ಚಿಕ್ಕಮಗಳೂರು, ಮಾ.14- ತಾಲ್ಲೂಕು ಐ.ಡಿ. ಪೀಠ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ನಾಳೆಯಿಂದ 17 ರವರೆಗೆ ಉರುಸ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ವಾಹನಗಳ ಮುಖಾಂತರ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸುವುದರಿಂದ ಸಂಸ್ಥೆಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು, ಕಳೆದ ವರ್ಷದಲ್ಲಿ ಬಾರಿ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಭೂಕುಸಿತ ಉಂಟಾಗಿರುತ್ತದೆ.
ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನ ಸಂದಣಿಯಾಗಿ ಅನಾನುಕೂಲವಾಗುವ ಸಂಭವವಿರುವುದರಿಂದ ಮಾ.17 ರವರೆಗೆ ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಮತ್ತು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ಉರುಸ್ ಪ್ರಯುಕ್ತ ಆಗಮಿಸುವ ಭಕ್ತಾದಿಗಳು, ಸುತ್ತ ಮುತ್ತಲಿನ ವ್ಯಾಪ್ತಿಯ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವವರು ಮತ್ತು ಈಗಾಗಲೇ ಹೋಮ್ ಸ್ಟೇ /ರೆಸಾರ್ಟ್ಗಳನ್ನು ಬುಕ್ಕಿಂಗ್ ಮಾಡಿಕೊಂಡವರುಗಳನ್ನು ಹೊರತು ಪಡಿಸಿ ಇತರೆ ಯಾವುದೇ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೈಗೊಳ್ಳುವುದನ್ನು ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಕಛೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.