Wednesday, February 26, 2025
Homeಬೆಂಗಳೂರುಬೆಂಗಳೂರಿಗರಲ್ಲಿ ಪೊಲೀಸರ ಮನವಿ

ಬೆಂಗಳೂರಿಗರಲ್ಲಿ ಪೊಲೀಸರ ಮನವಿ

Police appeal to Bengaluru residents

ಬೆಂಗಳೂರು,ಫೆ.26- ತಮ್ಮ ಸುತ್ತಮುತ್ತ ಘಟಿಸುವ ಅಪರಾಧಗಳ ಬಗ್ಗೆ ತಕ್ಷಣ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದರೆ ಮುಂದೆ ಸಂಭವಿಸಬಹುದಾದಂತಹ ಘಟನೆಗಳನ್ನು ತಪ್ಪಿಸಬಹುದೆಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ ಭ ಜಗಲಾಸರ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಕೆ.ಅಚ್ಚುಕಟ್ಟು ಮತ್ತು ಸುಬ್ರಹಮಣ್ಯಪುರದಲ್ಲಿ ನಡೆದಿದ್ದಂತಹ ಘಟನೆಗಳನ್ನು ವಿವರಿಸಿ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಪ್ರೀತಿಗೆ ಯುವತಿ ನಿರಾಕರಿಸಿದರೆಂಬ ಕಾರಣಕ್ಕೆ ಆಕೆ ತನ್ನಿಂದ ದೂರವಾಗುತ್ತಾಳೆಂದು ಕೋಪಗೊಂಡು ಪ್ರಮುಖ ಆರೋಪಿ ತನ್ನ ಐದು ಮಂದಿ ಸಹಚರರೊಂದಿಗೆ ಮೂರು ಬೈಕ್‌ಗಳಲ್ಲಿ ಹೋಗಿ ಮೊದಲು ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಬಳಿ ಹೋಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರು.

ನಂತರ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ತನ್ನ ಪ್ರೇಯಸಿ ಮನೆ ಬಳಿ ಹೋಗಿ ಗಲಾಟೆ ಮಾಡಿ ಆಕೆಯ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಸಿಕೆ ಅಚ್ಚುಕಟ್ಟು ಘಟನೆಯಾದ ತಕ್ಷಣ ಹಲ್ಲೆಗೊಳಗಾದವರಾಗಲಿ ಅಥವಾ ಅಲ್ಲಿನ ನಿವಾಸಿಗಳ್ಯಾರಾದರೂ ಪೊಲೀಸ್ ಕಂಟ್ರೋಲ್ ರೂಂಗಾಗಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗಾಗಲಿ ಮಾಹಿತಿ ನೀಡಿದ್ದರೆ ಆರೋಪಿಗಳನ್ನು ತಕ್ಷಣ ಬಂಧಿಸಬಹುದಾಗಿತ್ತು ಎಂದು ಡಿಸಿಪಿ ಅವರು ತಿಳಿಸಿದರು.

ಎರಡೂ ಘಟನೆಗಳ ಬಗ್ಗೆ ಪ್ರಕರಣಗಳನ್ನು ದಾಖಲಿಸಿ ನಾಲ್ವರನ್ನು ಬಂಧಿಸಿದ್ದೇವೆ. ಪ್ರಮುಖ ಆರೋಪಿ ವಿರುದ್ಧ 21 ಪ್ರಕರಣ, 2ನೇ ಆರೋಪಿ ವಿರುದ್ಧ 23, ಮೂರನೇ ಆರೋಪಿ ವಿರುದ್ಧ 5 ಪ್ರಕರಣ ಹಾಗೂ ನಾಲ್ಕನೇ ಆರೋಪಿ ವಿರುದ್ಧ 7 ಪ್ರಕರಣಗಳಿವೆ ಎಂದು ಅವರು ತಿಳಿಸಿದರು. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ಹೇಳಿದರು. |

RELATED ARTICLES

Latest News