ಬೆಂಗಳೂರು,ನ.7- ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ತಕ್ಷಣವೇ ಕಸ ಸುರಿಯುವುದನ್ನು ನಿಲ್ಲಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಿಟ್ಟಗಾನಹಳ್ಳಿ, ಕಣ್ಣೂರು, ಬಂಡೆಹೊಸೂರು ಸೇರಿದಂತೆ ಮತ್ತಿತರ ಕಡೆ ಬಿಬಿಎಂಪಿಯವರು ಪ್ರತಿದಿನ 500 ಟ್ರಕ್‍ಗಳಲ್ಲಿ ಕಸ ತಂದು ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೋಗರುಜನೆಗಳು ಆವರಿಸಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬಿಬಿಎಂಪಿಯು ಸಂಗ್ರಹಿಸುವ ಶೇ.90ರಷ್ಟು ಕಸವನ್ನು ಕಣ್ಣೂರು, ಮಿಟಗಾನಹಳ್ಳಿಯ ಕಲ್ಲು ಕ್ವಾರಿಯಲ್ಲಿ ಘನತ್ಯಾಜ್ಯವನ್ನು ತಂದು ಸುರಿಯುತ್ತಿರುವ ಪರಿಣಾಮ ಕುಡಿಯುವ ನೀರು ಕಲುಷಿತಗೊಂಡಿದ್ದು, ಅಂತರ್ಜಲದ ಮೇಲೂ ಪರಿಣಾಮ ಬೀರಿದೆ.
5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕತ್ತು ಸೀಳಿ ಕೊಂದ ಕಾಮುಕ
ಇತ್ತೀಚಿನ ಕಳೆದ ಹಲವು ತಿಂಗಳಿನಿಂದ ಸಾರ್ವಜನಿಕರಿಗೆ ತಲೆನೋವು, ಮೈಕೈ ಅಲರ್ಜಿ, ಶೀತ, ನೆಗಡಿ, ಕೆಮ್ಮು ಸೇರಿದಂತೆ ಹಲವಾರು ರೋಗರುಜನೆಗಳು ಕಾಣಿಸಿಕೊಂಡಿದ್ದು, ಜನತೆ ಆತಂಕಗೊಂಡಿದ್ದಾರೆ. ಕಣ್ಣೂರು ಹಾಗೂ ಮಿಟಗಾನಹಳ್ಳಿಯ ಕಲ್ಲು ಕ್ವಾರಿಯಲ್ಲಿ ಬಿಬಿಎಂಪಿಯವರು ಸುರಿಯುತ್ತಿರುವ ಘನತ್ಯಾಜ್ಯದಿಂದ ಸುಮಾರು 300 ಕೋಟಿ ಲೀಟರ್ ಲಿಚಿಡ್ ಎಂಬ ವಿಷಕಾರಿ ರಾಸಾಯನಿಕ ನೀರು ಉತ್ಪತ್ತಿಯಾಗುತ್ತದೆ. ಇದರ ಒಂದು ಹನಿ ಭೂಮಿ ಮೇಲೆ ಬಿದ್ದರೆ ಮನುಷ್ಯನ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆ ಎಂದು ಸ್ವತಃ ಪಾಲಿಕೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
2016ರಿಂದಲೂ ಇಲ್ಲಿ ಘನತ್ಯಾಜ್ಯವನ್ನು ಪಾಲಿಕೆ ಅಧಿಕಾರಿಗಳು ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಕೆರೆಗಳು ಕಲುಷಿತಗೊಂಡಿವೆ. ಈ ನೀರನ್ನು ಕುಡಿದು ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಪ್ರತಿದಿನ ಕಸ ಸುರಿಯುತ್ತಿರುವುದರಿಂದ ದುರ್ನಾತ ಬೀರುತ್ತಿದ್ದು, ಜನತೆ ಮೂಗು ಮುಚ್ಚಿಕೊಂಡು ತಿರಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉಸಿರಾಡುವ ಗಾಳಿಯೂ ಕೂಡ ಕಲುಷಿತಗೊಂಡಿರುವುದರಿಂದ ಸಾರ್ವಜನಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಘನತ್ಯಾಜ್ಯವನ್ನು ತಂದು ಸುರಿಯಬೇಡಿ ಎಂದು ಸಾರ್ವಜನಿಕರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪಾಲಿಕೆ ಅಕಾರಿಗಳು ಸಬೂಬು ಉತ್ತರ ನೀಡಿ ಸಾಗ ಹಾಕುತ್ತಿದ್ದಾರೆ. ಸೋಮವಾರ ಮಾಜಿ ಸಚಿವ ಹಾಗೂ ಟಾಸ್ಕ್‍ಫೋರ್ಸ್ ಅಧ್ಯಕ್ಷ ಅರವಿಂದ ಲಿಂಬಾವಳಿ, ಕ್ಷೇತ್ರದ ಶಾಸಕಿ ಮಂಜುಳ, ಇಒ ವಸಂತಕುಮಾರ್, ಕಣ್ಣುರು ಪಂಚಾಯ್ತಿ ಅಧ್ಯಕ್ಷ ಅಶೋಕ್ ಗೌಡ ಸೇರಿದಂತೆ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇಲ್ಲಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಘನತ್ಯಾಜ್ಯದಿಂದ ಉತ್ಪತ್ತಿಯಾಗುವ ಕೊಳಚೆ ನೀರನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡುತ್ತಿಲ್ಲ.ಇದು ಕೆರೆಯೊಡಲು ಸೇರುತ್ತಿದ್ದು, ನೀರೆಲ್ಲ ಕಲುಷಿತಗೊಳ್ಳುತ್ತಿದೆ ಎಂದು ಸಾರ್ವಜನಿಕರು ತುಷಾರ್ ಗಿರಿನಾಥ್ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಘನತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು. ಭವಿಷ್ಯದಲ್ಲಿ ಇದು ಇನ್ನಷ್ಟು ಅನಾಹುತ ಉದ್ಘವಿಸುವ ಸಾದ್ಯತೆ ಇದೆ. ನಮ್ಮ ಮಕ್ಕಳು ಬದುಕಬೇಕಾದರೆ ಇಲ್ಲಿಗೆ ಶಾಶ್ವತ ಪರಿಹಾರವನ್ನು ರೂಪಿಸಬೇಕು ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಸಾರ್ವಜನಿಕರು ಎಚ್ಚರಿಕೆ ಕೊಟ್ಟಿದ್ದಾರೆ.