Saturday, March 1, 2025
Homeಬೆಂಗಳೂರುಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಮೂವರು ನೇಪಾಳಿಗಳ ಬಂಧನ

ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಮೂವರು ನೇಪಾಳಿಗಳ ಬಂಧನ

Three Nepalis arrested

ಬೆಂಗಳೂರು,ಫೆ.28- ಸೆಕ್ಯೂರಿಟಿ ಕೆಲಸಕ್ಕೆಂದು ಭಾರತಕ್ಕೆ ಬಂದು ನಗರದಲ್ಲಿ ಹಗಲು ವೇಳೆ ಸೆಕ್ಯೂರಿಟಿ ಕೆಲಸ ಮಾಡಿ ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಮೂವರು ನೇಪಾಳಿ ಪ್ರಜೆಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿ 10.45 ಲಕ್ಷ ರೂ. ಮೌಲ್ಯದ 212 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಅಮರಜ್ಯೋತಿ ಲೇಔಟ್‌ನ ಮನೆಯೊಂದರ ನಿವಾಸಿ ಮೊದಲನೆ ಮಹಡಿಯ ಮನೆಗೆ ಬೀಗ ಹಾಕಿಕೊಂಡು ಕೆಳ ಮಹಡಿಯಲ್ಲಿ ಮಲಗಿದ್ದಾಗ ಕಳ್ಳರು ಬಾಗಿಲನ್ನು ಒಡೆದು ಒಳನುಗ್ಗಿ ಕೊಠಡಿಯ ಕಬೋರ್ಡ್‌ನಲ್ಲಿಟ್ಟಿದ್ದ 61 ಗ್ರಾಂ ಚಿನ್ನಾಭರಣಗಳು ಹಾಗೂ 3 ಲಕ್ಷನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಮಾರನೆ ದಿನ ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡುಬಂದಿದೆ. ತಕ್ಷಣ ಅವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಬೆಳ್ಳಂದೂರಿನ ಟಿನ್‌ಶೆಡ್, ನ್ಯೂ ಹಾರಿಜನ್ ಕಾಲೇಜು ಬಳಿ ಒಬ್ಬ ವಿದೇಶಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ 2021-22ನೇ ಸಾಲಿನಲ್ಲಿ ಸೆಕ್ಯೂರಿಟಿ ಕೆಲಸಕ್ಕೆಂದು ಭಾರತಕ್ಕೆ ಬಂದಿರುವುದಾಗಿ ತಿಳಿಸಿದ್ದಲ್ಲದೆ ಮನೆಯೊಂದರಲ್ಲಿ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿರುವುದಾಗಿ ಹೇಳಿದ್ದಾನೆ.

ತನ್ನೊಂದಿಗೆ ಇನ್ನು ಮೂವರು ಸಹಚರರು ಭಾಗಿಯಾಗಿರುವುದಾಗಿ ಮತ್ತು ನಗರದ ವಿವಿಧ ಕಡೆ ಮನೆಗಳಲ್ಲಿ ಕನ್ನ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ದೇವರಬೀಸನಹಳ್ಳಿ ರಸ್ತೆ, ಬೆಳ್ಳಂದೂರಿನಲ್ಲಿ ವಾಸವಿರುವ ಸಂಬಂಧಿಕನೊಬ್ಬನಿಗೆ ನೀಡಿರುವುದಾಗಿ ತಿಳಿಸಿದ್ದು, ಆತನಿಂದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆ ಮುಂದುವರೆಸಿದ ಪೊಲೀಸರು ಬೆಳ್ಳಂದೂರಿನ ಟಿನ್ ಶೆಡ್, ನ್ಯೂ ಹಾರಿಜನ್ ಕಾಲೇಜು ಬಳಿ ಇಬ್ಬರು ವಿದೇಶಿಗರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.

ಆರೋಪಿಗಳ ಬಂಧನದಿಂದ ಸಂಪಿಗೆಹಳ್ಳಿ ಠಾಣೆಯ 4 ಹಾಗೂ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ 1 ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 5 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಇನ್ಸ್‌ಪೆಕ್ಟ‌ರ್ ಚಂದ್ರಶೇಖ‌ರ್ ಮತ್ತು ಸಿಬ್ಬಂದಿ ಈ ಕಾರ್ಯಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. |

RELATED ARTICLES

Latest News