆ. ಒಕ್ಕಲಿಗ, ಲಿಂಗಾಯಿತ ಸಮುದಾಯಕ್ಕೆ ತಮ್ಮ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂಬ ಆತಂಕ ಇದೆ, ಉಪಜಾತಿಗಳನ್ನು ಕೈ ಬಿಡಲಾಗಿದೆ ಎಂಬ ಆಕ್ಷೇಪ ಇದೆ.

ಈಗಲೂ ಉಪಜಾತಿಗಳನ್ನು ಸೇರಿಸಿ ಲೆಕ್ಕ ಮಾಡಬಹುದು. ವರದಿ ಜಾರಿಯಾದರೆ ರಾಜಕೀಯವಾಗಿ ಮಹತ್ವದ ಬದಲಾವಣೆಯೇನು ಆಗುವುದಿಲ್ಲ. ಹೆಚ್ಚೆಂದರೆ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಬಹುದು. ಬಹಳಷ್ಟು ಸಣ್ಣಪುಟ್ಟ ಜಾತಿಗಳು ಪರಿಗಣನೆಯಾಗಿ ಉಳಿದಿಲ್ಲ. ಎಸ್‍ಸಿ ಎಂದರೆ ನಾಲ್ಕೈದು ಜಾತಿ, ಪರಿಶಿಷ್ಟ ಪಂಗಡ ಎಂದರೆ ಮೂರ್ನಾಲ್ಕು ಸಮುದಾಯಗಳ ಹೆಸರುಗಳಷ್ಟೆ ಕೇಳಿ ಬರುತ್ತವೆ.

50 ಸಾವಿರ, ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಬಹಳಷ್ಟು ಸಮುದಾಯಗಳು ಪರಿಗಣನೆಗೆ ಒಳಗಾಗುತ್ತಿಲ್ಲ. ಈ ಕಾರಣಕ್ಕಾಗಿ ಜಾತಿ ಜನಗಣತಿ ವರದಿ ಚರ್ಚೆಯಾಗಿ ದಾಖಲೆಯಾಗಿ ಉಳಿಯಬೇಕು, ವರದಿಯಿಂದ ಸಾಮಾಜಿಕ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ, ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.

RELATED ARTICLES

Latest News