ಬೆಂಗಳೂರು,ನ.7- ಬಿಜೆಪಿಯವರು ರಾಜಕೀಯವಾಗಿ ಬರ ಅಧ್ಯಯನ ಮಾಡುವ ಬದಲು ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಲಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರದಿಂದ ಅಧಿಕಾರಿಗಳ ತಂಡ ಬಂದು ರಾಜ್ಯದಲ್ಲಿ ಅಧ್ಯಯನ ನಡೆಸಿದೆ. ನಾವು ಕೂಡ ಅಧ್ಯಯನ ನಡೆಸಿದ್ದೇವೆ. ಕೇಂದ್ರದ ತಂಡ ಈವರೆಗೂ ವರದಿ ನೀಡಿಲ್ಲ ಎಂದು ಹೇಳಿದರು.
ಬಿಜೆಪಿಯವರು ಪದೇ ಪದೇ ಅಧ್ಯಯನ ಮಾಡುತ್ತೇವೆ ಎಂದು ಹೇಳುವ ಬದಲು ಕೇಂದ್ರದ ಬಳಿಗೆ ಹೋಗಿ ರಾಜ್ಯಕ್ಕೆ ಬರ ಪರಿಹಾರ ಕೊಡಿಸಲಿ. ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ 33,700 ಕೋಟಿ ರೂ. ನಷ್ಟವಾಗಿದೆ. 17900 ಕೋಟಿ ರೂ.ಗಳ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬಿಜೆಪಿಯ 25 ಮಂದಿ ಸಂಸದರಿದ್ದಾರೆ. ಅವರು ಕೇಂದ್ರದ ಮೇಲೆ ಪ್ರಭಾವ ಬೀರಿ ಹಣಕೊಡಿಸಬೇಕು.ಅದರ ಹೊರತಾಗಿ ರಾಜಕೀಯ ಕಾರಣಕ್ಕೆ ಬರ ಅಧ್ಯಯನ ಮಾಡುವುದಾದರೆ ನಮ್ಮ ತಕರಾರು ಇಲ್ಲ ಎಂದರು.
ಬರ ಅಧ್ಯಯನ ವೈಜ್ಞಾನಿಕವಾಗಿ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಅಧ್ಯಯನ ನಡೆಸಿದ್ದು ಕೇಂದ್ರ ಅಧಿಕಾರಿಗಳ ತಂಡ. ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ ಎಂದು ಗೊತ್ತಿದೆ. ಕುಮಾರಸ್ವಾಮಿ ಅವರು ವೈಜ್ಞಾನಿಕವಾಗಿ ಅಧ್ಯಯನ ನಡೆದಿಲ್ಲ ಎನ್ನುವುದಾದರೆ ಕೇಂದ್ರ ಸರ್ಕಾರವನ್ನು ಟೀಕೆ ಮಾಡಲಿ ಎಂದು ತಿರುಗೇಟು ನೀಡಿದರು.
ಮಾಜಿ ಸಂಸದ ಡಿ.ಬಿ.ಚಂದ್ರೇಗೌಡ ನಿಧನಕ್ಕೆ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದರು. ಹಿರಿಯ ಹಾಗೂ ಬುದ್ದಿವಂತ ರಾಜಕಾರಣಿಯಾಗಿದ್ದ ಚಂದ್ರೇಗೌಡರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಇಂದಿರಾಗಾಂಧಿ ಅವರಿಗಾಗಿ ಬಿಟ್ಟುಕೊಟ್ಟಿದ್ದರು. ಆನಂತರ ಜನತಾದಳಕ್ಕೆ ಬಂದರು . ಸ್ಪೀಕರ್ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದರು. ಮರಳಿ ಕಾಂಗ್ರೆಸ್ ಸೇರಿದ ಚಂದ್ರೇಗೌಡರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಬಿಜೆಪಿಗೆ ಹೋದ ಬಳಿಕ ಸಂಸದರಾ ಆಯ್ಕೆಯಾಗಿದ್ದರು.
ಸಾಹಿತ್ಯದ ಬಗ್ಗೆ ಅಪಾರ ತಿಳುವಳಿಕೆ ಯುಳ್ಳವರಾಗಿದ್ದರು. ಅವರ ನಿಧನದಿಂದಾಗಿ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನಾಳೆ ಮೂಡಿಗೆರೆಯಲ್ಲಿ ನಡೆಯುವ ಅಂತ್ಯಕ್ರಿಯೆಯಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದರು.