ಡೆಹ್ರಾಡೂನ್,ಫೆ.28- ಭಾರೀ ಹಿಮಪಾತ ಉಂಟಾದ ಪರಿಣಾಮ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ಬದರೀನಾಥ್ ಧಾಮ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ 57ಕ್ಕೂ ಹೆಚ್ಚು ಕಾರ್ಮಿಕರು ಹಿಮದಡಿಯಲ್ಲಿ ಸಿಲುಕಿಕೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಹಿಮಪಾತದಲ್ಲಿ ಸಿಲುಕಿರುವ ಖಾಸಗಿ ಕಂಪನಿಯ ಕಾರ್ಮಿಕರು ಸಮಾಧಿಯಾಗಿದ್ದಾರೆ ಎಂದು ವರದಿಯಾಗಿದೆ.
ಉತ್ತರಖಂಡ್‌ನ ಮಾಲಾದಿಂದ ಘಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರಮೋದಿ ಅವರು ಉತ್ತರಖಂಡ್ ಮುಖ್ಯಮಂತ್ರಿ ಪುಷ್ಕರ್ ಧಾಮಿ ಜೊತೆ ಮಾತನಾಡಿ ರಕ್ಷಣಾ ಕಾರ್ಯದ ಬಗ್ಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಅಭಯ ನೀಡಿದ್ದಾರೆ.
ಕಾರ್ಮಿಕರೆಲ್ಲರೂ ಖಾಸಗಿ ಕಂಪನಿಗೆ ಸೇರಿದವರಾಗಿದ್ದಾರೆ. ಇವರೆಲ್ಲರೂ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ತೊಡಗಿಸಿಕೊಂಡ ವೇಳೆ ಈ ದುರ್ಘಟನೆ ನಡೆದಿದೆ. ರಾಜ್ಯ ವಿಪ್ಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್ ), ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್), ಜಿಲ್ಲಾಡಳಿತ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಬಾರ್ಡರ್ ರೂಟ್‌್ಸ ಆರ್ಗನೈಜೇಷನ್(ಬಿಅರ್‌ಒ) ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿವೆ.
ಸದ್ಯ ಉತ್ತರಖಂಡನಲ್ಲಿ ಎಡೆಬಿಡದೆ ಹಿಮ ಸುರಿಯುತ್ತಿದ್ದು, ಇಂದು ರಾತ್ರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ರಕ್ಷಣಾ ಕಾರ್ಯಚರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಹಿಮಪಾತದಡಿ ಸಿಲುಕಿದ್ದ 15ಕ್ಕೂ ಹೆಚ್ಚು ಕಾರ್ಮಿಕರನ್ನು ರಕ್ಷಿಸಿ ಹೊರತರಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಹಿಮಪಾತದಿಂದಾಗಿ ಎಲ್ಲೆಡೆ ರಸ್ತೆ ಸಂಚಾರವನ್ನು ಬಂದ ಮಾಡಲಾಗಿದೆ.
ಮಿಂಚಿನ ಕಾರ್ಯಾಚರಣೆ ನಡೆಸಿರುವ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು 10 ಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಹಿಮಪಾತದಡಿ 48ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ರಕ್ಷಿಸಲು ಸ್ಥಳೀಯ ಸರ್ಕಾರ ಶಕ್ತಿ ಮೀರಿ ಪ್ರಯತ್ನ ಮುಂದುವರೆಸಿದೆ. ಸಿಲುಕಿಕೊಂಡಿರುವ 48ಕ್ಕೂ ಹೆಚ್ಚು ಕಾರ್ಮಿಕರನ್ನು ಬದುಕುಳಿಸಲು ಸ್ಥಳೀಯ ಸರ್ಕಾರ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಫ್ ಜೊತೆಗೆ ಗಡಿ ರಸ್ತೆಗಳ ಸಂಘಟನೆಯ ತಂಡಗಳನ್ನು ಸ್ಥಳಕ್ಕೆ ರವಾನಿಸಿದೆ.
ಉತ್ತರಖಂಡ್‌ನ ಚಮೋಲಿ ಜಿಲ್ಲೆಯ ಸುತ್ತಮುತ್ತ ಭಾರೀ ಹಿಮಪಾತವಾಗುತ್ತಿದ್ದು, ಬದ್ರಿನಾಥ್‌ನ ಸುತ್ತಮುತ್ತ ಸಂಚರಿಸದಂತೆ ಪ್ರಯಾಣಿಕರಿಗೆ ನಿರ್ಬಂಧ ಹಾಕಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸುಮಾರು 15ರಿಂದ 20 ಅಡಿ ಹಿಮಪಾತ ಬಿದ್ದಿದೆ ಎಲ್ಲೆಡೆ ಕತ್ತಲು ಕವಿದ ವಾತಾವರಣ ಆವರಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬದರಿನಾಥ್ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.